December 14, 2025
1764167688550.jpg

ಚಿತ್ರದುರ್ಗ, ನ. 26 :
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಶಿಕ್ಷಣ ಕಾರ್ಯಪಡೆ ರಚಿಸಿ, ಮೂರು ತಿಂಗಳಿಗೊಮ್ಮೆ ನಿಯಮಾನುಸಾರ ಕಡ್ಡಾಯವಾಗಿ ಸಭೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ಸಮರ್ಪಕವಾಗಿ ಅನುಷ್ಠಾನಗೊಂಡಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಕ್ಷಣ ಕಾರ್ಯಪಡೆ ರಚನೆಯಾಗಿಲ್ಲ ಎಂದು ತಿಳಿಸಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಶಿಕ್ಷಣ ಕಾರ್ಯಪಡೆ ರಚನೆ, ತೆರೆದ ಮನೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಪೋಕ್ಸೋ, ಬಾಲ್ಯ ವಿವಾಹ, ಬಾಲಗರ್ಭೀಣಿಯರು ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಶಾಲಾ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತನ್ನಿ: ಜಿಲ್ಲೆಯಲ್ಲಿ ಶಾಲಾ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಕಡಿಮೆಯಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಕೆಲವು ಅನುದಾನ ರಹಿತ ಶಾಲೆಗಳಲ್ಲಿ ಕಲಿಕಾ ಪ್ರಗತಿ ಹಿನ್ನಡೆಯಾಗಿರುವ ಮಕ್ಕಳಿಗೆ 10ನೇ ತರಗತಿಗೆ ಪ್ರವೇಶಾತಿ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಇದರ ಜೊತೆಗೆ ಮಕ್ಕಳು ಶಾಲೆಯಿಂದ ಹೊರಗುಳಿಯಲು ನಿಖರವಾದ ಕಾರಣ ಸೇರಿದಂತೆ ಶಾಲೆಯಿಂದ ಹೊರಗುಳಿದ ಮಕ್ಕಳ ವೈಯಕ್ತಿಕ ಮಾಹಿತಿ ಸಂಗ್ರಹಿಸಬೇಕು. ಎಂದು ತಿಳಿಸಿದ ಅವರು, ಶಿಕ್ಷಕರ ಕೊರತೆಯು ಸಹ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಶಿಕ್ಷಕರ ಕೊರತೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮ ವಹಿಸಲಾಗಿದೆ. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಶಾಲೆಗಳಿಗೆ ದಾಖಲಾತಿ ಆಗದಿರುವುದು, ಶಾಲೆಗಳಿಗೆ ನಿರಂತರ ಗೈರಾಗಿರುವುದು ಕಂಡುಬಂದಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗಳಿಗೆ ಖುದ್ದು ಭೇಟಿ ನೀಡಲಾಗಿದೆ. ಅಂತಹ ಮಕ್ಕಳ ಕುಟುಂಬ ನೆರೆಯ ಆಂಧ್ರ ಪ್ರದೇಶಕ್ಕೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಆಟದ ಅವಧಿ ಕಡಿತ ಮಾಡಬೇಡಿ:
*********ಎಸ್‍ಎಸ್‍ಎಲ್‍ಸಿ ಪರೀಕ್ಷೆ ಕಾರಣ ನೀಡಿ, ಮಕ್ಕಳ ಆಟದ ಅವಧಿಯನ್ನು ಕಡಿತಗೊಳಿಸಬಾರದು ಎಂದು ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಎಸ್‍ಎಸ್‍ಎಲ್‍ಸಿ ತರಗತಿ ವಿದ್ಯಾರ್ಥಿಗಳಿಗೆ ನಿಗಧಿಪಡಿಸಿದ ಆಟದ ಅವಧಿಯನ್ನು ಕಡಿತಗೊಳಿಸಿರುವ ಬಗ್ಗೆ ಕೆಲವೆಡೆ ಮಕ್ಕಳು ಅಳಲು ತೋಡಿಕೊಂಡಿದ್ದು, ಆಟದ ಅವಧಿ ಕಡಿತವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ತೀರಾ ಅತ್ಯಗತ್ಯವಾಗಿವೆ. ಫಲಿತಾಂಶದ ಜೊತೆಗೆ ಮಕ್ಕಳ ಆಟಕ್ಕೂ ಶಾಲೆಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಮಾಹಿತಿಯ ನಾಮಫಲಕವನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಗಮನಹರಿಸುವ ಜೊತೆಗೆ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಕ್ಕೂ ಆದ್ಯತೆ ನೀಡಬೇಕು. ಮುಂಬರುವ ಡಿಸೆಂಬರ್ 15ರೊಳಗೆ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನವಾಗಬೇಕು. ಎಲ್ಲ ಶಾಲೆಗಳಲ್ಲಿ ಒಬ್ಬ ಶಿಕ್ಷಕರನ್ನು ಮಕ್ಕಳ ರಕ್ಷಣಾಧಿಕಾರಿಯನ್ನಾಗಿ ಗುರುತಿಸಿ, ತರಬೇತಿ ನೀಡಬೇಕು ಎಂದು ತಿಳಿಸಿದ ಅವರು, ಶಿಕ್ಷಣ ಇಲಾಖೆ ಇತರೆ ಇಲಾಖೆ ಸಹಭಾಗಿತ್ವದಲ್ಲಿ ನಡೆಸುವ ವಿವಿಧ ಕಾರ್ಯಕ್ರಮಗಳ ಅಂಕಿ-ಅಂಶಗಳ ಮಾಹಿತಿ ವಿವರನ್ನು ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಡಯಟ್ ಪ್ರಾಂಶುಪಾಲ ಎಂ.ನಾಸಿರುದ್ದೀನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸೇರಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

===========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading