
ಹಿರಿಯೂರು:
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರನ್ನು ಒಳಗೊಂಡ ಪೀಠವು ಮೀಸಲಾತಿ ಸಂವಿಧಾನಬದ್ದವೆಂದು ಹಾಗೂ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ಜಾರಿ ಮಾಡಲು ಅಧಿಕಾರವಿದೆ ಎಂದು ತೀರ್ಪು ನೀಡಿದೆ ಆದರೆ ರಾಜ್ಯ ಸರ್ಕಾರ ದಲಿತರಿಗೆ ಒಳಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವುದು ದಲಿತರಿಗೆ ಮಾಡುತ್ತಿರುವ ವಂಚನೆಯಾಗಿದೆ ಎಂಬುದಾಗಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಪಿ.ಶ್ರೀನಿವಾಸ್ ಆರೋಪಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರದಂದು ದಲಿತಪರ ಸಂಘಟನೆಗಳು ಮತ್ತು ಮಾದಿಗ ಸಮುದಾಯದ ವತಿಯಿಂದ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ತಾಲ್ಲೂಕು ತಹಶೀಲ್ದಾರರಿಗೆ ಮನವಿಪತ್ರ ಸಲ್ಲಿಸಿ, ಅವರು ಮಾತನಾಡಿದರು.
ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣವೇ ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿಕೊಂಡಿತ್ತಲ್ಲದೆ, ಚಿತ್ರದುರ್ಗದಲ್ಲಿ ನಡೆದ ಎಸ್.ಸಿ. ಎಸ್.ಟಿ. ಸಮಾವೇಶದಲ್ಲಿ 6ನೇ ಗ್ಯಾರಂಟಿಯಾಗಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು,
ಆದರೆ ಸರ್ಕಾರ ಆಯೋಗಕ್ಕೆ ಇಲ್ಲಿಯವೆರೆಗೂ ಆಯ್ಕೆಯ ಆದೇಶ ಪತ್ರ ನೀಡದೇ ಇರುವುದು ಕೂಡ ಕಾಲಹರಣದ ಭಾಗವಾಗಿದೆ, ಆದ್ದರಿಂದ ರಾಜ್ಯಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಎಚ್.ಎಸ್. ಮಾರುತೇಶ್ ಕೂನಿಕೆರೆ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷರಾದ ಬೋರನಕುಂಟೆ ಕರಿಯಣ್ಣ, ಮಾದಿಗ ದಲಿತ ಸೇನೆ ತಾಲ್ಲೂಕು ಸಂಘಟನೆ ಕಾರ್ಯದರ್ಶಿ ಆರ್. ರಾಘವೇಂದ್ರ ಓಬಳಾಪುರ, ಕೆ.ಎಸ್.ತಿರುಮಲೇಶ್, ಎಸ್.ಸುರೇಶ್, ಎನ್.ತಿಪ್ಪೇಸ್ವಾಮಿ, ಶಿವಣ್ಣ, ಪ್ರಕಾಶ್, ನರಸಿಂಹಯ್ಯ, , ಖಂಡೇನಹಳ್ಳಿ ಶಿವು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.