December 14, 2025
1761573631025.jpg

ಹಿರಿಯೂರು :
ತಾಲ್ಲೂಕಿನಲ್ಲಿ ಸರ್ಕಾರಿ ಗೋಮಾಳ, ಹುಲ್ಲುಬನ್ನಿ, ಅರಣ್ಯ ಇನ್ನಿತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಭೂಮಿಯ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಸಾವಿರಾರು ಸಂಖ್ಯೆಯಲ್ಲಿದ್ದು, ಭೂಮಂಜೂರಾತಿಗೆ ಕೆಲವು ಕಾನೂನುಗಳನ್ನು ಮುಂದೆಮಾಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಕೆ.ಸಿ. ಹೊರಕೇರಪ್ಪ ಅವರು ಆರೋಪಿಸಿದ್ದಾರೆ.
ನಗರದ ಗಾಂಧಿ ಸರ್ಕಲ್ ನಲ್ಲಿ ತಾಲ್ಲೂಕಿನ ಬಡವರಿಗೆ ಬಗರ್ ಹುಕುಂ ಭೂಮಿ ಮಂಜೂರಾತಿ ಮಾಡುವಂತೆ ಒತ್ತಾಯಿಸಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿಪತ್ರ ಸಲ್ಲಿಸಿ ಅವರು ಮಾತನಾಡಿದರು.
ಸಾವಿರಾರು ಬಡ ಕುಟುಂಬಗಳು ಅರ್ಜಿ ಸಲ್ಲಿಸಿ ಭೂಮಿಯ ಹಕ್ಕು ಪತ್ರಕ್ಕಾಗಿ ಕಾಯುತ್ತಲೇ ಇದ್ದಾರೆ. ಸರ್ಕಾರ ಬಡವರಿಗೆ ಭೂಮಿ ನೀಡುವುದನ್ನು ಆದ್ಯತೆ ಮಾಡಿಕೊಳ್ಳದೆ ಶ್ರೀಮಂತರಿಗೆ, ಕಂಪನಿಗಳಿಗೆ, ಕಾರ್ಪೊರೇಟ್ ಹಿತಾಸಕ್ತಿ ಕಾಯುತ್ತಿದೆ ಸರ್ಕಾರದ ಈ ನೀತಿಯನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ತೀವ್ರವಾಗಿ ಖಂಡಿಸುತ್ತದೆ ಎಂದರಲ್ಲದೆ,
ಸಂವಿಧಾನದ ಆಶಯದಂತೆ ಬಡವರ ಭೂಮಿ-ವಸತಿ ಹಕ್ಕು ನ್ಯಾಯಯುತವಾದದ್ದು, ಇದನ್ನು ನಿರಾಕರಿಸುವುದು ಸಮಾನತೆಯನ್ನು ನಿರಾಕರಿಸಿದಂತೆ. ಸರ್ಕಾರ ಬಡವರಿಗೆ ಭೂಮಿ-ವಸತಿ ನೀಡುವ ವಿಚಾರದಲ್ಲಿ ಕುಂಟು ನೆಪ ಹೇಳದೆ ಭೂಮಿಗಾಗಿ, ವಸತಿಗಾಗಿ ಅರ್ಜಿ ಸಲ್ಲಿಸಿ ಎಲ್ಲರಿಗೂ ಭೂಮಿ-ವಸತಿ ಮಂಜೂರಾತಿ ಮಾಡಬೇಕೆಂದು ತಾಲ್ಲೂಕು, ಜಿಲ್ಲಾಡಳಿತವನ್ನೂ ಒಳಗೊಂಡಂತೆ ಸರ್ಕಾರವನ್ನು ಒತ್ತಾಯಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ , ರಾಜ್ಯ ಮುಖಂಡರಾದ ಕುಮಾರ್ ಸಮತಲ ಮಾತನಾಡಿ, ರಾಜ್ಯದ ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸುವ ಭಾಗವಾಗಿ ಭೂಮಿ ಮಂಜೂರಾತಿ ತೊಡಕಾಗಿರುವ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ “ಒನ್ ಟೈಮ್ ಸೆಟಲ್ ಮೆಂಟ್” ಜಾರಿ ಮಾಡಬೇಕು,
ಅಲ್ಲದೆ ಬಗರ್ ಹುಕುಂ ಫಾರಂ ನಂ. 50, 53ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ,ಭೂರಹಿತರಿಗೆ ಈ ಕೂಡಲೇ ಭೂಮಿ ಮಂಜೂರಾತಿ ನೀಡಬೇಕು. ಅರಣ್ಯ-ಕಂದಾಯ ಭೂಮಿಗಳ ಜಂಟಿ ಸರ್ವೆ ನಡೆಸಿ ಸರ್ಕಾರ ಕಂದಾಯ-ಅರಣ್ಯ ಭೂಮಿಗಳ ಗೊಂದಲ ನಿವಾರಿಸಬೇಕು.
ಅಲ್ಲದೆ, ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಾರದು. ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಸಾಗುವಳಿ ಚೀಟಿ ಹೊಂದಿರುವವರಿಗೆ ಪಹಣಿ ನೀಡಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಬೇಕು. ಮನೆ ಇಲ್ಲದವರಿಗೆ ಈ ಕೂಡಲೇ ಮನೆ ನಿರ್ಮಿಸಿಕೊಡಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ರಾಜ್ಯಾಧ್ಯಕ್ಷರಾದ ಮರಿಯಪ್ಪ ಮಾತನಾಡಿ, ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿ ಕೊಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶಕ್ಕೆ ಅನ್ನ ನೀಡುವ ರೈತರಿಗೆ ಸುಮಾರು ನಾಲ್ಕು ಐದು ದಶಕಗಳಿಂದ ಭೂಮಿ ಉಳುಮೆ ಮಾಡುತ್ತಾ ಬಂದಿದ್ದರು ಇದುವರೆಗೂ ಭೂಮಿ ನೀಡದೆ ಅನ್ಯಾಯವೆಸುಗುತ್ತಿದೆ ಎಂಬುದಾಗಿ ಅವರು ತೀವ್ರವಾಗಿ ಆಪಾದಿಸಿದರು.
ಈ ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ , ರಾಜ್ಯ ಮುಖಂಡರಾದ ಕುಮಾರ್ ಸಮತಲ, ರಾಜ್ಯಾಧ್ಯಕ್ಷರಾದ ಮರಿಯಪ್ಪ, ಜಿಲ್ಲಾಧ್ಯಕ್ಷರಾದ ಸತ್ಯಪ್ಪ ಮಲ್ಲಾಪುರ, ಬಿ.ಎಸ್.ಪಿ. ಹನುಮಂತರಾಯಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಎನ್.ಮಹಲಿಂಗಪ್ಪ, ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ರೈತಮುಖಂಡರುಗಳಾದ ಹೆಚ್.ನರಸಿಂಹಮೂರ್ತಿ, ಕೆ.ತಿಪ್ಪೇಸ್ವಾಮಿ, ಜಿ.ರಾಘವೇಂದ್ರ, ಎ.ಐ.ಬಿ.ಎಸ್.ಪಿ. ಮೊಹಿದ್ದೀನ್, ಸಿ.ತಿಮ್ಮಣ್ಣ, ಎಂ.ಕೃಷ್ಣ, ವಿಜಯ್ ಕುಮಾರ್, ರಂಗಸ್ವಾಮಿ, ನೂರುಲ್ಲಾ, ಎ.ಐ.ಬಿ.ಎಸ್.ಪಿ. ತಾಲ್ಲೂಕು ಅಧ್ಯಕ್ಷರಾದ ಜಗದೀಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading