March 16, 2026
IMG-20251226-WA0284.jpg

ನಾಯಕನಹಟ್ಟಿ : ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೇವತೆಯಾದ ಕಾವಲು ಚೌಡೇಶ್ವರಿ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವು ಜನವರಿ 27ರಂದು ನಡೆಸಲು ಸಂಕಲ್ಪವಾಗಿದೆ ಎಂದು ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ(ಎತ್ತಿನಹಟ್ಟಿಗೌಡ್ರು) ಹೇಳಿದರು.

ಸಮೀಪದ ಹಿರೇಕೆರೆ ಕಾವಲು ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬುಡಕಟ್ಟು ಸಮುದಾಯದ ಆರಾದ್ಯ ದೇವತೆಯಾದ ಕಾವಲು ಚೌಡೇಶ್ವರಿ ದೇವಿಯು ಕೃಷಿಮೂಲ ಪರಂಪರೆಯ ಹಿನ್ನೆಲೆಯಲ್ಲಿ ಕಂಡುಬರುತ್ತದೆ. ರೈತರು ತಮ್ಮ ಜಾನುವಾರುಗಳಿಗೆ ಯಾವುದೇ ರೋಗರುಜಿನೆಗಳು ಬಂದರೂ ದೇವಿಯ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಹಾಗಾಗಿ ಇಂದಿಗೂ ಜಾತ್ರೆ ದಿನ ಸಂಜೆ ರೈತರು ತಮ್ಮ ಜಾನುವಾರುಗಳನ್ನು ದೇವಾಲಯದ ಬಳಿ ಕರೆತಂದು ಪ್ರದಕ್ಷಣೆ ಹಾಕಿಸಿ ಆ ರಾತ್ರಿ ಅಲ್ಲಿಯೇ ತಂಗಿಸಿ ಮರುದಿನ ತಮ್ಮ ಗ್ರಾಮಗಳಿಗೆ ಕರೆದುಕೊಂಡು ಹೋಗುತ್ತಾರೆ. ಇಂತಹ ಮಹತ್ವವನ್ನು ಹೊಂದಿರುವ ಜಾತ್ರೆಯು ಪ್ರತಿವರ್ಷ ಮಾಘ ಮಾಸದ ಎರಡನೇ ಮಂಗಳವಾರದಂದು ಆರಂಭವಾಗುತ್ತದೆ. ಹಾಗೇ ಸದರಿ ವರ್ಷ ಜಾತ್ರೆಗೆ 25ನೇ ವರ್ಷ ತುಂಬಲಿದ್ದು, ಜನವರಿ 27ರಿಂದ 29ರವೆರಗೆ ಅದ್ದೂರಿಯಾಗಿ ನಡೆಯಲಿದೆ. ಇದಕ್ಕಾಗಿ ರಥೋತ್ಸವದ ಸಕಲ ಸಿದ್ಧತೆಯನ್ನು ವಿಶೇಷವಾಗಿ ಮಾಡಿಕೊಳ್ಳಲಾಗುತ್ತಿದೆ.

ಈ ಜಾತ್ರೆಗೆ ನಾಯಕನಹಟ್ಟಿ ಹೋಬಳಿಯ ಚನ್ನಬಸಯ್ಯನಹಟ್ಟಿ, ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ಬೊಸೇದೇವರಹಟ್ಟಿ, ಜೋಗಿಹಟ್ಟಿ, ಭೀಮಗೊಂಡನಹಳ್ಳಿ, ಓಬಯ್ಯನಹಟ್ಟಿ ಸೇರಿದಂತೆ ತಳಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ ಜಿಲ್ಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಎಲ್ಲಾ ಜನಾಂಗದ ಭಕ್ತರು ಆಗಮಿಸಿ ತಮ್ಮ ಭಕ್ತಿಯನ್ನು ಸಮರ್ಪಿಸುವ ಪ್ರತೀತಿ ಇದೆ. ಹಾಗಾಗಿ ಮೂರು ದಿನಗಳು ದೇವಾಲಯದ ಬಳಿ ಸಂಪ್ರದಾಯದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.
ಈ ಸಂದರ್ಭದಲ್ಲಿ ಯಾವುದೇ ಕುಂದುಕೊರತೆ ಉಂಟಾಗದಂತೆ ಸುಸಜ್ಜಿತ ರಸ್ತೆ, ಬೀದಿದೀಪದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ನಾಯಕನಹಟ್ಟಿ ಪಟ್ಟಣದಿಂದ ಕಾವಲು ಪ್ರದೇಶಕ್ಕೆ ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಇದೇವೇಳೆ ಚೌಡೇಶ್ವರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳಾದ ಎಂ.ವೈ.ಟಿ.ಸ್ವಾಮಿ, ನಾಗರಾಜ, ಹನುಮಣ್ಣ, ಎಸ್.ಓಬಣ್ಣ, ದೊಡ್ಡಬೋರಯ್ಯ, ನಲ್ಲನಸಣ್ಣಬೋರಯ್ಯ, ಡಿ.ಜಿ.ಗೋವಿಂದಪ್ಪ, ಪ್ರಕಾಶ್, ಓಬಳೇಶ, ಆರ್.ಶ್ರೀಕಾಂತ್, ಪಿ.ಓಬಯ್ಯ, ಮಂಜುನಾಥ, ಬಿ.ಎಂ.ಪ್ರಕಾಶ್ ಅವರೂ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading