ಚಿತ್ರದುರ್ಗ ಏಪ್ರಿಲ್ 28:
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಗುಲ್ಬರ್ಗ ವಿಭಾಗದ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ನೀಡಿರುವ ವಿಶೇಷ ಯೋಜನೆಗಳ ಮಾದರಿಯಲ್ಲಿ, ಚಿತ್ರದುರ್ಗ ಜಿಲ್ಲೆಗೆ 10 ವರ್ಷಗಳ ಕಾಲ ಅವಧಿಯ ವಿಶೇಷ ಯೋಜನೆ ಪ್ಯಾಕೇಜ್ ನೀಡಿದರೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಹೊಂದಲಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ, ಸೋಮವಾರ ಏರ್ಪಡಿಸಿದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಬೆಂಗಳೂರು ವಿಭಾಗದ ಮಟ್ಟದ ಸಂವಾದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಜಿಲ್ಲೆಯ ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಶೇ.90 ರಷ್ಟು ಇದ್ದಾರೆ. ಪ್ರತಿ ತಾಲ್ಲೂಕಿನಿಂದಲೂ ಸಾವಿರಾರು ಜನ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕೆಲಸ ಅರಸಿಕೊಂಡು ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಹಿರಿಯೂರಿನಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ತಾಲ್ಲೂಕಿನ ಏಳೆಂಟು ಸಾವಿರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸ್ವಾಲಂಭಿಯಾಗಲು ಸಹಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಗೃಹಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಆರ್ಥಿಕ ಚೈತನ್ಯ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮಧ್ಯ ಕರ್ನಾಟಕ ಭಾಗಕ್ಕೆ ವಾಣಿ ವಿಲಾಸ ಸಾಗರ ಜಲಾಶಯ ಜೀವನಾಡಿಯಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕೃಷ್ಣರಾಜ ಸಾಗರ ಮಾದರಿಯಲ್ಲಿ ವಿವಿ ಸಾಗರ ಬಳಿ ಉದ್ಯಾನವನ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಜಿಲ್ಲೆಯ 3 ತಾಲ್ಲೂಕಗಳಿಗೆ ಕೆ.ಎಂ.ಇ.ಆರ್.ಸಿ ಹಾಗೂ ಡಿಎಂಎಫ್ ಅಡಿ ವರ್ಷಕ್ಕೆ ರೂ.500 ಕೋಟಿಗಳಷ್ಟು ಅಭಿವೃದ್ಧಿ ಅನುದಾನ ದೊರಕುತ್ತದೆ. ಆದರೆ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಈ ಅನುದಾನ ದೊರೆಯುವುದಿಲ್ಲ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಸಮತೋಲನ ನಿವಾರಣಾ ಸಮತಿ ಜಿಲ್ಲೆಗೆ ವಿಶೇಷ ಅನುದಾನ ಪ್ಯಾಕೇಜ್ ನೀಡುವಂತೆ ಶಿಫಾರಸ್ಸು ಮಾಡಬೇಕು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಸೆಪ್ಟೆಂಬರ್ ತಿಂಗಳಿಗೆ ಸರ್ಕಾರಕ್ಕೆ ವರದಿ, ಪ್ರೋ.ಗೋವಿಂದ ರಾವ್:





ಆರ್ಥಿಕ ತಜ್ಞರೂ ಆಗಿರುವ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ಅವರು ಮಾತನಾಡಿ, 23 ವರ್ಷಗಳ ಹಿಂದೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಜ್ಯದ 175 ತಾಲ್ಲೂಕುಗಳನ್ನು ಅಧ್ಯಯನ ಮಾಡಿ ಡಾ. ಡಿ.ಎಂ. ನಂಜುಂಡಪ್ಪ ಅವರು 39 ಅತ್ಯಂತ ಹಿಂದುಳಿದ ತಾಲ್ಲೂಕುಗಳು, 0 ಅತಿ ಹಿಂದುಳಿದ ತಾಲ್ಲೂಕುಗಳು ಹಾಗೂ 35 ಹಿಂದುಳಿದ ತಾಲ್ಲೂಕುಗಳು ಎಂದು ಹಿಂದುಳಿದಿರುವಿಕೆಯನ್ನು ಗುರುತಿಸಿದ್ದರು. ಇದರಲ್ಲಿ ಉತ್ತರ ಕರ್ನಾಟಕ ಭಾಗದ 26 ಅತ್ಯಂತ ಹಿಂದುಳಿದ ತಾಲ್ಲೂಕುಗಳಾಗಿದ್ದರೆ, ದಕ್ಷಿಣ ಕರ್ನಾಟಕದ 13 ತಾಲ್ಲೂಕುಗಳು ಇದ್ದವು. ಇದರ ನಿವಾರಣೆಗಾಗಿ ಮಾಡಿದ ಶಿಫಾರಸ್ಸಿನ ಅನ್ವಯ, ಸರ್ಕಾರ 2007-08 ರಿಂದ 2023-24 ರವರೆಗೆ 45,789 ಕೋಟಿ ರೂ. ಗಳ ಹಂಚಿಕೆಯಾಗಿ, 37,661 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಪೈಕಿ 34,381 ಕೋಟಿ ರೂ. ಖರ್ಚಾಗಿದೆ. ಪ್ರಸ್ತುತ ತಾಲ್ಲೂಕುಗಳ ಸಂಖ್ಯೆ 240 ಆಗಿದೆ. ಇಷ್ಟೊಂದು ಹಣ ಖರ್ಚು ಮಾಡಿದ ಬಳಿಕ, ತಾಲ್ಲೂಕುಗಳ ಹಿಂದುಳಿದಿರುವಿಕೆ ಕಡಿಮೆ ಆಗಿದೆಯೇ, ಯಾವೆಲ್ಲಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಿದೆ. ಹಣ ನೀಡಿದರೂ ಅಭಿವೃದ್ಧಿ ಆಗಲಿಲ್ಲವೆಂದರೆ ಅದಕ್ಕೆ ಕಾರಣಗಳೇನು, ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಅಸಮತೋಲನ ಸರಿಪಡಿಸಿ, ಸಮಗ್ರ ಕರ್ನಾಟಕ ಅಭಿವೃದ್ಧಿಗೊಳ್ಳಲು ಏನೆಲ್ಲ ಕ್ರಮ ವಹಿಸಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯನ್ನು ಮಾರ್ಚ್-2024ರಲ್ಲಿ ರಚಿಸಲಾಗಿದ್ದರೂ, ಸೆಪ್ಟೆಂಬರ್-2024 ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯ ವೇಗ ಹೊಂದಿದ್ದು, ಉಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ವೇಗ ಪಡೆದಿಲ್ಲ. ಮೂಲಭೂತ ಸೌಕರ್ಯ, ವಿದ್ಯುತ್, ರಸ್ತೆ, ಹಣಕಾಸು, ಶಿಕ್ಷಕರು ಮತ್ತು ವಿದ್ಯಾರ್ಥಿ ಅನುಪಾತ, ಸಾಕ್ಷರತೆ, ವೈದ್ಯಕೀಯ ವ್ಯವಸ್ಥೆ, ಕೈಗಾರಿಕೆ, ನೀರಾವರಿ, ಕೃಷಿ, ಸೇವಾ ವಲಯ ಮುಂತಾದ 32 ಸೂಚ್ಯಂಕಗಳನ್ನು ಆಧರಿಸಿ ಸಮಿತಿಯು ವರದಿ ಸಂಗ್ರಹಿಸಲಿದೆ. ಸಮಿತಿಯು ಪ್ರತಿ ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಜನರ ಅನುಭವ, ಅಭಿಪ್ರಾಯಗಳನ್ನು ಪಡೆದು, ಸಂಗ್ರಹಿಸಿದ ಮಾಹಿತಿ, ಅಧ್ಯಯನದ ವರದಿಗಳ ಆಧಾರದಲ್ಲಿ ಅಸಮತೋಲನ ನಿವಾರಣೆ ಹಾಗೂ ಸಮಗ್ರ ಕರ್ನಾಟಕದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಫಾರಸ್ಸುಗಳ ವರದಿಯನ್ನು ಮುಂಬರುವ ಸೆಪ್ಟೆಂಬರ್ ವೇಳೆಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಎಂದರು.
ಮೌಲ್ಯಮಾಪನಕ್ಕೆ ಸಂಸದ ಗೋವಿಂದ ಎಂ ಕಾರಜೋಳ ಒತ್ತಾಯ
ಡಾ. ಡಿ.ಎಂ.ನಂಜುಡಪ್ಪ ವರದಿ ಶಿಫಾರಸ್ಸಿನ ಹಿನ್ನಲೆಯಲ್ಲಿ 2007-08 ರಿಂದ 2023-24ನೇ ಸಾಲಿನ ವರೆಗೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ರೂ.45,789.50 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು ರೂ.37,661.65 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.34,381.02 ಕೋಟಿ ವೆಚ್ಚವಾಗಿದೆ. ಆದರೂ ಹಿಂದುಳಿದ ತಾಲ್ಲೂಕುಗಳಲ್ಲಿ ಮೂಲಭೂತ ಸೌಕರ್ಯಗಳು ವೃದ್ಧಿಯಾಗಿಲ್ಲ. ಸರ್ಕಾರದ ಆಸ್ತಿಗಳು ಸೃಜನೆಯಾಗಿಲ್ಲ. ಪ್ರಸ್ತುತ ಸಮಿತಿಯು, ಅನುದಾನ ಸದ್ಬಳಕೆಯಾಗಿದೆಯೋ ಅಥವಾ ಇಲ್ಲವೋ ಎನ್ನುವ ಕುರಿತು ಮೌಲ್ಯಮಾಪನ ಮಾಡಿ, ವರದಿಯನ್ನು ನೀಡಬೇಕಾಗಿ ಸಂಸದ ಗೋವಿಂದ ಎಂ ಕಾರಜೋಳ ಒತ್ತಾಯಿಸಿದರು.
ದೇಶದಲ್ಲಿ ಸದಾ ಬರಗಾಲಕ್ಕೆ ತುತ್ತಾಗುವ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯ ಬಹುತೇಕ ರೈತರು ಮಳೆ ಆಶ್ರಿತ ಒಣ ಬೇಸಾಯ ನಂಬಿಕೊಂಡಿದ್ದಾರೆ. ಬ್ಯಾಂಕುಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಲ ಸೌಲಭ್ಯ ನೀಡುವಲ್ಲಿ ಕ್ರಮ ವಹಿಸಿಲ್ಲ. ಜಿಲ್ಲೆಯಲ್ಲಿ ಉತ್ತಮ ಖನಿಜ ಸಂಪತ್ತು ಇದೆ. ಈ ಖನಿಜ ಸಂಪತ್ತು ಜಿಲ್ಲೆಯಲ್ಲಿಯೇ ಸಂಸ್ಕರಿಸಿ ರಪ್ತು ಮಾಡಿದರೆ, ಜಿಲ್ಲೆಗೆ ಅಭಿವೃದ್ದಿಗೆ ಪೂರಕವಾಗಲಿದೆ. ಜನರಿಗೂ ಉದ್ಯೋಗವಕಾಶಗಳು ಲಭಿಸುತ್ತವೆ. ಈ ನಿಟ್ಟಿನಲ್ಲಿ ಸಮಿತಿ ವರದಿ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಪ್ರಾದೇಶಿಕ ಅಸಮತೋಲನ ಹೋಬಳಿ ಘಟಕವಾಗಿ ಪರಿಗಣಿಸಿ, ಶಾಸಕ ಟಿ.ರಘುಮೂರ್ತಿ ಸಲಹೆ:
ಪ್ರಾದೇಶಿಕ ಅಸಮತೋಲನ ಸೂಚ್ಯಂಕದಲ್ಲಿ ತಾಲ್ಲೂಕು ಅನ್ನು ಘಟಕವಾಗಿ ಪರಿಗಣಿಸಿ, ಅಭಿವೃದ್ಧಿ, ಹಿಂದುಳಿದಿರುವಿಕೆ ಎಂದು ವರ್ಗೀಕರಣ ಮಾಡಲಾಗುತ್ತಿದೆ. ಆದರೆ ಮುಂದುವರೆದ ತಾಲ್ಲೂಕಿನಲ್ಲಿಯೂ ಸಹ ಕೆಲವು ಹೋಬಳಿಗಳು ಪ್ರಾದೇಶಿಕ ಅಸಮಾತೋಲನಕ್ಕೆ ತುತ್ತಾಗಿವೆ. ಈ ಹಿನ್ನಲೆಯಲ್ಲಿ ಹೋಬಳಿಯನ್ನು ಘಟಕವಾಗಿ ಪರಿಗಣಿಸಿ, ವರದಿ ಶಿಫಾರಸ್ಸು ಮಾಡುವಂತೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲಹೆ ನೀಡಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 1 ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕು ಹಾಗೂ 5 ತಾಲ್ಲೂಕುಗಳು ಹಿಂದುಳಿದ ತಾಲ್ಲೂಕುಗಳಾಗಿವೆ. ರೂ. 3724 ಕೋಟಿ ರೂಪಾಯಿ ಕೆಎಂಇಆರ್‍ಸಿ ಅನುದಾನದಡಿಯಲ್ಲಿ ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲ್ಲೂಕುಗಳು ಅಭಿವೃದ್ಧಿಯಾಗುತ್ತಿವೆ. ಉಳಿದ ಮೂರು ತಾಲ್ಲೂಕುಗಳಾದ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳ ಅಭಿವೃದ್ಧಿಗೆ ಬೇರೆ ವಿಧದಲ್ಲಿ ಸರ್ಕಾರ ಅನುದಾನ ಒದಗಿಸಿದರೆ ಅನುಕೂಲವಾಗಲಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಡಿಆರ್‍ಡಿಒ, ಇಸ್ರೋ, ಬಾರ್ಕ್, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಅಂತಹ ಸಂಸ್ಥೆಗಳು ಇರುವುದರಿಂದ ಚಿತ್ರದುರ್ಗ ಜಿಲ್ಲೆಗೆ ಇಂಡಸ್ಟ್ರೀಯಲ್ ಕಾರಿಡಾರ್ ಬಂದರೆ ಈ ಭಾಗಕ್ಕೆ ಪೂರಕವಾಗಿರಲಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
ಅನುದಾನ ಶಕ್ತಿವಂತರ ಪಾಲು ಶಾಸಕ ಗೋಪಾಲಕೃಷ್ಣ ಅಸಮಧಾನ:
ಡಿ.ಎಂ.ನಂಜುಂಡಪ್ಪ ವರದಿ ಹಿನ್ನಲೆಯಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ, ಈ ಅನುದಾನ ಅಧಿಕಾರ ಹಾಗೂ ಪ್ರಭಾವ ಹೊಂದಿರುವ ಸಚಿವರು ಹಾಗ ಶಕ್ತಿವಂತರ ಪಾಲಾಗುತ್ತಿದೆ. ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಹೆಸರಿಗಷ್ಟೇ ನೀಡುವಂತಾಗಿದೆ. ಯಾವುದೇ ಪ್ರಗತಿ ಕಾರ್ಯಗಳು ಆಗಿಲ್ಲ ಎಂದು ಮೊಳಕಾಲ್ಮೂರಿನ ಹಿರಿಯ ಶಾಸಕ ಗೋಪಾಲಕೃಷ್ಣ ಅಸಮಧಾನ ವ್ಯಕ್ತ ಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಸಚಿವರು ಉತ್ತಮ ನೀರಾವರಿ ಯೋಜನೆಗಳನ್ನು ರೂಪಿಸಿ, ಕೋಟ್ಯಾಂತರ ರೂಪಾಯಿಗಳ ಅನುದಾನ ಪಡೆದು ಅನುಷ್ಠಾನಗೊಳಿಸಿದ್ದಾರೆ. ಆದರೆ ತಾಲ್ಲೂಕಿಗೆ ನೀರಾವರಿ ಯೋಜನೆ ತರವಲ್ಲಿ ಸಾಕಷ್ಟು ವಿಳಂಬವಾಯಿತು. ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ಮೊಳಕಾಲ್ಮೂರು ತಾಲ್ಲೂಕಿಗೆ ಹೆಚ್ಚಿನ ಅನುದಾನ ಶಿಫಾರಸ್ಸು ಮಾಡುವಂತೆ ಶಾಸಕ ಗೋಪಾಲಕೃಷ್ಣ ಹೇಳಿದರು.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಶಾಸಕ ವೀರೇಂದ್ರ ಪಪ್ಪಿ ಮನವಿ :
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಜಿಲ್ಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶವಿದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದಷ್ಟು ಜಿಲ್ಲೆಯು ಅಭಿವೃದ್ಧಿ ಜೊತೆಗೆ ಸ್ವಯಂ ಉದ್ಯೋಗವೂ ಸೃಷ್ಠಿಯಾಗಲಿದೆ. ದುರ್ಗದ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ, ದವಳಪ್ಪನಗುಡ್ಡ, ಆಡುಮಲ್ಲೇಶ್ವರ, ಜೋಗಿಮಟ್ಟಿ, ಪುರಾತನ ದೇಗುಲಗಳು, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ, ಹೊಸದುರ್ಗದ ಹಾಲುರಾಮೇಶ್ವರ, ವಿ.ವಿ.ಸಾಗರದಲ್ಲಿ ಬೋಟಿಂಗ್ ಮಾಡಲು ಅವಕಾಶವಿದೆ. ಹಾಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರೆ ಅನುಕೂಲವಾಗಲಿದೆ ಎಂದರು. ಚಿತ್ರದುರ್ಗಕ್ಕೆ ವಿಶೇಷವಾಗಿ ಉದ್ದಿಮೆಯ ಅವಶ್ಯಕತೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಯೋಜನೆ ಪೂರ್ಣಗೊಂಡರೆ ಕೃಷಿಕರಿಗೆ ಸ್ವಲ್ಪಮಟ್ಟಿಗೆ ಅನುಕೂಲವಾಗಲಿದೆ. ಚಿತ್ರದುರ್ಗ ನಗರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದು, ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಇದೆ. ಯುಜಿಡಿ ಕಾಮಗಾರಿಗಳು ಕಳಪೆಯಾಗಿದ್ದು, ಇದು ತುರ್ತಾಗಿ ಸರಿಯಾಗಬೇಕಿದೆ. ಇಲ್ಲಿನ ಬಹಳ ಜನರಿಗೆ ವಸತಿ ಯೋಜನೆಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಗಣಿ ಪುನಶ್ಚೇತನಕ್ಕೆ ರೂ.100 ಕೋಟಿ ಬಿಡುಗಡೆಗೆ ಶಾಸಕ ಕೆ.ಎಸ್.ನವೀನ್ ಮನವಿ:
ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಸಂಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ಅನುಷ್ಠಾನದಲ್ಲಿ ಲೋಪ ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಜಿಲ್ಲೆಯ ತಾಮ್ರ ಅದಿರಿನ ಗಣಿಗಾರಿಕೆಯನ್ನು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ವಿಲೀನ ಮಾಡಲಾಗಿದೆ. ಸದ್ಯ ಜಿಲ್ಲೆಯ ತಾಮ್ರ ಗಣಿಗಾರಿಕೆ ಮುಚ್ಚಿದೆ. ಪ್ರಸ್ತುತ ತಾಮ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹಟ್ಟಿ ಚಿನ್ನದ ಗಣಿ ಕಂಪನಿ ವಾರ್ಷಿಕವಾಗಿ ರೂ.1000 ಕೋಟಿ ಲಾಭಮಾಡುತ್ತಿದೆ. ಇದರಲ್ಲಿ ಜಿಲ್ಲೆಯ ತಾಮ್ರ ಅದಿರಿನ ಗಣಿ ಪುನಶ್ಚೇತನಕ್ಕೆ ರೂ.100 ಕೋಟಿ ಬಿಡುಗಡೆ ಮಾಡಿದರೆ, ಜನರಿಗೆ ಉದ್ಯೋಗವಕಾಶಗಳು ದೊರಕುತ್ತವೆ. ಹೊಸದುರ್ಗ ತಾಲ್ಲೂಕನ್ನು ರಾಷ್ಟ್ರೀಯ ಸಿರಿಧಾನ್ಯಗಳ ವಲಯವನ್ನಾಗಿ ಘೋಷಿಸಿ ವಿಶೇಷ ಯೋಜನೆಗೆ ಶಿಫಾರಸ್ಸು ಮಾಡುವಂತೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮನವಿ ಮಾಡಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಜಿಲ್ಲೆಯ 100 ವರ್ಷಗಳ ಇತಿಹಾಸದಲ್ಲಿ 79 ವರ್ಷ ಬರಗಾಲಕ್ಕೆ ತುತ್ತಾಗಿದೆ. ಶೇ.30ರಷ್ಟು ಜನರು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಈ ಹಿಂದೆ ನಂಜುಂಡಪ್ಪ ವರದಿ ಆಧಾರಿಸಿ ನೀಡಿದ ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಿಂದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲ. ಆದ್ದರಿಂದ ಸಮಿತಿಯು ಶಿಕ್ಷಣ, ಕೃಷಿ, ತೋಟಗಾರಿಕೆ ಹೆಚ್ಚಿನ ಒತ್ತು ನೀಡಬೇಕಿದೆ. ಜನರಿಗೆ ಉದ್ಯೋಗ, ರೈತರಿಗೆ ಅನುಕೂಲ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಿಫಾರಸ್ಸು ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜೊತೆಗೆ ಕಾಡುಗೊಲ್ಲರ ಜನಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ. ಈಗಾಗಲೇ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸಮಿತಿ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಜಿಲ್ಲೆಯ ಶಿಕ್ಷಣ ಹಾಗೂ ಉದ್ಯೋಗಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ಯೋಜನಾ ಇಲಾಖೆ ಕಾರ್ಯದರ್ಶಿ ಡಾ. ಆರ್.ವಿಶಾಲ್, ಸದಸ್ಯರಾದ ಡಾ.ಎಸ್.ಟಿ.ಬಾಗಲಕೋಟೆ, ಕೆ.ಎನ್.ಸಂಗೀತ, ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸೇರಿದಂತೆ ತುಮಕೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಇಲಾಖೆ ಅಧಿಕಾರಿಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.