March 16, 2026
n6369790171730132292032515f9b60b8beec2bf69455e4d10730633c43693c1d64a7b577eff158b0f6aff2.jpg

ಚಿತ್ರದುರ್ಗ ಅ28: ಆ ದಂಪತಿಯ ಕೊಲೆಯಾಗಿ ಬರೋಬ್ಬರಿ 38 ದಿನಗಳೇ ಕಳೆದಿವೆ. ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ. ಆ ಮೂಲಕ ಅತ್ತೆ-ಮಾವನನ್ನು ಕೊಲೆ ಮಾಡಿದ್ದ ಅಳಿಯ  ಇದೀಗ ಪೊಲೀಸರ ಅತಿಥಿ ಆಗಿದ್ದಾನೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿತ್ರದುರ್ಗ ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಸೆ. 19ರ ಸಂಜೆ ನಡೆಯಬಾರದ ಘಟನೆಯೊಂದು ನಡೆದು
ಹೋಗಿತ್ತು. ಜಮೀನಿಗೆ ಹೋಗಿದ್ದ ಹನುಮಂತಪ್ಪ-ತಿಪ್ಪಮ್ಮ ದಂಪತಿಯನ್ನು ಸಂಜೆಗತ್ತಲಲ್ಲಿ ರಣಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಯಾವುದೋ ಕಾಡು ಪ್ರಾಣಿಯ ದಾಳಿ ಎಂದು ಅಂದಾಜಿಸಲಾಗಿತ್ತು. ಆದರೆ ಪ್ರಕರಣದ ಬಳಿಕ ಹನಮಂತಪ್ಪ -ತಿಪ್ಪಮ್ಮ ದಂಪತಿಯ ಪುತ್ರಿ ಹರ್ಷಿತಾಳ ಪತಿ ಮಂಜುನಾಥ್ ನಾಪತ್ತೆ ಆಗಿದ್ದ. ಹರ್ಷಿತಾ ತನ್ನ ಪತಿಯ ಜತೆ ಗಲಾಟೆ ಮಾಡಿಕೊಂಡು ಬಂದು ತವರು ಸೇರಿದ್ದಳು. ಹೀಗಾಗಿ, ಅದೇ ದ್ವೇಷದಿಂದ ಮಂಜುನಾಥ್ ಮತ್ತು ಇತರರು ಸೇರಿ ಹತ್ಯೆ ಮಾಡಿದ್ದು ಪಕ್ಕಾ ಆಗಿತ್ತು.

ಮಂಜುನಾಥ್​ನ ಸಹೋದರ ರಘು, ತಂದೆ ಚಂದ್ರಪ್ಪ, ಸಂಬಂಧಿ ಮಲ್ಲಿಕಾರ್ಜುನನ್ನು ಪೊಲೀಸರು ಘಟನೆ
ನಡೆದ ಮರುದಿನವೇ ಬಂಧಿಸಿದ್ದರು. ಆದರೆ ಚಾಲಾಕಿ ಮಂಜುನಾಥ್ ಮಾತ್ರ ನಾಪತ್ತೆ ಆಗಿದ್ದ. ಏರ್ ಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮೊಬೈಲ್ ಟ್ರ್ಯಾಕ್ ಬಗ್ಗೆ ತಿಳಿದುಕೊಂಡಿದ್ದನು. ಹೀಗಾಗಿ,
ತನ್ನ ಮೊಬೈಲ್ ಎಸೆದು ತೆಲಂಗಾಣಕ್ಕೆ ಎಸ್ಕೇಪ್ ಆಗಿದ್ದನು. ಹೀಗಾಗಿ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚುವುದು ಸಾವಾಲಾಗಿ ಪರಿಣಮಿಸಿತ್ತು. ಎಸ್ಪಿ ರಂಜಿತ್ ಬಂಡಾರು ಮೂರು ತಂಡಗಳನ್ನು ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

ಡಿವೈಎಸ್ಪಿ ದಿನಕರ್ ನೇತೃತ್ವದ ಪಿಎಸ್​ಐ ಸುರೇಶ್ ಟೀಮ್ ಮಂಜುನಾಥ್ ಸ್ನೇಹಿತರ ಜಾಡು ಹಿಡಿದು ಹೊರಟಿತ್ತು. ಅಪರಿಚಿತ ವಾಟ್ಸಪ್​ ಕರೆಗಳ ಮೂಲಕ ಸ್ನೇಹಿತರನ್ನು ಸಂಪರ್ಕಿಸಿದ್ದ ಮಂಜುನಾಥ್​ ತೆಲಂಗಾಣದ ವಿಜಯವಾಡ ಜಿಲ್ಲೆಯ ಭದ್ರಾದ್ರಿ ಕೊತ್ತಗೊಡೆಂನಲ್ಲಿರುವ ಸುಳಿವು ಸಿಕ್ಕಿತ್ತು. ಹೀಗಾಗಿ, ಪೊಲೀಸರು ಚಾಲಾಕಿ ಆರೋಪಿ ಮಂಜುನಾಥನನ್ನು ತೆಲಂಗಾಣದಿಂದ ಬಂಧಿಸಿ ತಂದಿದ್ದಾರೆ.

ಇನ್ನು ಮೃತರ ಕುಟುಂಬಸ್ಥರು ಕಳೆದ 39ದಿನಗಳಲ್ಲಿ ಅನೇಕ ಸಲ ಎಸ್ಪಿ ಕಚೇರಿಗೆ ಆಗಮಿಸಿ ಪ್ರಮುಖ ಆರೋಪಿ ಮಂಜುನಾಥ್​ ಬಂಧನಕ್ಕೆ ಮನವಿ ಮಾಡಿದ್ದರು. ಸದ್ಯ ಆರೋಪಿ ಮಂಜುನಾಥ್ ಬಂಧನವಾಗಿದ್ದು ಮೃತರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮಂಜುನಾಥ್-ಹರ್ಷಿತಾರ ಇಬ್ಬರು ಮಕ್ಕಳು ಮತ್ತು ಹನುಮಂತಪ್ಪ-ತಿಪ್ಪಮ್ಮ ಕುಟುಂಬ ಅನಾಥರಾಗಿದ್ದಾರೆ. ಹೀಗಾಗಿ, ಆರೋಪಿ ಮಂಜುನಾಥ್​ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ಚಿತ್ರದುರ್ಗದ ಬೊಮ್ಮಕ್ಕನಹಳ್ಳಿಯಲ್ಲಿ ನಡೆದಿದ್ದ ದಂಪತಿಯ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಮೊಬೈಲ್ ಬಳಸದೇ ಉಳಿದರೆ ತಪ್ಪಿಸಿಕೊಳ್ಳಬಹುದೆಂದು ಭಾವಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading