ಹಿರಿಯೂರು:
ಮಧ್ಯಕರ್ನಾಟಕದ ಜನರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಶುಕ್ರವಾರ 126.75 ಅಡಿಗೆ ಏರಿಕೆಯಾಗಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿದಿನ 1386 ಕ್ಯೂಸೆಕ್ ನೀರಿನ ಒಳ ಹರಿವು ಇದೆ.
ತರೀಕೆರೆ ಸಮೀಪದ ಬೆಟ್ಟದ ತಾವರೆಕೆರೆಯ ಪಂಪ್ ಹೌಸ್ ನಿಂದ ಒಂದು ಪಂಪ್ ಲಿಫ್ಟ್ ಮಾಡಲಾಗುತ್ತಿದೆ. ಲಿಫ್ಟ್ ಮಾಡಲಾಗುತ್ತಿರುವ ನೀರಿನ ಒಳಹರಿವು 550 ಕ್ಯೂಸೆಕ್ ಇದ್ದು, ಇನ್ನು ವಾಣಿವಿಲಾಸ ಸಾಗರ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ.
ವಾಣಿವಿಲಾಸ ಜಲಾಶಯವು 30 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ ಪಂಪ್ ಮಾಡುವ ನೀರು ಸೇರಿದಂತೆ ಹೊಸದುರ್ಗ, ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ, ಸುತ್ತಮುತ್ತಲ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಹೆಚ್ಚಿನ ಕ್ಯೂಸೆಕ್ ನೀರು ಶುಕ್ರವಾರ ಹರಿದು ಬಂದಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 126.75 ಅಡಿಗೆ ಏರಿಕೆಯಾಗಿದೆ.