ಕುರುಕ್ಷೇತ್ರ ನಾಟಕದ ಮಾಕ್ ಅಭಿನಯದಲ್ಲಿ ಶ್ರೀಕೃಷ್ಣನ ಆದರ್ಶಗಳ ಕುರಿತು ಎನ್. ರಘುಮೂರ್ತಿ ಪ್ರಶಂಸೆ
ದೊಡ್ಡ ಉಳ್ಳರ್ತಿ ಗ್ರಾಮದಲ್ಲಿ ಗೌರಿದೇವಿ ನಾಟಕ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ “ಕುರುಕ್ಷೇತ್ರ” ಪೌರಾಣಿಕ ನಾಟಕದ ಮಾಕ್ ಅಭಿನಯ ಕಾರ್ಯಕ್ರಮದಲ್ಲಿ ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಅವರು ಭಾಗವಹಿಸಿ ಶ್ರೀಕೃಷ್ಣನ ಪಾತ್ರಧಾರಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
“ಶ್ರೀ ಕೃಷ್ಣನ ಹುಟ್ಟು ಮತ್ತು ಸಾವಿಗಿಂತ ಅವನ ಬದುಕು ಜಗತ್ತಿನಲ್ಲಿಯೇ ಸರ್ವ ಶ್ರೇಷ್ಠವಾದದ್ದು” ಎಂದು ಅವರು ಅಭಿಪ್ರಾಯಪಟ್ಟರು. ಭಗವಾನ್ ಶ್ರೀಕೃಷ್ಣನ ಆದರ್ಶಗಳನ್ನು ಕೇವಲ ಅಭಿನಯಿಸುವುದಷ್ಟೇ ಅಲ್ಲದೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಪಾವನವಾಗುತ್ತದೆ ಎಂದರು. ಜೈಲಿನಲ್ಲಿ ಜನಿಸಿದ ಶ್ರೀಕೃಷ್ಣನು ಕೊನೆಗೆ ಬೇಟೆಗಾರನ ಬಾಣಕ್ಕೆ ಗುರಿಯಾಗಿ ಸಾವನ್ನಪ್ಪಿದರೂ, ಅವನ ಬದುಕು ಸಮಾಜಕ್ಕೆ ನೀಡಿದ ಸಂದೇಶ ಮತ್ತು ಆದರ್ಶಗಳು ಹುಟ್ಟಿನಿಂದ ಸಾವಿನವರೆಗೆ ನಾವು ಹೇಗೆ ಬದುಕಬೇಕು ಎಂಬುದಕ್ಕೆ ಶ್ರೇಷ್ಠ ಮಾದರಿಯಾಗಿದೆ ಎಂದು ಹೇಳಿದರು.







ಚಿತ್ರದುರ್ಗ ಜಿಲ್ಲೆಯ ಕಲಾವಿದರು ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಅಭಿನಯದಲ್ಲಿ ಅತ್ಯುತ್ತಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಅವರ ಡೈಲಾಗ್ ಡಿಲವರಿ, ಭಾವನಾತ್ಮಕ ಅಭಿವ್ಯಕ್ತಿ ಹಾಗೂ ಪಾತ್ರಗಳಿಗೆ ಜೀವ ತುಂಬುವ ಶೈಲಿ ಶ್ಲಾಘನೀಯವಾಗಿದೆ ಎಂದರು. ಬಡತನ, ಅನಕ್ಷರತೆ ಮತ್ತು ಮುಗ್ಧತೆಯನ್ನು ಮೀರಿ “ಕುರುಕ್ಷೇತ್ರ”, “ವೀರ ಅಭಿಮನ್ಯು”, “ಸಂಪೂರ್ಣ ರಾಮಾಯಣ” ಮುಂತಾದ ಪೌರಾಣಿಕ ನಾಟಕಗಳನ್ನು ಈ ಭಾಗದ ಕಲಾವಿದರು ನೈಪುಣ್ಯದಿಂದ ಪ್ರದರ್ಶಿಸುತ್ತಿದ್ದಾರೆ. ಇದಕ್ಕೆ ಚಿತ್ರದುರ್ಗದ ಐತಿಹಾಸಿಕ ಪರಂಪರೆ ಮೂಲ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಇಲ್ಲಿನ ಯುವಕರು ಸ್ವಾಭಿಮಾನ ಮತ್ತು ಶ್ರದ್ಧೆಗೆ ಶುದ್ಧ ಹಸ್ತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಕುರುಕ್ಷೇತ್ರ” ನಾಟಕಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹಾಗೂ ನಾಟಕ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಂಗಾರೆಡ್ಡಿ, ಎರಗುಂಟಪ್ಪ, ತಿಪ್ಪೇಶಿ, ರಂಗಪ್ಪ ಸೇರಿದಂತೆ “ಕುರುಕ್ಷೇತ್ರ” ನಾಟಕದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.