ಹಿರಿಯೂರು:
ನಗರಸಭೆಗೆ 2025-26 ನೇ ಸಾಲಿನಲ್ಲಿ ನಗರಸಭೆಯ ಎಲ್ಲಾ ಮೂಲಗಳಿಂದ ಒಟ್ಟು 6005.79 ಲಕ್ಷ ರೂಗಳ ಆದಾಯವನ್ನು ನಿರೀಕ್ಷಿಸಲಾಗಿದ್ದು, ನಗರದ ಸರ್ವತೋಮುಖ ಅಭಿವೃದ್ಧಿಗೆ 5752.60 ಲಕ್ಷ ರೂಗಳ ಕರಡು ಆಯವ್ಯಯ ಬಜೆಟ್ ಮಂಡಿಸಲಾಗುತ್ತಿದ್ದು, ಉಳಿದಂತೆ 253.19 ಲಕ್ಷ ರೂಗಳ ಉಳಿತಾಯ ಬಜೆಟ್ ಘೋಷಿಸಲಾಗಿದೆ ಎಂಬುದಾಗಿ ನಗರಸಭೆಯ ಅಧ್ಯಕ್ಷರಾದ ಅಜಯ್ ಕುಮಾರ್ ಸಭೆಗೆ ಹೇಳಿದರು.
ನಗರದ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ 2025-26 ನೇ ಸಾಲಿನ ನಗರಸಭೆಯ ಕರಡು ಬಜೆಟ್ ಆಯವ್ಯಯ ಮಂಡನೆ ಸಭೆಯ ಅಧ್ಯ್ಯಯಕ್ಷತೆಯನ್ನು ವಹಿಸಿ, ಕರಡು ಆಯವ್ಯಯ ಬಜೆಟ್ ಅನ್ನು ಸಭೆಯಲ್ಲಿ ಮಂಡಿಸಿ, ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ನಗರಸಭೆಯ 2025-26 ನೇ ಸಾಲಿನ ಆಯವ್ಯಯ ಬಜೆಟ್, ನ್ನು ಅಧಿಕೃತವಾಗಿ ಸಭೆಯಲ್ಲಿ ಮಂಡಿಸುವ ಮೂಲಕ ಅದರ ವಿವರಗಳನ್ನು ಸಭೆಗೆ ತಿಳಿಸಿ ಮಾತನಾಡಿ, ಈ ಸಾಲಿನಲ್ಲಿ ನಗರಸಭೆಯ ಆಸ್ತಿತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಮಳಿಗೆಗಳ ಬಾಡಿಗೆ ಸೇರಿದಂತೆ ವಿವಿಧ ಆದಾಯ ಮೂಲಗಳಿಂದ ಒಟ್ಟು 26 ಕೋಟಿ 36 ಲಕ್ಷ ರೂಗಳ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದರಲ್ಲದೆ,
ಇದರ ಜೊತೆಗೆ ಸರ್ಕಾರಿ ಅನುದಾನಗಳಾದ ಎಸ್.ಎಫ್.ಸಿ ಅನುದಾನ 250 ಲಕ್ಷ ರೂಗಳು, ಎಸ್.ಎಫ್.ಸಿ ವಿಶೇಷ ಅನುದಾನ 200 ಲಕ್ಷ ರೂಗಳು, ಎಸ್.ಎಫ್.ಸಿ ಕುಡಿಯುವ ನೀರಿನ ಅನುದಾನ 10 ಲಕ್ಷ ರೂಗಳು, ಸೇರಿದಂತೆ 15 ನೇ ಹಣಕಾಸಿನ ಯೋಜನೆಯ 500 ಲಕ್ಷ ರೂಗಳ ಅನುದಾನಗಳನ್ನು ಒಟ್ಟುಗೂಡಿಸಿ, ಈ ಸಾಲಿನ ಆಯವ್ಯಯ ಬಜೆಟ್ ತಯಾರಿಸಿದ್ದು, ಸರ್ಕಾರದ ವಿವಿಧ ಯೋಜನೆಗಳಿಂದ ಬರುವ ಅನುದಾನಕ್ಕೆ ಅನುಗುಣವಾಗಿ ಹೊಸಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲು ಅಂದಾಜಿಸಲಾಗಿದೆ ಎಂಬುದಾಗಿ ಹೇಳಿದರು.
ನಗರದ ನಾಗರೀಕರಿಗೆ ನೀರು ಸರಬರಾಜು ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ, ಪೈಪ್ ಲೈನ್, ಯಂತ್ರೋಪಕರಣ, ನೀರು ಶುದ್ಧೀಕರಣ ಘಟಕಗಳನ್ನು ತೆರೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಈ ನಿಟ್ಟಿನಲ್ಲಿ ಒಟ್ಟಾರೆಯಾಗಿ 113.00 ಲಕ್ಷರೂಗಳನ್ನು ನಗರಸಭೆಯ ನೀರಿನ ನಿಧಿಯ ಹಾಗೂ 15 ನೇ ಹಣಕಾಸುಅನುದಾನ ಮೀಸಲಿರಿಸಿ, ನಗರದ ನಾಗರೀಕರಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಲಾಗುವುದು ಎಂದರು.
ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ 258.00 ಲಕ್ಷ ರೂಗಳನ್ನು ಕಾಯ್ದಿರಿಸಲಾಗಿದ್ದು, ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘಿಸಿದರಿಗೆ ದಂಡ ವಿಧಿಸುವುದು, ಚಿಕನ್, ಮಟನ್, ಸೆಂಟರ್ ಬಾರ್ ಅಂಡ್ ರೆಸ್ಟೋರೆಂಟ್, ಕಲ್ಯಾಣಮಂಟಪ ಸೇರಿದಂತೆ ಹೆಚ್ಚುಕಸ ಉತ್ಪಾದಕರಿಂದ ತ್ಯಾಜ್ಯವನ್ನು ನೇರವಾಗಿ ಸಂಗ್ರಹಿಸಿ, ಮಾಸಿಕ ನಿರ್ವಹಣಾ ಶುಲ್ಕ ಸಂಗ್ರಹಿಸಲಾಗುವುದಲ್ಲದೆ ವಾರ್ಡ್ ಮಟ್ಟದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆ ಕೇಂದ್ರಗಳನ್ನು ತೆರೆಯುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡಲಾಗುವುದು,
ನಗರಸಭೆ ನಿಧಿಯಿಂದ ನಗರದಲ್ಲಿ ಈ ಸಾಲಿನಲ್ಲಿ ವಿವಿಧ ಬಡಾವಣೆಗಳಿಗೆ ಹೊಸಹೊಸ ಬೀದಿದೀಪಗಳ ಅಳವಡಿಕೆ ಮತ್ತು ನಿರ್ವಹಣೆಗಾಗಿ ವಾರ್ಷಿಕ ಹೊರಗುತ್ತಿಗೆ ನೀಡಲು ನಿರ್ಧರಿಸಲಾಗಿದ್ದು, ಸುಮಾರು 65 ಲಕ್ಷ ರೂಗಳನ್ನು ಕಾಯ್ದಿರಿಸಲಾಗಿದ್ದು, ಅಲ್ಲದೆ ವಿದ್ಯುತ್ ಕಂಬಗಳ ಸ್ಥಳಾಂತರ, ಹೊಸ ಕಂಬಗಳ ಅಳವಡಿಕೆಗಾಗಿ ಸುಮಾರು 10 ಲಕ್ಷ ರೂಗಳನ್ನು, ಎಸ್.ಎಫ್.ಸಿ. ವಿದ್ಯುತ್ ನಿಧಿಯಿಂದ ಬೀದಿದೀಪಗಳ ವಿದ್ಯುತ್ ಶುಲ್ಕ ಭರಿಸಲು ಸುಮಾರು 500 ಲಕ್ಷ ರೂಗಳನ್ನು ಕಾಯ್ದಿರಿಸಲಾಗಿದೆ ಎಂದರು.
ನಗರದಲ್ಲಿ ರಸ್ತೆ, ಸೇತುವೆ, ಚರಂಡಿ, ಪಾದಚಾರಿ ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು, 2025-26 ನೇ ಸಾಲಿನ ಹಣಕಾಸು ಯೋಜನೆಯಡಿಯಲ್ಲಿ ಹಾಗೂ ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ರಸ್ತೆಗಳ ನಿರ್ಮಾಣಕ್ಕೆ 350.00 ಲಕ್ಷಗಳು, ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ 250.00 ರೂಗಳು, ಮಳೆ ನೀರು ಚರಂಡಿಗೆ 150.00 ಲಕ್ಷ ರೂಗಳು, ಪಾದಚಾರಿ ರಸ್ತೆ ನಿರ್ಮಾಣಕ್ಕೆ 50.00 ಲಕ್ಷ ರೂಗಳು, ಸಂಚಾರಿ ವ್ಯವಸ್ಥೆಗೆ ಅಗತ್ಯವಿರುವ ಕಾಮಗಾರಿಗೆ ಸುಮಾರು 10.00 ಲಕ್ಷರೂಗಳನ್ನು ಮೀಸಲಿರಿಸಲಾಗಿದೆ ಎಂಬುದಾಗಿ ಹೇಳಿದರು.
ಮಹಾಯೋಜನೆ ವಿಶೇಷ ಅನುದಾನದಲ್ಲಿ ನಗರವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನವನಗಳು , ಹಾಗೂ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಸುಮಾರು 550.00 ಲಕ್ಷ ರೂಗಳನ್ನು ಮೀಸಲಿರಿಸಲಾಗಿದ್ದು, ನಗರದ ಒಳಚರಂಡಿ ಯೋಜನೆ ಕೈಗೊಳ್ಳುವ ಬಗ್ಗೆ ಸರ್ಕಾರದಿಂದ ಪ್ರಸ್ತಾವನೆ ಮಂಜೂರಾಗಿದ್ದು, ಸರ್ಕಾರದ ಹಂತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಾಗರೀಕರ ಕಲ್ಯಾಣಾಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಹಾಗೂ ಸಾಮಾನ್ಯ ವರ್ಗದ ಮತ್ತು ಅಂಗವಿಕಲರಿಗೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಸಾಲಸೌಲಭ್ಯಗಳು, ವೈದ್ಯಕೀಯ ವೆಚ್ಚಗಳು, ವಿದ್ಯಾಭ್ಯಾಸ, ಸೇರಿದಂತೆ ಇನ್ನಿತರೆ ಸೌಲಭ್ಯಗಳಿಗಾಗಿ ಸುಮಾರು 79.00 ಲಕ್ಷ ರೂಗಳನ್ನು ಮೀಸಲಿರಿಸಿದ್ದು, ಶೇ.24.10ರ ಯೋಜನೆಯಡಿಯಲ್ಲಿ ರೂ 48.00 ಲಕ್ಷ ರೂಗಳನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದವರ ಕಲ್ಯಾಣಾಭಿವೃದ್ಧಿಗಾಗಿ ಕಾಯ್ದಿರಿಸಲಾಗಿದೆ ಎಂದರಲ್ಲದೆ,
ನಗರದ ಇತರೆ ಬಡ ಜನಾಂಗದ ವರ್ಗದವರ ಕಲ್ಯಾಣಾಭಿವೃದ್ಧಿಗಾಗಿ ನಾಗರೀಕರ ಕಲ್ಯಾಣಾಭಿವೃದ್ಧಿ ಮತ್ತು ಸೌಲಭ್ಯಗಳ ಯೋಜನೆಯಡಿಯಲ್ಲಿ ಶೇಕಡಾ 7.25 ಯೋಜನೆಯಲ್ಲಿ ರೂ18.00 ಲಕ್ಷ ರೂಗಳು ಕಾಯ್ದಿರಿಸಲಾಗಿದ್ದು, ಶೇಕಡಾ 5 ರ ಯೋಜನೆಯಲ್ಲಿ ಅಂಗವಿಕಲರ ಕಲ್ಯಾಣಾಭಿವೃದ್ಧಿಗಾಗಿ 13.00 ರೂ ಲಕ್ಷಗಳನ್ನು ಕಾಯ್ದಿರಿಸಲಾಗಿದ್ದು, ಶೇಕಡಾ 1 ರ ಯೋಜನೆಯಲ್ಲಿ ಕಲೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1.00 ಲಕ್ಷ ರೂಗಳನ್ನು ಕಾಯ್ದಿರಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಈ ಎಲ್ಲಾ ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಂಡು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಹಿರಿಯೂರು ನಗರವನ್ನು ಸ್ವಚ್ಛ, ಹಾಗೂ ಸುಂದರ ನಗರವನ್ನಾಗಿ ನಿರ್ಮಾಣ ಮಾಡಲು ನಗರಸಭೆಯ 2025-26 ನೇ ಸಾಲಿನ ಆಯವ್ಯಯವನ್ನು ಸಭೆಗೆ ಮಂಡಿಸಲಾಗಿದ್ದು, ಮಾನ್ಯ ಗೌರವಾನ್ವಿತ ಅಧ್ಯಕ್ಷರು ಹಾಗೂ ಉಪಾಧ್ಯ್ಕ್ಷರು ಹಾಗೂ ಸರ್ವಸದಸ್ಯರು ಅನುಮೋದಿಸಬೇಕು ಎಂಬುದಾಗಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಅನಿಲ್ ಕುಮಾರ್ ಸಭೆಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ “ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸೋಣ, ಸ್ವಚ್ಛ, ಸುಂದರ, ನಿರ್ಮಲ, ನಗರ ನಿರ್ಮಾಣಕ್ಕೆ ಪಣತೊಡೋಣ” ಎಂಬ ಘೋಷವಾಕ್ಯದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
ಈ ಬಜೆಟ್ ಮಂಡನೆ ಸಭೆಯಲ್ಲಿ ನಗರಸಭೆಯ ಪೌರಾಯುಕ್ತರಾದ ಎ.ವಾಸಿಂ, ನಗರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಸಿ.ಅಂಬಿಕಾ, ನಗರಸಭೆಯ ಸದಸ್ಯರುಗಳಾದ ಬಿ.ಎನ್.ಪ್ರಕಾಶ್, ಎಂ.ಡಿ.ಸಣ್ಣಪ್ಪ, ತಿಪ್ಪೇಸ್ವಾಮಿ, ಗುಂಡೇಶ್ ಕುಮಾರ್, ವಿಠ್ಠಲ್ ಪಾಂಡುರಂಗ, ಮಹೇಶ್ ಪಲ್ಲವ, ಶ್ರೀಮತಿ ಶಿವರಂಜಿನಿಯಾದವ್, ಶ್ರೀಮತಿ ಶಂಷುನ್ನೀಸಾ, ಶ್ರೀಮತಿ ಮೊದಲಮರಿಯಾ, ಶ್ರೀಮತಿ ರತ್ನಮ್ಮ, ಶ್ರೀಮತಿ ಮಂಜುಳ, ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಲೆಕ್ಕಅಧೀಕ್ಷಕರಾದ ಗೋವಿಂದರಾಜು, ಜನಾರ್ಧನ್, ಇಂಜಿನಿಯರ್ ರಾಜು, ವ್ಯವಸ್ಥಾಪಕಿ ಮಂಜುಳ, ಆರೋಗ್ಯ ನಿರೀಕ್ಷಕಿ ಮೀನಾಕ್ಷಿ, ಸೇರಿದಂತೆ ನಗರಸಭೆ ನೌಕರರು ಹಾಗೂ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.



About The Author
Discover more from JANADHWANI NEWS
Subscribe to get the latest posts sent to your email.