September 14, 2025
1740749150820.jpg



ಚಿತ್ರದುರ್ಗ  ಫೆ.27:
ದೇಶದಲ್ಲಿ ನಿಷೇಧಗೊಂಡಿರುವ ಜೀತ ಪದ್ಧತಿಯ ಸ್ವರೂಪ, ಆಧುನಿಕ ಕಾಲಕ್ಕೆ ತಕ್ಕಂತೆ ಈಗ ಬೇರೆಯದೇ ಸ್ವರೂಪದಲ್ಲಿ ನಡೆದಿದ್ದು, ಇದರ ನಿರ್ಮೂಲನೆ ಸವಾಲಿನ ವಿಷಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮುಕ್ತಿ ಅಲಿಯನ್ಸ್ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಲಾದ “ಜೀತ ಪದ್ಧತಿ ನಿಷೇಧ ಕಾರ್ಯಾಗಾರ” ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದಂತಹ ಅತ್ಯಂತ ಕೆಟ್ಟ ಪದ್ಧತಿ ಎಂದರೆ ಅದು ಜೀತ ಪದ್ಧತಿ. ಇದರ ನಿರ್ಮೂಲನೆಗಾಗಿಯೇ 1976 ರ ಫೆಬ್ರವರಿ 09 ರಂದು ಜೀತ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ಬಂದಿತು. ಇದರ ಸ್ಮರಣೆಗಾಗಿಯೇ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿಂದೆ ಇದ್ದಂತಹ ಜೀತ ಪದ್ಧತಿ ಪ್ರಸ್ತುತ ದಿನಗಳಲ್ಲಿ ಇಲ್ಲ, ಇದು ನಿರ್ಮೂಲನೆ ಆಗಿದೆ ಎಂಬ ಭಾವನೆ ಇದೆ. ಜಿಲ್ಲೆಯಲ್ಲಿಯೂ ಕೂಡ ಇಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಪ್ರಕರಣ ವರದಿಯಾಗಿಲ್ಲ ಎಂದ ಮಾತ್ರಕ್ಕೆ ಇದು ಸಂಪೂರ್ಣ ನಿರ್ಮೂಲನೆ ಆಗಿದೆ ಎಂದು ಹೇಳಲು ಆಗುವುದಿಲ್ಲ. ಕಾಲ ಕಳೆದಂತೆ ಜೀತ ಪದ್ಧತಿಯು ಅನೇಕ ರೂಪಗಳನ್ನು ಪಡೆದು, ಅಸ್ತಿತ್ವದಲ್ಲಿದೆ, ಇದರ ಸ್ವರೂಪವೂ ಬದಲಾಗಿದೆ. ಇದರಲ್ಲಿ ಪ್ರಮುಖವಾದುದು ಮಾನವ ಕಳ್ಳ ಸಾಗಾಣಿಕೆ. ನವೀನ ಮಾದರಿಯ ಜೀತಪದ್ಧತಿ, ಮಾನವ ಕಳ್ಳ ಸಾಗಾಣಿಕೆ, ಬಲವಂತವಾಗಿ ದುಡಿಸಿಕೊಳ್ಳುವಿಕೆ, ಈ ಮೂರು ವಿಧಾನಗಳು ಈಗಲೂ ಕಂಡುಬರುತ್ತವೆ. ಹೀಗಾಗಿ ಇದರ ನಿರ್ಮೂಲನೆಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜೀತ ಕಾರ್ಮಿಕ ಪದ್ಧತಿ ನಿಷೇಧ ಅಧಿಕಾರಿಗಳನ್ನು ನೇಮಿಸಿ ಕಳೆದ ವರ್ಷ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಅಧಿಕಾರಿಗಳು, ಕಾಯ್ದೆಯ ಬಗ್ಗೆ ಹಾಗೂ ಕರ್ತವ್ಯಗಳ ಬಗ್ಗೆ ಅರಿತುಕೊಂಡು, ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಮಾತನಾಡಿ, ಜೀತ ಪದ್ಧತಿ ಈಗ ವಿರಳ, ನಗರ, ಪಟ್ಟಣ ಪ್ರದೇಶಗಳಲ್ಲಿ ಕಂಡುಬರದಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿದರೆ, ಅಲ್ಲಲ್ಲಿ ಕಂಡುಬರಬಹುದು. ಆದರೆ ಅದರ ಸ್ವರೂಪ ಬೇರೆಯಾಗಿರುತ್ತದೆ. ಈ ಹಿಂದೆ ಮದುವೆ, ಮನೆ ಇತ್ಯಾದಿಗಾಗಿ ಸಾಲ ಪಡೆದು, ಅವರ ಹೊಲ ಮನೆಗಳಲ್ಲಿಯೇ ಸಾಲ ಹಾಗೂ ಬಡ್ಡಿ ತೀರಿಸಲು ಬೇಸಾಯ, ಕುರಿ ಕಾಯುವುದು, ದನಕರುಗಳನ್ನು ಕಾಯುವಂತಹ ಪ್ರಕರಣಗಳು ಹೆಚ್ಚು ಇದ್ದವು. 1976 ರಲ್ಲಿಯೇ ಜೀತ ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಸಂತ್ರಸ್ಥರನ್ನು ಜೀತದಿಂದ ಮುಕ್ತಿಗೊಳಿಸಿ, ಅವರಿಗೆ ಪುನರ್ವಸತಿ ಹಾಗೂ ಪರಿಹಾರ ಒದಗಿಸುವ ಕಾರ್ಯವನ್ನು ಸರ್ಕಾರದಿಂದೇ ಮಾಡಲಾಗುತ್ತದೆ. ರಾಜ್ಯದಲ್ಲಿ ಕೃಷಿ, ರೇಷ್ಮೆ, ಕಟ್ಟಡ ಕಾಮಗಾರಿ, ಹೋಟೆಲ್, ಇಟ್ಟಿಗೆ ಭಟ್ಟಿ, ಕೋಳಿ ಫಾರಂ ಮುಂತಾದ ಕಡೆಗಳಲ್ಲಿ ಬಲವಂತವಾಗಿ ದುಡಿಯುವ ಜೀತ ಕಾರ್ಮಿಕರು ಕಂಡುಬರುತ್ತವೆ. ಹೀಗಾಗಿ ಜೀತ ಪದ್ಧತಿ ನಿರ್ಮೂಲನೆಯಾಗಿದ್ದರೂ, ಇದು ಬೇರೆ ಸ್ವರೂಪದಲ್ಲಿ ಈಗಲೂ ಅಸ್ತಿತ್ವದಲ್ಲಿದೆ. ಗ್ರಾಮೀಣ ಮಟ್ಟದಲ್ಲಿ, ಜೀತ ಕಾರ್ಮಿಕ ನಿಷೇಧ ಅಧಿಕಾರಿಗಳು, ಯಾವುದೇ ಪ್ರಭಾವಕ್ಕೆ, ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ, ಅಂತಹ ಜೀತ ಕಾರ್ಮಿಕರನ್ನು ವಿಮುಕ್ತಿಗೊಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಕೇವಲ ವರದಿ ನೀಡಬೇಕು ಎಂಬ ಕಾರಣಕ್ಕಾಗಿಯೇ “ಯಾರೂ ಜೀತ ಕಾರ್ಮಿಕರು ಇಲ್ಲ” ಎಂಬ ವರದಿಯನ್ನು ಸಲ್ಲಿಸುವುದು ಸರಿಯಲ್ಲ. ಹೀಗಾಗಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಜಿಲ್ಲೆಯಲ್ಲಿ ಆಗಬೇಕಿದ್ದು, ಇದಕ್ಕೆ ಅಧಿಕಾರಿ, ಸಿಬ್ಬಂದಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಜೀತ ಪದ್ಧತಿ ನಿಷೇಧದ ಬಗ್ಗೆ ಈಗ ಜನರಲ್ಲಿ ಜಾಗೃತಿ ಹಾಗೂ ಅರಿವು ಇದ್ದು, ಪ್ರಕರಣಗಳು ಕಡಿಮೆ ಇದೆ. ಆದರೆ ಇದು ಅವರ ಅರಿವಿಲ್ಲದೇ ಬೇರೆ ಸ್ವರೂಪದಲ್ಲಿ ನಡೆಯುತ್ತಿದೆ. ಇದರ ತಡೆಗಾಗಿಯೇ ಜಿಲ್ಲೆಯಲ್ಲಿ ಕಾರ್ಯಪಡೆ ಇದೆ. ಮಾಹಿತಿ ಇದ್ದರೂ, ಅದನ್ನು ಸಂಬಧಪಟ್ಟ ಅಧಿಕಾರಿಗಳಿಗೆ ನೀಡದೇ ಇರುವುದು ಕೂಡ ತಪ್ಪಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಬಗೆಯ ಜೀತ ಪದ್ಧತಿ, ಜೀತ ಕಾರ್ಮಿಕರು, ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಕಂಡುಬಂದರೆ ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ನೀಡಬಹುದು ಎಂದರು.
ಕಾರ್ಯಕ್ರಮದ ಅಂಗವಾಗಿ ಜೀತ ಪದ್ಧತಿ ನಿರ್ಮೂಲನೆ ಕುರಿತು ಎಲ್ಲ ಗಣ್ಯರು, ಅಧಿಕಾರಿಗಳು ಇದೇ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಮುಕ್ತಿ ಅಲಯನ್ಸ್‍ನ ಸಂಚಾಲಕರಾದ ಬೃಂದಾ ಅಡಿಗ, ರಾಜೇಂದ್ರನ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading