ಚಿತ್ರದುರ್ಗ:
ಆಶುಕವನಗಳಲ್ಲಿ ತತ್‌ಕ್ಷಣಕ್ಕೆ ಹೊಳೆದ ಭಾವನೆಗಳನ್ನು ಅಭಿವ್ಯಕ್ತಿಸುವುದು ವಿರಳವಾದ ಕಲೆ. ಅಂತಹ ವಿರಳ ಪ್ರತಿಭೆ ಹೊಂದಿರುವವರು ಕವಿ ತಿಪ್ಪೇಸ್ವಾಮಿ ಬಿ.ಜಿ. ಆಗಿದ್ದು, ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಒಳಗೊಂಡಿವೆ ಎಂದು ವಿಮರ್ಶಕರು, ಪುಸ್ತಕಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕರಾದ ಡಾ. ಎಂ. ವೇದಾಂತ್ ಏಳಂಜಿ ಹೇಳಿದರು.
ನಗರದ ಲಿಟಲ್ ಹೇವನ್ ಪಂಕ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಆಶುಕವನ ಸಂಕಲನ ‘ಪತಂಗ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೀತಿ–ಪ್ರೇಮ, ವಿಜ್ಞಾನ, ಪ್ರಾಣಿ–ಪಕ್ಷಿ, ಸಂಭ್ರಮ, ಯುಗಾದಿ, ಹೊಸವರ್ಷ, ಪಠ್ಯಪುಸ್ತಕ, ಶಾಲಾ ಕೊಠಡಿ, ಬಾಲ್ಯ, ಯೌವ್ವನ, ಕಟ್ಟಡ, ಸಿನಿಮಾ ಸೇರಿದಂತೆ ಹಲವು ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಕವಿ ಕಿರುಗವನಗಳನ್ನು ರಚಿಸಿದ್ದು, ಕೆಲವೆಡೆ ಗಂಭೀರವಾಗಿ, ಇನ್ನೂ ಕೆಲವೆಡೆ ಹಾಸ್ಯಭರಿತ ಹಾಗೂ ವಿಡಂಬನಾತ್ಮಕವಾಗಿ ಬರೆದು ಕಿರುಗವನಗಳಲ್ಲಿ ಹಿರಿದಾದ ಅರ್ಥವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಅನ್ಯಜ್ಞಾನ ಶಿಸ್ತಿನಲ್ಲಿ ಕಲಿತ ಶಿಕ್ಷಕರು ಕನ್ನಡದಲ್ಲಿ ಕಾರ್ಯನಿರ್ವಹಿಸುವುದು ಭಾಷೆಯನ್ನು “ಅನ್ನದ ಭಾಷೆ”ಯಾಗಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕವಿ ತಿಪ್ಪೇಸ್ವಾಮಿ ಅವರ ಸಾಹಿತ್ಯ ಸೇವೆ ಶ್ಲಾಘನೀಯವಾಗಿದೆ. ಪ್ರಾದೇಶಿಕತೆಗೆ ಒತ್ತುಕೊಟ್ಟು ಬರೆಯುವ ಲೇಖಕರು ಕನ್ನಡಕ್ಕೆ ಹೊಸ ಭರವಸೆಯಾಗಿದ್ದು, ಇನ್ನಷ್ಟು ಎಚ್ಚರಿಕೆಯಿಂದ ಹಾಗೂ ಹೊಣೆಗಾರಿಕೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ‘ವಿಜ್ಞಾನ ಉತ್ತರ ಸಿರಿ’ ಕೃತಿಯು ವಿದ್ಯಾರ್ಥಿಗಳು ಹಾಗೂ ಹಿರಿಯರಿಗೆ ಉಪಯುಕ್ತವಾಗಿದ್ದು, ವಿಜ್ಞಾನವನ್ನು ಸರಳವಾಗಿ ಅರ್ಥೈಸುವಂತೆ ರೂಪಿಸಲಾಗಿದೆ ಎಂದರು.
ಮತ್ತೊಬ್ಬ ಅತಿಥಿಯಾದ ಗಾಂಧೀವಾದಿ ಡಾ. ಎಚ್.ಕೆ.ಎಸ್. ಸ್ವಾಮಿ ಮಾತನಾಡಿ, ಚರಕದ ಮಹತ್ವವನ್ನು ವಿವರಿಸಿ, ಕನ್ನಡ ಉಳಿವಿಗೆ ವಿಜ್ಞಾನ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಆಧುನಿಕ ಯುಗದಲ್ಲಿ ಬೆಲೆ ಏರಿಕೆಗಳ ನಡುವೆಯೂ ಸಹಜ ಜೀವನ ನಡೆಸುವ ಅಗತ್ಯತೆಯನ್ನು ವಿವರಿಸಿದರು.
ಪತಂಗ ಕೃತಿಕಾರರಾದ ತಿಪ್ಪೇಸ್ವಾಮಿ ಬಿ.ಜಿ. ಮಾತನಾಡಿ, “ಮನಸ್ಸಿದ್ದರೆ ಮಾರ್ಗ” ಎಂಬುದೇ ತಮ್ಮ ಜೀವನದ ಧ್ಯೇಯವಾಕ್ಯವಾಗಿದ್ದು, ಅದರಿಂದಲೇ ಆಶುಕವನ ಸಂಕಲನ ಪತಂಗ ಹಾಗೂ ವಿಜ್ಞಾನ ಉತ್ತರ ಸಿರಿ ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಲ್ಯಾಣಶೆಟ್ಟಿ ಅವರು ಎರಡೂ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಲೇಖಕರ ಕವನಗಳು ಅರ್ಥಪೂರ್ಣವಾಗಿದ್ದು ಕನ್ನಡ ಭಾಷೆಯ ಬೆಳವಣಿಗೆಗೆ ಇಂತಹ ಸಾಹಿತಿಗಳ ಕೊಡುಗೆ ಅಗತ್ಯವಾಗಿದೆ. ಕಿರುಗವನಗಳು ಅನೇಕ ವಿಷಯಗಳನ್ನು ತಿಳಿಸುವುದರ ಜೊತೆಗೆ ನೈತಿಕ ಬದುಕಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಪ್ರವೀಣ ಬೆಳೆಗೆರೆ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮಂಜುನಾಥ ವಿ.ಎಸ್., ಮಹಾಂತೇಶ್ ಎನ್.ಟಿ., ರಮೇಶ್ ಅಯ್ಯನಹಳ್ಳಿ, ಶಿಕ್ಷಣ ಸಂಯೋಜಕ ಮಾರುತಿಭಂಡಾರಿ, ಶಿವಕುಮಾರ್, ತಿಪ್ಪೇಸ್ವಾಮಿ ಆರ್., ಗಂಗಾಧರಪ್ಪ ಬಿ., ಮಂಜುಳಮ್ಮ ಪಿ.ಎಂ., ಕೃಷ್ಣಪ್ಪ, ತಿಪ್ಪಮ್ಮ, ರೇಖಾ ಕೆ., ವಿಶೃತ್ ಕುಮಾರ ಜಿ.ಟಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.