September 15, 2025
FB_IMG_1732808195386.jpg


ಹಿರಿಯೂರು:
ತಾಲ್ಲೂಕಿನ ವೇದಾವತಿ ನಗರದ ಟಿ.ಬಿ.ವೃತ್ತದ ಬಳಿಯ ಚಳ್ಳಕೆರೆ ರಸ್ತೆಯಲ್ಲಿ ನಾಗರೀಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ಭವ್ಯವಾಗಿ ನಿರ್ಮಿಸಲಾಗಿರುವ ಶೌಚಾಲಯವು ನಗರದ ನಾಗರೀಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಬಳಕೆಗೆ ದೊರೆಯುವ ಮುನ್ನವೇ ಅನಾಥವಾಗಿದ್ದು, ಉದ್ಘಾಟನೆ ಭಾಗ್ಯವನ್ನು ಕಾಣದಾಗಿದೆ.
ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಹಾಗೂ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಲ್ಪಿಸಿಲ್ಲವಾದ್ದರಿಂದ ಶೌಚಾಲಯಕ್ಕೆ ಉದ್ಘಾಟನೆಯ ಭಾಗ್ಯ ದೊರೆತಿಲ್ಲ ಎನ್ನಲಾಗಿದ್ದು, ಶೌಚಾಲಯದ ಬೀಗ ತೆರೆಯದಿದ್ದರಿಂದಾಗಿ ಸುತ್ತಮುತ್ತಲಿನ ಜಾಗವನ್ನು ಜನರು ಬಯಲು ಶೌಚಾಲಯವನ್ನಾಗಿಸಿಕೊಂಡಿದ್ದಾರೆ.
ನಗರದಲ್ಲಿ ಬೆರಳಣಿಕೆಯಷ್ಟು ಸಾರ್ವಜನಿಕ ಶೌಚಾಲಯಗಳಿವೆ. ಅವುಗಳು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರ ಜತೆಗೆ ಸಮರ್ಪಕವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಾಗಲೇ ಶೌಚಾಲಯ ನಿರ್ಮಾಣಕ್ಕೆ ಖರ್ಚು ಮಾಡಿರುವ ಸಾರ್ವಜನಿಕರ ಹಣ ಸದ್ಬಳಕೆಯಾಗುತ್ತದೆ. ಎನ್ನಬಹುದಾಗಿದೆ.
ಈ ಶೌಚಾಲಯವನ್ನು ಜನಪ್ರತಿನಿಧಿಗಳೇ ಉದ್ಘಾಟನೆ ಮಾಡಬೇಕು ಎಂದೇನಿಲ್ಲ. ನಗರಸಭೆಯವರು ಜನಪ್ರತಿನಿಧಿಗಳಿಗಾಗಿ ಕಾಯದೆ, ಸಮರ್ಪಕ ನೀರಿನ ವ್ಯವಸ್ಥೆ ಮಾಡಿ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡಲಿ ಆಗ ಈ ಶೌಚಾಲಯವನ್ನು ನಿರ್ಮಾಣ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಹಿರಿಯೂರು-ಚಳ್ಳಕೆರೆ ರಸ್ತೆಯ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಶೌಚಾಲಯ ನಿರ್ಮಾಣಗೊಂಡಿದ್ದು, ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯ ಇದ್ದರೂ ಇಲ್ಲದಂತಾಗಿದೆ. ಹಿರಿಯೂರಿನಿಂದ ಬಳ್ಳಾರಿ ಮಾರ್ಗ ಹೋಗುವ ಪ್ರಯಾಣಿಕರಿಗೆ ಈ ಶೌಚಾಲಯದ ಭಾಗ್ಯ ದೊರೆಯದಂತಾಗಿದೆ.
ಈ ಮೊದಲು ಶೌಚಾಲಯದ ಕಾಮಗಾರಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತಿದ್ದು, ನಂತರದ ದಿನಗಳಲ್ಲಿ ಸುಮಾರು 2 ವರ್ಷಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡಿದೆ. ಶೌಚಾಲಯಕ್ಕಾಗಿ ಪ್ರಯಾಣಿಕರು ಸುತ್ತಮುತ್ತ ನೋಡಿ ನಗರದ ಪ್ರವಾಸಿ ಮಂದಿರದ ಕಾಂಪೌಡ್ ಬಳಿ ಮಲ-ಮೂತ್ರ ವಿಸರ್ಜನೆಮಾಡುವುದರಿಂದ ಸುತ್ತಮುತ್ತಲ ನಿವಾಸಿಗಳಿಗೆ ದುರ್ವಾಸನೆ ಬರುತ್ತಿದೆ ಎನ್ನಲಾಗಿದೆ.
ಅಲ್ಲದೆ, ಬಸ್ ನಿಲ್ದಾಣದ ಮೇಲ್ಚಾವಣಿ ಕಿತ್ತು ಹೋಗಿದ್ದು ಅಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ದೂರದ ಊರುಗಳಿಗೆ ಪ್ರಯಾಣಿಸುವ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕಾದರೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಅವರ ಕಷ್ಟ ಕೇಳುವವರು ಯಾರು ಇಲ್ಲದಂತಾಗಿದೆ.
ಈ ಬಗ್ಗೆ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಈ ಕೂಡಲೇ ಎಚ್ಚೆತ್ತುಕೊಂಡು ಈ ಶೌಚಾಲಯ ಆರಂಭಿಸುವ ಮೂಲಕ ನಗರದ ಸ್ವಚ್ಚತೆಗೆ ಒತ್ತು ಕೊಡುವ ಮೂಲಕ ಪ್ರಯಾಣಿಕರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ನಗರವನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಬೇಕೆನ್ನುವುದು ಈ ಭಾಗದ ನಿವಾಸಿಗಳ ಮನವಿಯಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading