ಹಿರಿಯೂರು :
ಸಂಗೀತವು ನೊಂದ ಮನಸ್ಸಿಗೆ ನೆಮ್ಮದಿಯನ್ನು, ಆಯಾಸಗೊಂಡ ಮನಸ್ಸಿಗೆ ಉಲ್ಲಾಸವನ್ನು ನೀಡುವುದರ ಜೊತೆಗೆ ಮನಸ್ಸಿಗೆ ಮುದ ನೀಡುವಂತಹ ದಿವ್ಯ ಔಷಧಿಯಾಗಿದ್ದು, ಇಂತಹ ಸಂಗೀತ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮನಸ್ಸಿಗೆ ಸಂತೋಷ ಹಾಗೂ ಮನೋರಂಜನೆಯನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂಬುದಾಗಿ ವಾಣಿವಿಲಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಏಕನಾಥೇಶ್ವರಿ ಸಂಗೀತ ವಿದ್ಯಾಲಯ, ಹಿರಿಯೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಪ್ರಾಮುಖ್ಯತೆ ಕೊಡದೆ ಪೋಷಕರು ಹಾಗೂ ಶಿಕ್ಷಕರು ನಾಟಕ, ನೃತ್ಯ, ಕಲೆ, ಸಂಗೀತ ಕಲಿಕೆಗೂ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಅವಕಾಶಗಳನ್ನು ಕಲ್ಪಿಸಬೇಕು, ಆಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದಾಗಿ ಅವರು ಹೇಳಿದರು.
ಸಂಗೀತ ವಿದ್ವಾನ್ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಮಾಜದ ಆಸ್ತಿಯಾಗಿದ್ದು, ಅವರ ಏಕಾಗ್ರತೆ, ಹಾಗೂ ಕ್ರಿಯಾಶೀಲತೆ ಹೆಚ್ಚಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಲು ಅವರಿಗೆ ಶಿಕ್ಷಣದ ಜೊತೆಜೊತೆಗೆ ಸಂಗೀತವನ್ನು ಅಭ್ಯಾಸ ಮಾಡಿಸುವುದು ಇಂದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಗೀತವನ್ನು ಅಭ್ಯಾಸಿಸಿ ಆರಾಧಿಸುವಂತಾಗಬೇಕು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಾಣಿವಿಲಾಸ ವಿದ್ಯಾಸಂಸ್ಥೆಯ ವತಿಯಿಂದ ಸಂಗೀತ ವಿದ್ವಾನ್ ಶ್ರೀಯುತ ತಿಪ್ಪೇಸ್ವಾಮಿರವರನ್ನು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಧ್ಯಾಯರಾದ ಎಂ.ಬಿ.ಲಿಂಗಪ್ಪ, ಸಂಗೀತ ವಿದೂಷಿ ಶ್ರೀಮತಿ ಜಗದಾಂಬ, ಶ್ರೀಮತಿ ರಂಗಮ್ಮ, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಕೋ ಆರ್ಡಿನೇಟರ್ ಗಳಾದ ಶ್ರೀಮತಿ ನಂದಿನಿ, ಶ್ರೀಮತಿ ರಚನ, ಶಿಕ್ಷಕಿಯರುಗಳಾದ ಶ್ರೀಮತಿ ಗಂಗಮ್ಮ, ಶ್ರೀಮತಿ ಸಬೀಹಾ, ಶ್ರೀಮತಿ ಹೇಮಲತಾ, ಶಿಕ್ಷಕರಾದ ಉಮೇಶ್ ಯಾದವ್ ಹಾಗೂ ಶಿವರಾಜ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.