ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:
ಪ್ರತಿಯೊಬ್ಬ ನಾಗರಿಕನಿಗೂ ಕಾನೂನು ಅರಿವು ಅಗತ್ಯವಾಗಿದ್ದು, ಕಾನೂನು ತಿಳುವಳಿಕೆ ಇಲ್ಲದಿದ್ದರೆ ಸಮಾಜದಲ್ಲಿ ಅನಾಹುತಗಳು ಹಾಗೂ ಸಮಸ್ಯೆಗಳು ಉಂಟಾಗುತ್ತವೆ. ನಾವು ಕಾನೂನಿನ ಅಡಿಯಲ್ಲಿ ಬದುಕಬೇಕಾಗಿದ್ದು, ಕಾನೂನು ಹೇಳಿದಂತೆ ಆಡಳಿತ ನಡೆಯಬೇಕು ಎಂದು ಹೊಸದುರ್ಗ ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಕೆ. ಬೇನಾಳ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಗಣೇಶ ಸದನ ಟ್ರಸ್ಟ್ ಹಾಗೂ ವರ್ತಕರ ಸಂಘದ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಶ್ರೀ ಗಣೇಶ ಸದನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನ ಮತ್ತು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವಾಗಲಿ, ಯಾವುದೇ ರಾಜಕೀಯ ಪಕ್ಷವಾಗಲಿ, ಯಾರೇ ಆಗಲಿ ಕಾನೂನನ್ನು ಮೀರಿ ಆಡಳಿತ ನಡೆಸಲು ಅವಕಾಶವಿಲ್ಲ. ವಾರ್ಷಿಕ ಆದಾಯ ಮೂರು ಲಕ್ಷ ರೂ. ಒಳಗಿರುವವರಿಗೆ ಉಚಿತ ಕಾನೂನು ನೆರವು ಲಭ್ಯವಿದ್ದು, ಅನ್ಯಾಯಕ್ಕೆ ಒಳಗಾದ ಬಡವರು ಸರ್ಕಾರಿ ವಕೀಲರ ಮೂಲಕ ನ್ಯಾಯ ಪಡೆಯಬಹುದು ಎಂದರು. ವ್ಯಾಪಾರಸ್ಥರು ಗ್ರಾಹಕರಿಗೆ ವ್ಯವಹಾರದಲ್ಲಿ ಯಾವುದೇ ರೀತಿಯ ಮೋಸ ಅಥವಾ ಅನ್ಯಾಯ ಮಾಡಬಾರದು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಕಾನೂನುಬದ್ಧವಾಗಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎ.ಎಲ್. ಬೊಮ್ಮಣ್ಣ ಮಾತನಾಡಿ, ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಯಾರೂ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಹಾಗೂ ಕಾನೂನು ಮೀರಿ ಯಾವುದೇ ಕಾರ್ಯಗಳನ್ನು ಮಾಡಬಾರದು ಎಂದು ಎಚ್ಚರಿಸಿದರು.
ಪ್ಯಾನಲ್ ವಕೀಲರಾದ ಪಿ.ಕೆ. ಪಂಚಾಕ್ಷರಪ್ಪ ಅವರು ವಿಶ್ವ ಮಾನವ ಹಕ್ಕುಗಳ ದಿನದ ಮಹತ್ವದ ಬಗ್ಗೆ ಹಾಗೂ ಕೆ.ಟಿ. ಮಮತ ಅವರು ರಾಷ್ಟ್ರೀಯ ಗ್ರಾಹಕರ ದಿನದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಸೀತಾ ರಾಘವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಡಿ. ಆದಿರಾಜಯ್ಯ, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಇ.ಟಿ. ಬಾಹುಬಲಿ, ವರ್ತಕರಾದ ಬಿ.ವಿ. ಕುಶ್‌ಕುಮಾರ್, ಇ.ವಿ. ಅಜ್ಜಪ್ಪ ಸೇರಿದಂತೆ ಗ್ರಾಹಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.