
ಚಿತ್ರದುರ್ಗಆಗಸ್ಟ್.26:
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ವ್ಯಾಪ್ತಿಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಹೆಚ್ಚಿನ ಜಾಗೃತಿ ಹಾಗೂ ವಿಶೇಷ ಕಾಳಜಿವಹಿಸುವ ಮೂಲಕ ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕ್ರೈಸ್ ವಸತಿ ಶಾಲೆ, ಕಾಲೇಜುಗಳ ಮೇಲುಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ಶಾಲೆಯ ಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಸಣ್ಣ ಪುಟ್ಟ ವ್ಯತ್ಯಾಸ ಆದರೂ ಪೋಷಕರಿಗೆ ಮಾಹಿತಿ ನೀಡಬೇಕು. ವಸತಿ ಶಾಲೆಯ ಪ್ರಾಂಶುಪಾಲರು, ನಿಲಯ ಪಾಲಕರು ಹಾಗೂ ಸಿಬ್ಬಂದಿ ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಪ್ರವೇಶಾತಿಯಲ್ಲಿ ಗೊಂದಲ ಇರಬಾರದು: ವಸತಿ ಶಾಲೆಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಗೊಂದಲ ಇರಬಾರದು. ಕಾಲಕಾಲಕ್ಕೆ ಸರ್ಕಾರ ನಿಗದಿಪಡಿಸುವ ಮಾರ್ಗಸೂಚಿಗಳನ್ವಯ ಪಾರದರ್ಶಕವಾಗಿ ಪ್ರವೇಶಾತಿ ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ವಸತಿ ಶಾಲೆಗಳ ದಾಖಲಾತಿ ಸಮಿತಿಗೆ ನೀಡಲಾಗಿರುವ ನಿರ್ದೇಶನಗಳ ಪ್ರಕಾರವೇ ದಾಖಲಾತಿ ಪ್ರಕ್ರಿಯೆ ನಡೆಸಬೇಕು. ವಸತಿ ಶಾಲೆಗಳ ಪ್ರವೇಶಾತಿ ಸಂಬಂಧ ಸಾರ್ವಜನಿಕರಿಂದ ಯಾವುದೇ ದೂರುಗಳು ಬಾರದಂತೆ ಕ್ರಮವಹಿಸಬೇಕು ಎಂದು ತಿಳಿಸಿದ ಅವರು, ವಸತಿಶಾಲಾವಾರು, ತರಗತಿವಾರು ಲಭ್ಯವಿರುವ ಸೀಟುಗಳಲ್ಲಿ ಎಷ್ಟು ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ನಡೆದಿದೆ ಹಾಗೂ ಖಾಲಿ ಇರುವ ಸೀಟುಗಳ ಮಾಹಿತಿಯನ್ನು ಎಲ್ಲ ಪ್ರಾಂಶುಪಾಲರು ದೃಢೀಕರಿಸಿ ಉಪವಿಭಾಗಾಧಿಕಾರಿಗಳಿಗೆ ನೀಡುವಂತೆ ಸೂಚನೆ ನೀಡಿದರು.
ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರು ವಾಸ್ತವ್ಯ ಇರುವುದಿಲ್ಲ ಎಂಬ ದೂರುಗಳು ಬರುತ್ತಿದ್ದು, ಪ್ರಾಂಶುಪಾಲರು ಕಡ್ಡಾಯವಾಗಿ ವಸತಿ ಶಾಲೆಯಲ್ಲಿಯೇ ಇರಬೇಕು. ವಸತಿ ಶಾಲೆಗಳಿಂದ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಮಕ್ಕಳಿಗೆ ಗುಣಮಟ್ಟದ ಆಹಾರ ವಿತರಿಸಿ: ವಸತಿ ಶಾಲೆಯ ವಿದ್ಯಾರ್ಥಿಳಿಗೆ ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ಆಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ವಸತಿ ಶಾಲೆಗಳಿಗೆ ಕಳಪೆ ಆಹಾರ ಪದಾರ್ಥಗಳು ಸರಬರಾಜಾದರೆ ಅಂತಹ ಆಹಾರ ಪದಾರ್ಥಗಳನ್ನು ಸಂಬಂಧಪಟ್ಟವರಿಗೇ ಹಿಂದಿರುಗಿಸಬೇಕು ಎಂದು ತಿಳಿಸಿದ ಅವರು, ವಸತಿ ಶಾಲೆಯಲ್ಲಿ ಸ್ವಚ್ಛತೆ ಕಾಪಾಡಿ, ಶುದ್ಧ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಾಲತಾ ಭಾವಿಮಠ ಸೇರಿದಂತೆ ಜಿಲ್ಲೆಯ ಕ್ರೈಸ್ ವಸತಿ ಶಾಲೆ, ಕಾಲೇಜುಗಳ ಪ್ರಾಂಶುಪಾಲರು ಇದ್ದರು.





========
About The Author
Discover more from JANADHWANI NEWS
Subscribe to get the latest posts sent to your email.