
ಲೇಖಕರಾದ ಮುಷ್ತಾಕ್ ಹೆನ್ನಾಬೈಲ್ ಅವರ ‘ ಧರ್ಮಾಧರ್ಮ’ ಕೃತಿ ಓದಿದರೆ ನೀವು *ಇಸ್ಲಾಂ ನ್ನು ಗೌರವಿಸುವುದು ಖಚಿತ!


ಜಗತ್ತಿನ ಎಲ್ಲಾ ಧರ್ಮಗಳು ಕೂಡ ಮನುಷ್ಯನ ಒಳಿತಿಗಾಗಿ,ಉನ್ನತಿಗಾಗಿಯೇ ಉದಯಿಸಿವೆ ವಿನಾ ಯಾವ ಧರ್ಮವೂ ಕೂಡ ಕೆಡುಕನ್ನ ಬಯಸಿಲಿಕ್ಕಲ್ಲ ಎಂಬುದು ನಾವೆಲ್ಲರೂ ಅರಿತಿರಲೇಬೇಕಾದ ಒಂದು ಸಾಮಾನ್ಯ ಜ್ಞಾನ. ಆದರೆ ಇತ್ತೀಚಿನ ದಿನಗಳಲ್ಲಿ ಅಧ್ಯಯನದ ಕೊರತೆಯಿಂದ,ಅಲ್ಪ ಜ್ಞಾನ ಗಳಿಸಿದ ಪೂರ್ವಾಗ್ರಹ ಪೀಡಿತ ಮನಸ್ಸುಗಳಿಂದ ಧರ್ಮಗಳು ಹೆಚ್ಚು ಚರ್ಚೆಗೆ & ಗೊಂದಲಕ್ಕೀಡಾಗುತ್ತಿವೆ. ಇಂತಹ ಚರ್ಚೆಗೆ & ಗೊಂದಲಕ್ಕೀಡಾದ ಧರ್ಮಗಳಲಿ ‘ಇಸ್ಲಾಂ’ ಕೂಡ ಒಂದಾಗಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರರು ಮಹಾಮಾನವತವಾದಿಯಾಗಿದ್ದರು. ಅದಕೆ ಅವರ ಜೀವನದ ಆದರ್ಶ ನಡೆಯೆ ಸಾಕ್ಷಿಯಾಗಿತ್ತು. ೧೪ ಶತಮಾನಗಳ ಹಿಂದೆಯೇ ಅವರು ಅನುಸರಿಸಿದ ತತ್ವಗಳು ಮನುಕುಲದ ಮೇಲೆ ಬೆಳಕು ಚೆಲ್ಲಿವೆ. ಅವರು ಹೇಳುತ್ತಾರೆ, ನೆರೆಮನೆಯಲ್ಲಿ ಹಸಿದವರಿದ್ದರೆ ತಾವೊಬ್ಬರೆ ಹೊಟ್ಟೆ ತುಂಬಾ ತಿಂದು ತೇಗದೆ,ನೆರೆಮನೆಯವರ ಹಸಿವಿಗೆ ತನ್ನ ಪಾಲಿನ ಅನ್ನವನು ಹಂಚಿಕೊಂಡು ತಿನ್ನಬೇಕು,ವ್ಯಾಪಾರದಲ್ಲಿ ಸುಳ್ಳು ಹೇಳಬಾರದು,ಜೂಜು- ಮದ್ಯಪಾನ,ಧೂಮಪಾನಕ್ಕೆ ದಾಸರಾಗಿ ತನ್ನ ನಂಬಿದವರನು ಬೀದಿಪಾಲು ಮಾಡಬಾರದು,ಬಂಧು-ಬಳಗ ನೆರೆಹೊರೆಯವರ ಏಳ್ಗೆ
ನೋಡಿ ಮತ್ಸರ ಪಡಬಾರದು, ಅನ್ಯಾಯವನ್ನು ನ್ಯಾಯವೆಂದು ಅಸತ್ಯವನ್ನು ಸತ್ಯವೆಂದು ಹೇಳದೆ,ಕಟಕಟೆಯಲಿ ಅಪರಾಧಿಯಾಗಿ ನಿಂತವರು ತಮ್ಮ ಆಪ್ತರಾಗಿದ್ದರೂ,ಕರುಳ ಸಂಬಂಧಿಕರಾಗಿದ್ದರೂ ಸತ್ಯ ನುಡಿದು ನ್ಯಾಯ ಎತ್ತಿಹಿಡಿಯಬೇಕು.ಕರಿಯರು ಬಿಳಿಯರು ಬಡವ ಬಲ್ಲಿದನೆಂಬದೆ ಹುಟ್ಟಿದ ಮಾನವರೆಲ್ಲರೂ ಸಮಾನರು ಎಂದು ಸಾಲುಸಾಲು ಮಾನವೀಯ ಮೌಲ್ಯಗಳನ್ನ ಎತ್ತಿಹಿಡಿದಿದ್ದಾರೆ. ಇಷ್ಟಾದರೂ,ಇಸ್ಲಾಂ ಬಗ್ಗೆ ಪೂರ್ಣ ಅರಿಯದೆ, ಕೆಲವರು ತಮ್ಮಅಲ್ಪ ಜ್ಞಾನದಿಂದ ಜನರಲ್ಲಿ ಗೊಂದಲಗಳನು ಸೃಷ್ಠಿ ಮಾಡುತಿರುವುದನ್ನು ನೋಡಿದರೆ ವಿಷಾದವೆನಿಸುತ್ತದೆ.
ವಿವಿಧತೆಯಲಿ ಏಕತೆ ಕಂಡ ನಮ್ಮ ಭಾರತದಲ್ಲೂ ಕೂಡ ಕೆಲ ಸ್ವಾರ್ಥಿಗಳು ಇಸ್ಲಾಂ ಧರ್ಮವನ್ನು ತಮ್ಮ ಬಂಡವಾಳ ಮಾಡಿಕೊಂಡು ಭಾವೈಕ್ಯತೆಯಿಂದ ಬದುಕುವ ಜನರ ಮಧ್ಯೆ ದ್ವೇಷದಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನವನ್ನು ಕೆಲವು ವರ್ಷಗಳಿಂದ ಮಾಡುತ್ತಲೇ ಬರುತಿದ್ದಾರೆ. ಅದರೊಟ್ಟಿಗೆ, ಕೋಮುವಾದಿಗಳು ಅದೆನೇ ಮಾಡಿದರೂ ನಮ್ಮ ಭಾರತದ ಏಕತೆಯ ಭಾವನೆಯನ್ನು ಬದಲಾಯಿಸಲಾಗದು ಅನ್ನುವುದು ಕೂಡ ಅಷ್ಟೇ ಸತ್ಯ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿರುವುದು ಅತ್ಯಂತ ಸಂತಸದ ಸಂಗತಿಯೇ ಆಗಿದೆ..
ಇಂತಹ ಸಂದಿಗ್ಧ ಚರ್ಚಾ ಸಮಯದಲ್ಲಿ ಇಸ್ಲಾಂನ ಕೆಲ ಅಂಶಗಳನ್ನು ಬೇರೆ ರೀತಿಯಾಗಿ ಬಿಂಬಿಸುವಾಗ ತಮ್ಮ ಲೇಖನಗಳ ಮೂಲಕ ಇಸ್ಲಾಂನ ಒಳನೋಟವನ್ನು ಓದುಗರಿಗೆ ಸರಿಯಾದ ರೀತಿಯಲ್ಲಿ ಅರ್ಥೈಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಲೇಖಕರಲ್ಲಿ ಮುಷ್ತಾಕ್ ಹೆನ್ನಾಬೈಲ್ ಸರ್ ಅವರು ಪ್ರಮುಖರಾಗಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.
ಇತ್ತೀಚಿಗೆ ಬಿಡುಗಡೆಯಾದ ಅವರ ನೂತನ ಕೃತಿ ಧರ್ಮಾಧರ್ಮ( ಇಸ್ಲಾಂ& ಮುಸ್ಲಿಮರ ಮೇಲಿನ ಪ್ರಶ್ನೆಗಳಿಗೆ ಉತ್ತರ) ಓದಿದೆ. ನನ್ನಲ್ಲಿದ್ದ ಕೆಲವು ಗೊಂದಲಗಳಿಗೂ ಉತ್ತರ ಸಿಕ್ಕಿದ್ದಲ್ಲದೆ ಇಸ್ಲಾಮ್ ಮನುಕುಲದ ಒಳಿತಿಗಾಗಿ ಅದರಲ್ಲೂ ಮಹಿಳೆಯರ ಪರವಾಗಿ ೧೪೫೦ ವರ್ಷಗಳ ಹಿಂದೆಯೇ ಅದೆಷ್ಟು ಕಾನೂನು ತಂದಿವೆ ಎಂದು ತಿಳಿದು ಹೆಮ್ಮೆ ಅನಿಸಿತು.
ಒಟ್ಟು ೫೮ ಪ್ರಶ್ನೆಗಳಿಗೆ ಕರಾರುವಕ್ಕಾದ ಉತ್ತರವನ್ನು ನೀಡುವ ಮೂಲಕ ಇಸ್ಲಾಮ್ ಧರ್ಮದ ಬಗ್ಗೆ ಕೆಲವರಿಗೆ ಇರುವ ಗೊಂದಲಗಳಿಗೆ ಸೂಕ್ತ ಸ್ಪಷ್ಟನೆ ನೀಡುವಲ್ಲಿ ಲೇಖಕರಾದ ಮುಷ್ತಾಕ್ ಹೆನ್ನಾಬೈಲ್ ಅವರು ಯಶಸ್ವಿಯಾಗಿದ್ದಾರೆ. ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ ಇಸ್ಲಾಮ್ ತತ್ವದ ಬಗ್ಗೆ ಓದುಗರಿಗೆ ಗೌರವ ಮೂಡಿಸುವಂತಹ ಮೌಲಿಕ ಕಾರ್ಯ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸಲು ಇಚ್ಛಿಸುತ್ತಿದ್ದೇನೆ.
ಏಕದೇವೋಪಾಸನೆ :
‘ಇಸ್ಲಾಂ’ ನಲ್ಲಿ ನನಗೆ ಅತ್ಯಂತ ಇಷ್ಟವಾದ ತತ್ವಗಳಲ್ಲಿ ಇದೂ ಒಂದಾಗಿದೆ.”ಧರ್ಮಾಧರ್ಮ”ಕೃತಿಯಲ್ಲಿ ಲೇಖಕರು ಇಸ್ಲಾಂನಲ್ಲಿ ಬಹುದೇವೋಪಾಸನೆ ಇಲ್ಲ. ಹಾಗೆಯೇ ಮುಸ್ಲಿಮರು ಏಕದೇವೋಪಾಸನೆ ಮಾಡುವುದರಿಂದ ಇತರೆ ಧರ್ಮಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ೧೨ ನೇ ಶತಮಾನದ ಮಹಾಮಾನವತಾವಾದಿ ಬಸವಣ್ಣನವರು ಕೂಡ ದೇವರೆಂದರೆ “ಸತ್ತು ಹುಟ್ಟುವವನಲ್ಲ, ಸಂದೇಹಿ ಸೂತಕಿಯಲ್ಲ ಆಕಾರ ನಿರಾಕಾರ ನೋಡಾ” ಎಂದು ಹೇಳುವ ಮೂಲಕ ಇಸ್ಲಾಮ್ ನ ನಿರಾಕಾರ ತತ್ವವನ್ನ ಪಾಲಿಸಿ, “ಇಬ್ಬರು ಮೂವರು ಎಂದು ಉಬ್ಬಿ ಮಾತನಾಡಬೇಡ ಇಬ್ಬರೆಂಬುದು ಹುಸಿ ನೋಡಾ” ಎಂದು ಹೇಳಿ ಏಕದೇವೊಪಾಸನೆ ಅನುಸರಿಸಿ ಜನರನ್ನ ಮೌಢ್ಯತೆಯಿಂದ ವೈಚಾರಿಕತೆಯೆಡೆಗೆ ಕೊಂಡ್ಯಯ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹದು.
ಇಸ್ಲಾಮಿನಿಂದ ಮಹಿಳೆಗಾದ ಪ್ರಯೋಜನ:
ಈ ವಿಚಾರದ ಕುರಿತಂತೂ, ಇಸ್ಲಾಮ್ ನ ಕೆಲ ಅನುಯಾಯಿಗಳು ಸೇರಿದಂತೆ ಯೆಥೇಚ್ಛ ಜನರು ಅತ್ಯಂತ ತಪ್ಪು ತಿಳುವಳಿಕೆಯಲ್ಲಿದ್ದಾರೆ. ಇಸ್ಲಾಮಿನಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲ, ಶಿಕ್ಷಣ ಇಲ್ಲ, ಅಧಿಕಾರ ಇಲ್ಲ ಹೀಗೆ, ಸಾಲುಸಾಲು ಅಪವಾದಗಳನ್ನು ತಿಳುವಳಿಕಸ್ತರಾದಿಯಾಗಿ ಮಾಡಿರುವುದನ್ನ ಕೇಳಿರುತ್ತೇವೆ. ಆದರೆ ಅದು ಸತ್ಯ ಅಲ್ಲ ಅನ್ನುವುದನ್ನು ಲೇಖಕರಾದ ಮುಷ್ತಾಕ್ ಸರ್ ಅವರು ಎಳೆಎಳೆಯಾಗಿ ಈ ಕೃತಿಯಲ್ಲಿ ತುಂಬ ಮನೋಜ್ಞವಾಗಿ ಹೀಗೆ ವಿವರಿಸಿದ್ದಾರೆ. ಹೆಣ್ಣಿಗೆ ಆಸ್ತಿ ಹಕ್ಕು ನೀಡಲು ಜಗದ ಮೊದಲ ಕಾನೂನು ರೂಪಿಸಿದ್ದು, ಲೋಕದ ಭಾಗಶ: ಬುಡಕಟ್ಟುಗಳಲ್ಲಿ ಸತಿಸಹಗಮನ ಪದ್ಧತಿ ಇದ್ದಂತಹ ಸಮಯದಲ್ಲಿಯೂ ಸಹ ವಿಧವಾ ವಿವಾಹಕ್ಕೆ ಪ್ರಾಶಸ್ತ್ಯ ಕಲ್ಪಿಸಿದ್ದು, ಬಹುಪತ್ನಿತ್ವ ಜಾರಿಯಿದ್ದಾಗ ತಲಾಖ್ ತಂದು ಸಾಂವಿಧಾನಿಕ ಬಿಡುಗಡೆಗೊಂಡು ಹೆಣ್ಣು ತನ್ನ ಮುಂದಿನ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಟ್ಟದ್ದು, ಹೆಣ್ಣು ಸ್ವ ಇಚ್ಛೆಯಿಂದ ಗಂಡನಿಂದ ದೂರಾಗಲು ಖುಲಾ&ತಫವೀದ್ ಎಂಬ ಸೌಲಭ್ಯ ನೀಡಿದ್ದು, ಮದುವೆಗೆ ಹೆಣ್ಣಿನ ಒಪ್ಪಿಗೆ ಸೂಚಿಸಲು ಸಹಿ ಮಾಡುವ ಪದ್ಧತಿ ತಂದಿದ್ದು,’ತಾಯಿಯ ಪಾದದಡಿಯಲಿ ಸ್ವರ್ಗವಿದೆ’ ಎಂದು ಹೇಳಿ, ಕುಟುಂಬ& ಸಮಾಜದಲ್ಲಿ ಮಹಿಳೆಯ ಘನತೆ ಹೆಚ್ವಿಸಿದ್ದು,ಬಡವರು ಬಲ್ಲಿದರು ಎಲ್ಲರೂ ಒಂದೇ ತೆರನಾಗಿ ಕಾಣುವಂತೆ ಸಾರ್ವಜನಿಕ ವಸ್ರ್ತಸಂಹಿತೆಯಾದ ಬುರ್ಖಾ ಜಾರಿ ಮಾಡಿ ಏಕತೆ ಮೂಡಿಸಿದ್ದು, ವರದಕ್ಷಿಣೆಯೇ ತಾಂಡವ ಆಡುತಿದ್ದ ಸಮಯದಲ್ಲಿ ವಧುದಕ್ಷಿಣೆ(ಮೆಹರ್) ತಂದು ಹೆ್ಣ್ಣಿನ ಘನತೆ ಹೆಚ್ಚಿಸಿದ್ದು,ಮಧ್ಯಪಾನ ನಿಷೇಧ ಮಾಡುವ ಮೂಲಕ ಹೆಂಡತಿ ಮಕ್ಕಳು ಬೀದಿಪಾಲಾಗುವುದನ್ನು ತಪ್ಪಿಸಿದ್ದು, ಇಂತಹ ಹಲವು ಕಾನೂನು ಸೌಲಭ್ಯ ಸೌಕರ್ಯ ಜಗತ್ತಿನಲ್ಲೇ ಮೊಟ್ಟಮೊದಲು ಒದಗಿಸಿದ್ದು ಇಸ್ಲಾಂ ಎಂದು ಹೇಳುತ್ತಾ ಮುಂದುವರೆದು, ಮಹಿಳೆಯರಿಗಾಗಿ ಶಿಕ್ಷಣ ನೀಡಿದೆ & ಮಸೀದಿ ಪ್ರವೇಶ ನಿಷೇಧಿಸಿಲ್ಲ ಎಂಬದನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.
ಮಹಿಳೆಯರಿಗೆ ಶಿಕ್ಷಣ:
ಪ್ರವಾದಿ ಮುಹಮ್ಮದ್ ಪೈಗಂಬರರು ಹೆಣ್ಣು ಗಂಡಿನಷ್ಟೇ ಸಮಾನಳು,ಅವಳಿಗೆ ಶಿಕ್ಷಣ ಹಕ್ಕು ನೀಡಿ ಅವಳಿಚ್ಛೆಯಂತೆ ಬದುಕಲು ಬಿಡಬೇಕು ಎಂದು ಹೇಳಿದ್ದಾರೆ. ಆದ್ದರಿಂದಲೆ ಇಸ್ಲಾಮಿನಲ್ಲಿ ಹೆಣ್ಣುಮಕ್ಕಳಿಗೆ ನಾಲ್ಕನೇ ವಯಸ್ಸಿನಲ್ಲಿಯೆ ಶಿಕ್ಷಣ ಪ್ರಾರಂಭವಾಗುತ್ತದೆ ಎಂದು ಹೇಳುತ್ತಾ,ಈ ಹಕ್ಕು ನೀಡಿದ್ದರಿಂದಲೇ , ಕ್ರಿ.ಶ.೮ನೇಯ ಶತಮಾನದಲ್ಲೇ ಫಾತಿಮಾ ಅಲ್ ಫಿಹ್ರೀಯಾ ಎಂಬ ಮುಸ್ಲಿಂ ಮಹಿಳೆ ಮೊರೊಕ್ಕೊ ದೇಶದಲ್ಲಿ,ಹಾರ್ವರ್ಡ್, ಆಕ್ಸ್‌ಫರ್ಡ್, ಕ್ಯಾಂಬ್ರಿಜ್ ವಿಶ್ವವಿದ್ಯಾಲಯಗಳಿಗಿಂತ ಮುಂಚೆಯೇ ‘ಅಲ್ ಖರಿಯ್ಯೀನ್’ ಎಂಬ ವಿಶ್ವದ ಮೊದಲ & ಅತ್ಯಂತ ದೀರ್ಘ ಇತಿಹಾಸ ಹೊಂದಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು ಯೂನೆಸ್ಕೊ ಕೂಡ ಇದನ್ನೇ ಜಗತ್ತಿನ ಮೊದಲ ವಿಶ್ವವಿದ್ಯಾಲಯ ಎಂದು ಅಂಗೀಕರಿಸಿದೆ ಎಂದು ಹೇಳುತ್ತಾ, ಮಹಿಳೆಯರಿಗೆ ಇಸ್ಲಾಮ್ ಶಿಕ್ಷಣ ಹಕ್ಕು ನೀಡಿದೆ ಎಂಬುದಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಮಸೀದಿ ನಿಷೇಧ:
ಇದು ಕೂಡ ಒಂದು ತಪ್ಪು ಕಲ್ಪನೆ. ಇಸ್ಲಾಮ್ ಮಹಿಳೆಯರ ವಿಚಾರದಲ್ಲಿ ಪ್ರತಿ ಹೆಜ್ಜೆಯಲೂ ಒಳಿತನ್ನೆ ಯೋಚಿಸಿದೆ. ಹಬ್ಬದ ದಿನಗಳಲ್ಲಿ ಆಗಲಿ,ದಿನನಿತ್ಯದಲ್ಲಾಗಲಿ ಮಹಿಳೆಯರಿಗೆ ಕುಟುಂಬದ ಜವಾಬ್ದಾರಿಗಳು ಹೆಚ್ಚಿರುತ್ತವೆ. ಅದರ ಜೊತೆಗೆ ಧಾರ್ಮಿಕ ವಿಧಿವಿಧಾನಗಳು ಅವರಿಗೆ ಹೊರೆಯಾಗದಂತೆ ಮನೆಯಲ್ಲಿಯೇ ನಮಾಜ್ ಮಾಡುವಂತೆ ಖಲೀಫಾ ಉಮರ್ ಅವರು ಅವಕಾಶ ನೀಡಿದ್ದರಿಂದ, ಮುಂದೆ ಇದೇ ರೂಢಿಯಾಗಿ ಮಹಿಳೆಯರು ಮನೆಯಲ್ಲಿಯೇ ನಮಾಜ್ ಮಾಡುವ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ ವಿನಾ ಮಸೀದಿಗೆ ಹೆಣ್ಣಿಗೆ ಪ್ರವೇಶವೇ ಇಲ್ಲ ಎಂಬ ಅರ್ಥವಲ್ಲ, ಹಾಗೆನಾದರೂ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧಿಸಿದ್ದರೆ ಪವಿತ್ರ ಸ್ಥಳವಾದ ಮಕ್ಕಾ ಮದೀನದಲ್ಲಿ ಸಹ ಮಹಿಳೆಯರು ಹೋಗಲಾಗುತಿತ್ತೆ? ಇದನ್ನು ನಾವು ಯಾಕೆ ಯೋಚಿಸುವುದಿಲ್ಲ ಎಂದು ಲೇಖಕರು ಬರೆದಿದ್ದಾರೆ.
ಹೀಗೆ ಮುಷ್ತಾಕ್ ಸರ್ ಅವರು ‘ಇಸ್ಲಾಮ್’ ಮಹಿಳೆಯರಿಗೆ ನೀಡಿದ ಅನುಕೂಲಗಳನ್ನು ವಿವರಿಸುವಾಗ ಗಟ್ಟಿಧ್ವನಿಯಾಗಿ ನಿಂತಿರುವುದು ಓದುಗರಿಗೆ ಒಂದು ರೀತಿಯ ರೋಮಾಂಚನವನ್ನುಂಟು ಮಾಡುತ್ತದೆ. ಅಷ್ಟೇಯಲ್ಲದೇ ‘ಇಸ್ಲಾಮ್’ ಮಹಿಳೆಯರಿಗಾಗಿ ಇಷ್ಟೆಲ್ಲಾ ಮಾಡಿದಿಯಾ ಎಂದು ಆಶ್ಚರ್ಯಚಕಿತರಾಗುವಂತೆ ಮಾಡಿರುವುದು ಕೂಡ ಇಷ್ಟವಾಗುತ್ತದೆ.
ಇವಷ್ಟೆಯಲ್ಲದೇ, ಅನಾದಿ ಕಾಲದಿಂದಲೂ ಜನರನ್ನ ಶೋಷಿಸಿ ಮಣ್ಣಲ್ಲಿ ಮಣ್ಣಾಗಿಸಿದ್ದ ಬಡ್ಡಿದಂಧೆಯನ್ನು ಇಸ್ಲಾಂ ೧೪೫೦ ವರ್ಷಗಳ ಹಿಂದೆಯೇ ನಿಷೇಧ ಮಾಡಿರುವುದು ಅತ್ಯಂತ ಪ್ರಶಂಸನೀಯವಾಗಿದೆ ಎಂದು ಸ್ಮರಿಸಿದ್ದಾರೆ. ಭಾರತದ ಮುಸ್ಲಿಂರ ದೇಶಪ್ರೇಮವನ್ನು ತಿಳಿಸುವಾಗ ೧೯೬೫ ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧದ ವೀರ ಹುತಾತ್ಮ ಯೋಧ ಪರಮವೀರ ಚಕ್ರ ಪಡೆದ ವೀರ್ ಅಬ್ದುಲ್ ಹಮೀದ್ ಅವರ ತ್ಯಾಗ ನೆನೆಯುತ್ತಾ ಈ ಮಣ್ಣಿನಲ್ಲಿ ಜನಿಸಿದ ಪ್ರತಿಯೋರ್ವ ಮುಸ್ಲಿಂ ಈ ನೆಲವನ್ನು ಪ್ರೀತಿಸುತ್ತಾನೆ ವಿನಾ ದ್ವೇಷಿಸುವುದಿಲ್ಲ ಎಂದಿದ್ದಾರೆ. ಮುಂದುವರೆದು ಝಕಾತ್ ನಿಂದಾದ ಅನುಕೂಲಗಳನ್ನು ತಿಳಿಸಿದ್ದಾರೆ, ಹಲಾಲ್ ಏಕೆ ಮಾಡಬೇಕು, ಹಂದಿಯನ್ನು ಏಕೆ ತಿನ್ನಬಾರದು ಹೀಗೆ ಇನ್ನೂ ಅನೇಕ ವಿಷಯಗಳನ್ನು ಒಳಗೊಂಡಂತೆ ಇಸ್ಲಾಮ್ ಬಗ್ಗೆ ಸ್ಪಷ್ಟ ನಿಲುವನ್ನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಇವರ ಈ ಕೃತಿ ಓದಿದವರಿಗೆ ಇಸ್ಲಾಮ್ ಬಗ್ಗೆ ಧನಾತ್ಮಕವಾದ ಒಂದು ಸ್ಪಷ್ಟ ಕಲ್ಪನೆ ಮೂಡುವಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ನನ್ನ ಅಂಬೋಣವಾಗಿದೆ. ಇಂತಹ ಮೌಲಿಕ ಕಾರ್ಯ ಮಾಡಿದ ಲೇಖಕರಾದ ಮುಷ್ತಾಕ್ ಹೆನ್ನಾಬೈಲ್ ಸರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಇವರಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಇಂತಹ ಅಮೂಲ್ಯ ಕೃತಿಗಳು ಹೊರಬರಲಿ ಕನ್ನಡ ಸಾರಸತ್ವ ಲೋಕ ಅದನು ಒಪ್ಪಲಿ ಅಪ್ಪಲಿ ಎಂದು ಶುಭಕೋರಿ “ನಾಳೆ ಪ್ರವಾಹವಾದರೂ ಭವಿಷ್ಯದ ಒಳಿತಿಗಾಗಿ ಇಂದು ಗಿಡ ನೆಡು” ಎಂಬ ಪ್ರವಾದಿಯವರ ಮಾತನ್ನು ಸ್ಮರಿಸಿ ನನ್ನ ಲೇಖನಿಗೆ ವಿರಾಮವನ್ನಿಡುತಿರುವೆ.
ಧನ್ಯವಾದಗಳೊಂದಿಗೆ….
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ
ಪುಸ್ತಕಕ್ಕಾಗಿ ಸಂಪರ್ಕಿಸಿ
9448027773
ಬೆಲೆ: 190 ರೂ.ಗಳು
About The Author
Discover more from JANADHWANI NEWS
Subscribe to get the latest posts sent to your email.