February 28, 2026
FB_IMG_1772288668448.jpg

ಹಿರಿಯೂರು :
ರೈತರಿಗೆ ಗೋಡಂಬಿ ಬೆಳೆ ಹೆಚ್ಚು ಲಾಭದಾಯಕ ಬೆಳೆಯಾಗಿದ್ದು ಹೆಚ್ಚು ಬೇಡಿಕೆ ಹೊಂದಿರುವ ಬೆಳೆಯಾಗಿದೆ, ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋಡಂಬಿ ಬೆಳೆಗಾರರ ನೆರವಿಗೆ ಬರದಿರುವುದರಿಂದ ರಾಜ್ಯದ ರೈತರು ಗೋಡಂಬಿ ಬೆಳೆಯಲು ಮುಂದೆ ಬರುತ್ತಿಲ್ಲ ಎಂಬುದಾಗಿ ಜಿ.ಪಂ.ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಹೇಳಿದರು.

ತಾಲ್ಲೂಕಿನ ಬಬ್ಬೂರು ವಿಶ್ವವಿದ್ಯಾಲಯದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು, ಕೇಂದ್ರೀಯ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಕೇರಳ, ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಗೋಡಂಬಿ ಬೆಳೆಯ ಪ್ರಾದೇಶಿಕ ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ದೇಶದಲ್ಲಿ ರೈತರು ಕೂಲಿ ಕಾರ್ಮಿಕರ ಸಮಸ್ಯೆಯಿಂದ ಶೇ.30ರಷ್ಟು ಮಾತ್ರ ಗೋಡಂಬಿ ಬೆಳೆಯುತ್ತಿದ್ದು, ಶೇ.70ರಷ್ಟು ಗೋಡಂಬಿಯನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಿಂದ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ದುಷ್ಪರಿಣಾಮ ಬೀಳುತ್ತಿದೆ, ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ರಾಜ್ಯದ ರೈತರ ನೆರವಿಗೆ ನಿಂತು ರೈತರು ಗೋಡಂಬಿ ಬೆಳೆಯಲು ಪ್ರೋತ್ಸಾಹ ನೀಡಬೇಕು ಎಂಬುದಾಗಿ ಹೇಳಿದರು.
ತಾಲ್ಲೂಕಿನಲ್ಲಿ ಹೆಚ್ಚು ಜಮೀನನ್ನು ಹೊಂದಿರುವ ರೈತರು ತಮ್ಮ ಜಮೀನಿನ ಕಾಲುಭಾಗದಲ್ಲಿ ಗೋಡಂಬಿ ಬೆಳೆ ಬೆಳೆಯಬೇಕು, ತಾಲ್ಲೂಕಿನ ರೈತರಿಗೆ ನೆರವಾಗುವ ನಿಟ್ಟಿನಲ್ಲಿ “ಗೋಡಂಬಿ ಬೆಳೆಯ ಪ್ರಾದೇಶಿಕ ವಿಚಾರ ಸಂಕಿರಣ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನ ರೈತರು ಇದರ ಸದುಪಯೋಗವನ್ನು ಪಡೆಯಬೇಕು ಎಂಬುದಾಗಿ ಹೇಳಿದರು.
ಕಾಲೇಜಿನ ಸಹ ಪ್ರಾದ್ಯಾಪಕರಾದ ಡಾ.ಪ್ರಕಾಶ್ ಕೆರೂರೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ ಗಣ್ಯರಿಂದ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ.ಸುರೇಶ್, ಸಂಶೋಧನಾ ನಿರ್ದೇಶಕರಾದ ಡಾ.ಶರಣಪ್ಪ ಜಂಗಡಗಿ, ವಿಜ್ಞಾನಿಗಳಾದ ಡಾ.ಪರಶುರಾಮಚಂದ್ರವಂಶಿ, ವೀರಭದ್ರರೆಡ್ಡಿ, ಗೋಡಂಬಿ ಬೆಳೆಗಾರರಾದ ಮೀರಾಸಾಬಿ, ದಯಾನಂದ, ರೈತಮುಖಂಡರಾದ ಲಿಂಗಪ್ಪ ಸೇರಿದಂತೆ ತಾಲ್ಲೂಕಿನ ರೈತರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading