March 28, 2026
FB_IMG_1774683774488.jpg

ಚಿತ್ರದುರ್ಗಮಾರ್ಚ್28:
ವಿಶ್ವವಿಖ್ಯಾತ ಬೆಂಗಳೂರಿನ ಲಾಲ್‍ಬಾಗ್ ಉದ್ಯಾನವನವನ್ನು ಸಸ್ಯಕಾಶಿಯಾಗಿ ರೂಪಿಸುವಲ್ಲಿ ಹಾಗೂ ಐತಿಹಾಸಿಕ ಕರಗ ಉತ್ಸವವನ್ನು ಉಳಿಸಿ ಬೆಳೆಸುವಲ್ಲಿ ತಿಗಳ ಸಮುದಾಯದ ಕೊಡುಗೆ ಅನನ್ಯವಾಗಿದೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಕನ್ನಡ ಉಪನ್ಯಾಸಕ ಡಾ.ಜಿ.ಎನ್.ಯಶೋಧರ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಅಗ್ನಿಬನ್ನಿರಾಯ ಜಯಂತಿಯಲ್ಲಿ ಉಪನ್ಯಾಸ ನೀಡಿದರು.
ಅಗ್ನಿ ಪುರಾಣದ ಪ್ರಕಾರ, ಶಂಭು ಮಹರ್ಷಿಗಳು ನಡೆಸಿದ ಯಜ್ಞ ಕುಂಡದಿಂದ ಶಿವನ ಮೂರನೇ ಕಣ್ಣಿನ ಹನಿಯ ಮೂಲಕ ಜನ್ಮತಾಳಿದ ಅಗ್ನಿಬನ್ನಿರಾಯ ಈ ಸಮುದಾಯದ ಮೂಲ ಪುರುಷ. ತಮಿಳುನಾಡಿನ ಚೋಳರ ಕಾಲದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಈ ಜನಾಂಗಕ್ಕೆ “ತಿಗಳ’” ಎಂಬ ಹೆಸರು ಬರಲು ಅಗ್ನಿ (ತಿ) ಮತ್ತು ಸಮೂಹ (ಗಳ) ಎಂಬ ಅರ್ಥವಿದೆ. ಚಂದ್ರನನ್ನು “ತಿಂಗಳು’ ಎನ್ನುವಂತೆ ಇವರನ್ನು “ತಿಂಗಳರು” ಎಂದು ಕರೆಯಲಾಗುತ್ತಿತ್ತು, ಅದು ಕಾಲಕ್ರಮೇಣ “ತಿಗಳ” ಎಂದಾಗಿದೆ ಎಂದು ತಿಳಿಸಿದರು.
18ನೇ ಶತಮಾನದಲ್ಲಿ ಹೈದರ್ ಅಲಿ ಆರ್ಕಾಟ್ ಪ್ರಾಂತ್ಯ ಗೆದ್ದಾಗ, ಅಲ್ಲಿನ ತಿಗಳ ಸಮುದಾಯದವರ ಕೃಷಿ ಮತ್ತು ತೋಟಗಾರಿಕಾ ನೈಪುಣ್ಯತೆ ಕಂಡು ಬೆರಗಾಗಿ ಅವರನ್ನು ಮೈಸೂರಿಗೆ ಕರೆತಂದನು. ಇಂದು ನಾವು ಕಾಣುವ 60 ಎಕರೆ ವಿಸ್ತೀರ್ಣದ ಲಾಲ್‍ಬಾಗ್ ಸಸ್ಯಕಾಶಿಯನ್ನು ನಿರ್ಮಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಳೆದ ಐದು ಶತಮಾನಗಳಿಂದ ನಡೆಯುತ್ತಿರುವ ಐತಿಹಾಸಿಕ ಕರಗ ಉತ್ಸವವು ತಿಗಳ ಸಮುದಾಯದ ಸಾಂಸ್ಕøತಿಕ ಅಸ್ಮಿತೆಯಾಗಿದೆ ಎಂದು ಹೇಳಿದರು.
ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಹಾಗೂ ಸರ್ಕಾರದ ವತಿಯಿಂದ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವುದು ಶ್ಲಾಘನೀಯ ಎಂದು ಡಾ.ಜಿ.ಎನ್.ಯಶೋಧರ ಹೇಳಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಬಿ.ಎಂ.ಗೋವಿಂದರಾಜ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮೀ, ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಎಂ.ಉಷಾರಾಣಿ ಸೇರಿದಂತೆ ಮತ್ತಿತರರು ಇದ್ದರು. ಹೊಸದುರ್ಗದ ಶಬೀನಾಬಾನು ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.
ಫೋಟೋ ವಿವರ: ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಶ್ರೀ ಅಗ್ನಿಬನ್ನಿರಾಯ ಜಯಂತಿಯಲ್ಲಿ ಶ್ರೀ ಅಗ್ನಿಬನ್ನಿರಾಯ ಭಾವಚಿತ್ರಕ್ಕೆ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading