December 14, 2025
1743083206148.jpg


ಚಿತ್ರದುರ್ಗ  ಮಾರ್ಚ್ 27:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ, ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ಕನಿಷ್ಟ 2 ಎಕರೆ ಭೂಮಿ ಒದಗಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದಜ್ಜಿ ಅವರ ನೇತೃತ್ವದ ನಿಯೋಗ ಬುಧವಾರದಂದು ಮನವಿ ಸಲ್ಲಿಸಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ದಾಖಲೆಗಳನ್ನು ಪರಿಶೀಲಿಸಿ, ಭೂಮಿ ಒದಗಿಸುವ ಭರವಸೆ ನೀಡಿದರು.
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದಜ್ಜಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರಿ ನೌಕರರ ವಿವಿಧ ಸಮುದಾಯ ಆಧಾರಿತ ಚಟುವಟಿಕೆಗಳಿಗಾಗಿ ನಗರದಲ್ಲಿ ಸಮುದಾಯ ಭವನ ನಿರ್ಮಿಸುವ ಅವಶ್ಯಕತೆ ಇದ್ದು, ಇದಕ್ಕಾಗಿ ಕನಿಷ್ಟ 2 ಎಕರೆ ಭೂಮಿಯನ್ನು ಗುರುತಿಸಿ, ಮಂಜೂರಾತಿ ನೀಡಬೇಕು. ಬರುವ ಏಪ್ರಿಲ್ 16, 17 ರಂದು ಎರಡು ದಿನಗಳ ಕಾಲ ನೌಕರರ ಸಂಘದ ವಾರ್ಷಿಕ ಕ್ರೀಡಾ ಕೂಟ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಸಂಬಂಧಿಸಿದ ಜಿಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಿಕೊಡಬೇಕು ಎಂದು ಕೋರಿದರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಏ. 16 ರಂದು ಇತರೆ ಸ್ಪರ್ಧಾತ್ಮಕ ಪರೀಕ್ಷೆ ಇರುವುದರಿಂದ, ಏ. 16 ರ ದಿನವನ್ನು ಬದಲಾಯಿಸುವಂತೆ ಹಾಗೂ ಕ್ರೀಡಾಕೂಟದ ಉದ್ಘಾಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಿ, ಅವರು ಆಗಮಿಸುವ ದಿನಕ್ಕೆ ಅನುಗುಣವಾಗಿ ದಿನಾಂಕ ಬದಲಾವಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಯಾರಿಗೂ ತೊಂದರೆ ಆಗದ ರೀತಿಯಲ್ಲಿ, ಏ. 16 ರ ಬದಲು ಏ. 15 ರಂದೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಕ್ರೀಡಾ ಕೂಟ ಉದ್ಘಾಟನೆಗಾಗಿ ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಬಯಲುಸೀಮೆ ಜಿಲ್ಲೆಯಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯ ಕಾರಣದಿಂದ ಬೇಸಿಗೆಯ ಬಿಸಿಲಿನ ತಾಪಮಾನ ತೀವ್ರ ಹೆಚ್ಚಳವಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬರುವ ದಿನಗಳಲ್ಲಿ ಜಿಲ್ಲೆಯಲ್ಲಿಯೂ ತೀವ್ರ ಉಷ್ಣಗಾಳಿ ಬೀಸುವ ಸಂಭವವಿದ್ದು, ಕಚೇರಿಗೆ ಆಗಮಿಸುವ ಸಾರ್ವಜನಿಕರು, ವೃದ್ಧರು ಹಾಗೂ ಸರ್ಕಾರಿ ನೌಕರರಿಗೂ ತೊಂದರೆಯಾಗದಂತೆ ಕಚೇರಿ ಸಮಯವನ್ನು ಉತ್ತರ ಕರ್ನಾಟಕದ ಮಾದರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ನಿಗದಿಪಡಿಸುವಂತೆ ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಹವಾಮಾನ ವೈಪರಿತ್ಯದಿಂದ ಸಾರ್ವಜನಿಕರು ಹಾಗೂ ನೌಕರರಿಗೆ ತೊಂದರೆಯಾಗುವಂತಹ ಸ್ಥಿತಿ ನಿರ್ಮಾಣವಾದಲ್ಲಿ, ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಖಜಾಂಚಿ ಮಲ್ಲಿಕಾರ್ಜುನ್, ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯಾಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷರಾದ ಹೆಚ್. ಪೂಜಾರ್, ಬಿ. ರುದ್ರಮುನಿ, ವಿಮಲಾಕ್ಷಿ ಸೇರಿದಂತೆ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading