September 15, 2025
1748342948117.jpg



ಚಿತ್ರದುರ್ಗಮೇ 27:
ಬದುಕಿಗೆ ಕಣ್ಣುಗಳು ಬಹಳ ಅವಶ್ಯಕವಾಗಿದ್ದು, ಕಾಲಕಾಲಕ್ಕೆ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ನಗರಸಭೆ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಎಲ್ಲ ಚಟುವಟಿಕೆಗಳಿಗೆ ಮೂಲ ಕಣ್ಣು. ಕಣ್ಣುಗಳು ನಮ್ಮ ಆತ್ಮದ ಕಿಟಕಿಗಳಿದ್ದಂತೆ, ಕಣ್ಣಿನ ಬಗ್ಗೆ ಕಾಳಜಿ, ರಕ್ಷಣೆ ವಹಿಸುವುದು ಅತ್ಯಂತ ಅವಶ್ಯಕವಾಗಿದ್ದು, ಉಚಿತ ಕಣ್ಣಿನ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಹೊರ ಜಗತ್ತನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ ಅವರು, ವ್ಯಕ್ತಿಯ ಮರಣದ ನಂತರ ನೇತ್ರದಾನಕ್ಕೆ ಅವಕಾಶವಿದ್ದು, ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗೋಣ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್. ರಾಘವೇಂದ್ರ ಮಾತನಾಡಿ, ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಉಚಿತ ಕಣ್ಣಿನ ತಪಾಸಣೆ ಶಿಬಿರಗಳಿಗೆ ನಗರಸಭೆ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ನೇತ್ರದಾನ ಮಹಾದಾನವಾಗಿದ್ದು, ಎಲ್ಲರೂ ಸಹ ಕೈಜೋಡಿಸಬೇಕಿದೆ ಎಂದರು.
ಚಲನಚಿತ್ರ ಕಲಾವಿದ ದೊಡ್ಡಣ್ಣ ಮಾತನಾಡಿ, ಕೆ.ಸಿ.ವೀರೇಂದ್ರ (ಪಪ್ಪಿ) ಶಾಸಕರಾಗಿ ಆಯ್ಕೆಯಾದ ಮರುದಿನದಿಂದಲೇ ಕ್ಷೇತ್ರದ ಜನರ ಸೇವೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಿಕೊಂಡು ಬರಲಾಗಿದೆ. ಇದುವರೆಗೂ 20 ಗ್ರಾಮ ಪಂಚಾಯಿತಿಗಳಲ್ಲಿ ಕಣ್ಣು ತಪಾಸಣಾ ಶಿಬಿರವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಕ್ಷೇತ್ರದಲ್ಲಿ 6,451 ಜನರು ಪರೀಕ್ಷೆಗೆ ಒಳಗಾಗಿ, ಈ ಪೈಕಿ 667 ಜನರು ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, 2,460 ಜನರಿಗೆ ಕನ್ನಡಕಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ನಗರದ ಎಲ್ಲ ವಾರ್ಡ್‍ಗಳಲ್ಲಿ ಪ್ರತಿ ತಿಂಗಳು ಒಂದೊಂದು ವಾರ್ಡಿನ ನಾಗರೀಕರಿಗೆ ಪ್ರತ್ಯೇಕವಾಗಿ ಉಚಿತ ಕಣ್ಣಿನ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು. ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ. ಜಿ.ಓ.ನಾಗರಾಜ್ ಮಾತನಾಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಉಚಿತ ಕಣ್ಣಿ ಆರೋಗ್ಯ ತಪಾಸಣೆಗಳನ್ನು ಆಯೋಜಿಸಲಾಗಿದ್ದು, ಇಂದು ಚಿತ್ರದುರ್ಗ ನಗರದ 27ನೇ ವಾರ್ಡ್‍ನಲ್ಲಿ ಶಿಬಿರ ಆಯೋಜಿಸಲಾಗಿದೆ. ಪ್ರತಿ ತಿಂಗಳು ಒಂದೊಂದು ವಾರ್ಡಿನ ನಾಗರೀಕರಿಗೆ ಪ್ರತ್ಯೇಕವಾಗಿ ಶಿಬಿರ ನಡೆಯಲಿದೆ. ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್, ಡಿವೈಎಸ್‍ಪಿ ಪಿ.ಕೆ.ದಿನಕರ್, ಶಂಕರ ಕಣ್ಣಿನ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ರವಿಶಂಕರ್, ಮಾಜಿ ನಗರಸಭಾ ಅಧ್ಯಕ್ಷ ಹೆಚ್.ಸಿ. ನಿರಂಜನಮೂರ್ತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಸೇರಿದಂತೆ ಮುಖಂಡರಾದ ಮುಹಿಬುಲ್ಲಾ, ನರಸಿಂಹಮೂರ್ತಿ ಮತ್ತಿತರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading