
ಹೊಸದುರ್ಗ: ದೇಶದ ಆಡಳಿತ ನಿಯಂತ್ರಿಸುವುದೇ ಕಾನೂನು. ಕಾನೂನು ನಿರ್ಮಾಣಕ್ಕೆ ಅಡಿಪಾಯ ಸಂವಿಧಾನ. ದೌರ್ಜನ್ಯ ತಡೆ ಕಾಯ್ದೆ ಸೇರಿ ಎಲ್ಲಾ ಕಾನೂನುಗಳ ರಚನೆ ಆಗಿರುವುದು ಸಂವಿಧಾನದಡಿ. ಪ್ರತಿಯೊಬ್ಬರೂ ಸಮಾನರಲ್ಲಿ ಸಮಾನರೆಂದು ಸಂವಿಧಾನ ತಿಳಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವೈ.ಕೆ.ಬೇನಾಳ ಹೇಳಿದರು.
ಪಟ್ಟಣದ ಜೆಎಂಎಫ್ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಜನೆ ಇಲಾಖೆ ವತಿಯಿಂದ ಆಯೋಜಿಸಿದ್ದ ೭೫ನೇ ವರ್ಷದ ಸಂವಿಧಾನ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಪ್ರತಿಯೊಬ್ಬರೂ ಸಂಭ್ರಮಿಸುವ ದಿನ. ಏಕೆಂದರೆ ಸಂವಿಧಾನ ಇರುವುದರಿಂದಲೇ ಎಲ್ಲರೂ ಸುರಕ್ಷಿತವಾಗಿದ್ದೇವೆ. ಕಾನೂನು ರಚಿಸುವ ಅಧಿಕಾರವನ್ನು ಸರಕಾರಕ್ಕೆ ಕೊಟ್ಟಿರುವುದು ನಮ್ಮ ಸಂವಿಧಾನ. ಪ್ರತಿಯೊಂದು ಕಾನೂನು ಸಂವಿಧಾನದ ತಳಹದಿಯಲ್ಲಿದೆ. ಯಾವುದೇ ವ್ಯಕ್ತಿ, ಪಕ್ಷ ಕಾನೂನಿನ ಅಡಿಯಲ್ಲಿಯೇ ಆಡಳಿತ ನಡೆಸಬೇಕು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ.ಪ್ರಸನ್ನಕುಮಾರ್ ಮಾತನಾಡಿ, ೭೫ನೇ ವರ್ಷದ ಸಂವಿಧಾನ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಹಕ್ಕು ಅನುಭವಿಸಿ ಕರ್ತವ್ಯ ಪಾಲನೆಯನ್ನು ಯಾರು ಮರೆಯಬಾರದು. ಕಾನೂನಿನ ಸೇವೆಯನ್ನು ದುರ್ಬಲ ವರ್ಗದವರು ಸೇರಿ ಇನ್ನಿತರರಿಗೆ ಉಚಿತವಾಗಿ ನೀಡಲಾಗುತ್ತಿದೆ. ಶುಲ್ಕ ಕೊಟ್ಟು ಕೇಸ್ ನಡೆಸಲು ಸಾಧ್ಯವಾಗದೇ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಹೆಚ್.ಬಿ.ರವಿಕುಮಾರ್ ಅವರು ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಹಿರಿಯ ವಕೀಲ ಏ.ಎಲ್.ಬೊಮ್ಮಣ್ಣ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎಂ.ಎನ್.ತ್ರಿನೇತ್ರ, ಹೆಚ್.ಆರ್.ಷಡಕ್ಷರಪ್ಪ,ಟಿ.ಹೆಚ್.ಬಸವರಾಜು, ಕೆ.ಮಲ್ಲಿಕಾರ್ಜುನ್ ಸೇರಿ ಇನ್ನಿತರ ವಕೀಲರು, ಕಕ್ಷಿದಾರರು ಹಾಗೂ ಕೋರ್ಟ್ ಸಿಬ್ಬಂದಿ ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.