ಚಳ್ಳಕೆರೆ:
ಯಜ್ಞ, ತಪಸ್ಸು ಹಾಗೂ ದಾನದಿಂದ ಮಾತ್ರ ಮಾನವನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯ ಎಂದು ಶ್ರೀನರಹರಿ ಸದ್ಗುರು ಪೀಠದ ಪೀಠಾಧ್ಯಕ್ಷರಾದ ಡಾ. ವೈ. ರಾಜರಾಮ ಸ್ವಾಮೀಜಿ ಹೇಳಿದರು.
ನಗರದ ಪಾವಗಡ ರಸ್ತೆದಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ತಾಲೂಕಿನ ಪ್ರಸಿದ್ಧ ಜಾತ್ರಾ ಸ್ಥಳಗಳು ಹಾಗೂ ಧಾರ್ಮಿಕ ದೇವತಾರಾಧನೆಗಳ ಮಾಹಿತಿಯನ್ನು ಒಳಗೊಂಡ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯಜ್ಞ ಎನ್ನುವುದನ್ನು ಕಠಿಣ ಅರ್ಥದಲ್ಲಿ ಗ್ರಹಿಸಬಾರದು. ಒಳ್ಳೆಯ ಕಾರ್ಯ ಮಾಡಲು ತೆಗೆದುಕೊಳ್ಳುವ ಪ್ರತಿಜ್ಞೆಯೇ ಯಜ್ಞ.
ತಪಸ್ಸು ಎಂದರೆ ಮನಸ್ಸನ್ನು ಕೇಂದ್ರೀಕರಿಸಿ ಕಾರ್ಯಸಾಧನೆಗೆ ತೊಡಗುವುದು.
ತಿಳಿದ ವಿಚಾರ ಹಾಗೂ ನಮ್ಮಲ್ಲಿರುವ ಸಂಪನ್ಮೂಲವನ್ನು ಇತರರ ಕಷ್ಟ ನಿವಾರಣೆಗೆ ಸ್ವಲ್ಪವಾದರೂ ದಾನ ಮಾಡುವುದರಿಂದ ಭಗವಂತನ ಅನುಗ್ರಹ ದೊರೆಯುತ್ತದೆ ಎಂದು ತಿಳಿಸಿದರು.
ಬಯಲುಸೀಮೆಯ ಈ ತಾಲೂಕಿನಲ್ಲಿ ಸಾಯಿ ಮಂದಿರ ಸ್ಥಾಪನೆಯಿಂದ ಶಿರಡಿ ಸಾಯಿಬಾಬಾ ಭಕ್ತರಿಗೆ ಸ್ಥಳೀಯವಾಗಿ ದರ್ಶನ ಪಡೆಯುವ ಸೌಭಾಗ್ಯ ಲಭಿಸಿದೆ.
ಧಾರ್ಮಿಕ ಪುಣ್ಯಕ್ಷೇತ್ರಗಳಿಂದ ಜೀವನಕ್ಕೆ ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ. ಇಂತಹ ಕ್ಷೇತ್ರಗಳಲ್ಲಿ ಮನಸ್ಸನ್ನು ಶುದ್ಧಪಡಿಸಿಕೊಂಡು ಸಮಾಜದ ಬದುಕನ್ನು ಅರ್ಥಮಾಡಿಕೊಳ್ಳಬೇಕು ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಶ್ರೀ ವೆಂಕಟ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಸಾಯಿ ಮಂದಿರಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಭಕ್ತರ ಇಷ್ಟಾರ್ಥಗಳು ಈಡೇರುವ ಕೇಂದ್ರವಾಗಿ ಮಂದಿರ ಬೆಳೆಯುತ್ತಿದೆ.
ಸಾಯಿ ಮಂದಿರದ ಪೂಜಾ ಕಾರ್ಯಗಳು ಹಾಗೂ ತಾಲೂಕಿನ ಜಾತ್ರಾ ಮಹೋತ್ಸವಗಳ ಮಾಹಿತಿಯನ್ನು ಒಳಗೊಂಡಂತೆ ಕ್ಯಾಲೆಂಡರ್ ಮುದ್ರಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲಧಾರಿಗಳಿಗೆ ಪಡಿ ಪೂಜೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾಯಿ ಟ್ರಸ್ಟ್ ಉಪಾಧ್ಯಕ್ಷ ಮುಸಲ್ಗುಮ್ಮೆ ಜಗದೀಶ್, ಬಿ.ಸಿ. ವೆಂಕಟೇಶ್ ಮೂರ್ತಿ, ಸತೀಶ್ ಕುಮಾರ್, ವಿಷ್ಣುಮೂರ್ತಿ ರಾವ್, ಮೃತ್ಯುಂಜಯ ಟ್ರಸ್ಟ್ ಸದಸ್ಯರಾದ ಕಾರ್ತಿಕ್ ಎಸ್., ಮೂರ್ತಿ, ನಾಗೇಶ್ ಬಿ.ವಿ., ಚಿದಾನಂದಮೂರ್ತಿ, ರವಿಪ್ರಸಾದ್, ಶ್ರೀನಾಥ್, ವಿಕಾಸ್, ರಾಘವೇಂದ್ರ ಸೇರಿದಂತೆ ಅನೇಕ ಸಾಯಿ ಸದ್ಭಕ್ತರು ಉಪಸ್ಥಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.