September 15, 2025
FB_IMG_1732805346223.jpg



ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.28:
ಜಿಲ್ಲೆಯಲ್ಲಿ ಶೇ.100 ರಷ್ಟು ಜನನ-ಮರಣ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಜನೆ, ಕಾರ್ಯಕ್ರಮ ರೂಪಿಸಲು ದತ್ತಾಂಶಗಳು ಬಹಳ ಮುಖ್ಯ. ನಿಖರವಾದ ಅಂಕಿ-ಅಂಶಗಳು ಇಲ್ಲದಿದ್ದರೆ ಯೋಜನೆ ರೂಪಿಸಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಜನನ-ಮರಣ ಶೇ.100ರಷ್ಟು ನೋಂದಣಿಗಾಗಿ ವಿವಿಧ ಇಲಾಖೆಗಳ ನೆರವು ಅಗತ್ಯವಾಗಿದ್ದು, ಜಿಲ್ಲೆಯ ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ವಾಟರ್ ಮ್ಯಾನ್, ಗ್ರಾಮ ಪಂಚಾಯಿತಿ ಸದಸ್ಯರು ಜನನ-ಮರಣ ನೋಂದಣಿ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಜನನ-ಮರಣ ನೋಂದಣಿಗೆ ಸಂಬಂಧಿಸಿದಂತೆ ಸುತ್ತೋಲೆಗಳ ಕಡತ, ಪ್ರಮಾಣ ಪತ್ರ ವಿತರಣೆ, ವಿತರಣೆ ವಹಿ ಸಮರ್ಪಕವಾಗಿ ನಿರ್ವಹಿಸಬೇಕು ಹಾಗೂ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆಯ ಜನನ-ಮರಣ ನೋಂದಣಿ ಮತ್ತು ಉಪ ನೋಂದಣಿ ಘಟಕಗಳ ನಾಮಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.
ಪ್ರತಿ ತಿಂಗಳು ಸಭೆ ನಡೆಸಿ: ತಹಶೀಲ್ದಾರ್‍ಗಳ ಅಧ್ಯಕ್ಷತೆಯಲ್ಲಿ ನಡೆಯುವ ತಾಲ್ಲೂಕು ಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಗಳನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
2024 ರ ಜನವರಿಯಿಂದ ಅಕ್ಟೋಬರ್‍ವರೆಗೆ ಆರು ತಾಲ್ಲೂಕುಗಳಿಂದ ತಾಲ್ಲೂಕು ಮಟ್ಟದ 60 ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಗಳನ್ನು ನಡೆಸಬೇಕಾಗಿದ್ದು, ಇದರಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 02, ಚಿತ್ರದುರ್ಗ 05, ಹಿರಿಯೂರು 01, ಹೊಳಲ್ಕೆರೆ 06, ಹೊಸದುರ್ಗ 02 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 04 ಸಭೆ ಸೇರಿದಂತೆ ಒಟ್ಟು 20 ಸಭೆಗಳನ್ನು ಕೈಗೊಂಡು, ಸಭಾ ನಡಾವಳಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ರವಿಕುಮಾರ್ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ತಾಕೀತು ಮಾಡಿದರು.
ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೋಂದಣಿ ಕಡ್ಡಾಯ: ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಮರಣ ಸಂಭವಿಸಿದಾಗ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನಮೂನೆ 4ಎ ನಲ್ಲಿ ದಾಖಲಿಸಬೇಕು. ಇ-ಜನ್ಮ ತಂತ್ರಾಂಶದಲ್ಲಿ ಮರಣ ನೋಂದಣಿ ಮಾಡುವಾಗ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರವನ್ನು ಅಪ್‍ಲೋಡ್ ಮಾಡಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ತಿಳಿಸಿದರು.
ರೋಗಿಯ ಕೊನೆಯ ಕ್ಷಣದವರೆಗೂ ಉಪಚರಿಸಿದ ವೈದ್ಯರು, ರೋಗಿಗೆ ಸಂಬಂಧಿಸಿದ ಮರಣ ಕಾರಣವನ್ನು ನಮೂನೆ-4 ರ ಪ್ರಮಾಣ ಪತ್ರವನ್ನು ಭರ್ತಿ ಮಾಡಬೇಕು. ಪ್ರತಿ ತಿಂಗಳು ಮರಣ ವೈದ್ಯಕೀಯ ಪ್ರಮಾಣಪತ್ರವನ್ನು ಜನನ ಮರಣ ಮುಖ್ಯ ನೋಂದಣಾಧಿಕಾರಿಗೆ ಸಲ್ಲಿಸಬೇಕು. ಪ್ರತಿಯನ್ನು ಜಿಲ್ಲಾ ಸಂಗ್ರಹಣಾಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದ ಅವರು, ಯಾವುದೇ ಜನನ-ಮರಣ ನೋಂದಣಿ ಕೈಬಿಟ್ಟು ಹೋಗದಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

=========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading