ಚಿತ್ರದುರ್ಗ .ಜ.27:
ಕೋಟೆನಾಡು ಚಿತ್ರದುರ್ಗದಲ್ಲಿ ಶಿಕ್ಷಣ ಕ್ಷೇತ್ರದ ಗುಣಮಟ್ಟ ಸುಧಾರಿಸಲು ಜಾರಿಗೆ ತರಲಾದ “ಎಡ್ ಲ್ಯಾಬ್” ಜಿಲ್ಲೆಯ ಶೈಕ್ಷಣಿಕ ಚಿತ್ರಣ ಬದಲಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದು, ರಾಜ್ಯದ ಗಮನ ಸೆಳೆದಿದೆ.

ಚಿತ್ರದುರ್ಗ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸೋಮವಾರ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು “ಎಡ್ ಲ್ಯಾಬ್ ಹಾಗೂ ಡಿಜಿಟಲ್ ಕೊಠಡಿ” ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಮಾತನಾಡಿ, ಸುಮಾರು 18 ಲಕ್ಷ ಜನಸಂಖ್ಯೆ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಶೈಕ್ಷಣಿಕ ಹಿನ್ನಡೆ ಹೋಗಲಾಡಿಸಿ, ಶಿಕ್ಷಣದ ಗುಣಮಟ್ಟ ಸುಧಾರಿಸಲು “ಎಡ್ ಲ್ಯಾಬ್” ಆಶಾದಾಯಕ ಬದಲಾವಣೆ ತರುತ್ತಿದೆ ಎಂದು ಹೇಳಿದರು.
ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳಲ್ಲಿ 23ನೇ ಸ್ಥಾನಕ್ಕೆ ಪಡೆದಿರುತ್ತದೆ. ಪ್ರಥಮ್ ಸಂಸ್ಥೆಯವರು ನಡೆಸುವಂತಹ ಅಸರ್ 2025 ರ ವರದಿಯ ಪ್ರಕಾರ, ಜಿಲ್ಲೆಯ 6 ರಿಂದ 8 ನೇ ತರಗತಿಯ ಮಕ್ಕಳಲ್ಲಿ ಕೇವಲ ಶೇ.48.8ರಷ್ಟು ಮಕ್ಕಳಿಗೆ ಮಾತ್ರ 2ನೇ ತರಗತಿಯ ಪಠ್ಯ ಓದಲು ಬರುತ್ತಿದ್ದು, ಕೇವಲ ಶೇ.36.5 ಮಕ್ಕಳಿಗೆ ಮಾತ್ರ ಎರಡಂಕಿ ಗಣಿತದ ಜ್ಞಾನವಿರುವುದು ವರದಿಯಾಗಿತ್ತು. ಈ ಶೋಚನೀಯ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ “ಎಡ್ ಲ್ಯಾಬ್’ ಕಾರ್ಯಾರಂಭ ಮಾಡಿತು ಎಂದು ಮಾಹಿತಿ ನೀಡಿದರು.
ಪ್ರಾರಂಭದಲ್ಲಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಎಡ್‍ಲ್ಯಾಬ್‍ನ ಮುಖಾಂತರ ಶಿಕ್ಷಕರ ಸಮಯ ಬಳಕೆ ಸರ್ವೆ ಒಂದನ್ನು ನಡೆಸಲಾಗಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಒಬ್ಬ ಶಿಕ್ಷಕ ವಾರ್ಷಿಕವಾಗಿ ಸುಮಾರು 200 ರಿಂದ 250 ತರಗತಿಗಳನ್ನು ತೆಗೆದುಕೊಳ್ಳುವ ಅವಧಿಯನ್ನು ಕೇವಲ ಡೇಟಾ ಎಂಟ್ರಿ ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ವ್ಯಯಿಸುತ್ತಿದ್ದಾರೆ. ಇದನ್ನು ಮನಗಂಡು, ಈಗ ಶಾಲಾ ಮಟ್ಟದಲ್ಲಿ ಬೋಧಕೇತರ ಕಾರ್ಯಗಳ ಹೊರೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಆಗಸ್ಟ್-2025 ರಿಂದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಫಲಿತಾಂಶ ಉತ್ತಮಪಡಿಸಲು ಈ ಸಂಸ್ಥೆಯು ಹಲವು ತಂತ್ರಗಾರಿಕೆಗಳನ್ನು ಜಾರಿಗೆ ತಂದಿದೆ. ಇದರ ಫಲವಾಗಿ “ಗಣಿತ ಗಣಕ” ಮತ್ತು ‘ಓದು ಕರ್ನಾಟಕ’ ಕಾರ್ಯಕ್ರಮಗಳಲ್ಲಿ ಚಿತ್ರದುರ್ಗ ಜಿಲ್ಲೆಯು ಕಳೆದ 6 ತಿಂಗಳಿನಲ್ಲಿ ಅತ್ಯುನ್ನತ ಸಾಧನೆಗೈದು ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ. ಎರಡಂಕಿ ಭಾಗಾಕಾರ ಸಮಸ್ಯೆ ಬಿಡಿಸುವ ಮಕ್ಕಳ ಪ್ರಮಾಣವು ಶೇ. 2 ರಿಂದ ಶೇ. 22ಕ್ಕೆ ಏರಿಕೆಯಾಗಿದೆ. 30 ದಿನಗಳ “ಓದು ಕರ್ನಾಟಕ” ಕಾರ್ಯಕ್ರಮದ ನಂತರ, ಶೇ. 34 ರಷ್ಟು ಮಕ್ಕಳು ಸರಳ ಪಠ್ಯ ಓದಬಲ್ಲರು ಹಾಗೂ ಶೇ.66ರಷ್ಟು ಮಕ್ಕಳು ಮೂರಂಕಿ ಸಂಖ್ಯೆ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗಿನ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಎಡ್ ಲ್ಯಾಬ್ ಮೂಲಕ ಪರಿಣಾಮಕಾರಿ ತರಬೇತಿ ನೀಡಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿ ಸೃಜಿಸಲಾಗಿರುವಂತಹ ನಮ್ಮ ಎಡ್ ಲ್ಯಾಬ್‍ನ ಮೂಲಕ ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಶೈಕ್ಷಣಿಕವಾಗಿ ಮೇಲ್ದರ್ಜೆಗೇರಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಾಸಿರುದ್ದೀನ್ ಸೇರಿದಂತೆ ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.