July 29, 2025
1753543369933.jpg


ಹಿರಿಯೂರು:
ನಗರಸಭೆಯ ಸಾಮಾನ್ಯಸಭೆಯಲ್ಲಿ ಪೌರಕಾರ್ಮಿಕರ ನೇಮಕಾತಿಯ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ನಗರಸಭೆಗೆ ಹೊಸದಾಗಿ ಪೌರಕಾರ್ಮಿಕರನ್ನು, ವಾಹನಚಾಲಕರನ್ನು ನೇಮಿಸಿಕೊಳ್ಳಬೇಕಿದ್ದು, ಪ್ರತಿಯೊಬ್ಬ ನಗರಸಭೆ ಸದಸ್ಯರೂ ಒಬ್ಬೊಬ್ಬ ಅರ್ಹ ನೌಕರರನ್ನು ಆಯ್ಕೆ ಮಾಡಿಕೊಡಲು ಅವಕಾಶ ನೀಡಲಾಗುವುದು ಎಂಬುದಾಗಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ ಅವರು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಹೇಶ್ ಪಲ್ಲರವರು ಮಾತನಾಡಿ ಪೌರಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳುವಾಗ ನಗರಸಭೆ ಸದಸ್ಯರುಗಳು ಆದಷ್ಟು ನಗರವ್ಯಾಪ್ತಿಯಲ್ಲಿ ಆಯ್ಕೆಮಾಡಿಕೊಳ್ಳಬೇಕು. ಹಳ್ಳಿಯವರನ್ನು ಆಯ್ಕೆ ಮಾಡಬಾರದು. ಯಾಕೆಂದರೆ, ಅವರು ಸಕಾಲದಲ್ಲಿ ಕೆಲಸಕ್ಕೆ ದೊರೆಯುವುದಿಲ್ಲ ಎಂಬುದಾಗಿ ಅವರು ಹೇಳಿದರು.
ಇದಕ್ಕೆ ನಾಮನಿರ್ದೇಶಿತ ಸದಸ್ಯರಾದ ಎಸ್.ಎಲ್.ಶಿವಕುಮಾರ್, ವಿ.ಶಿವಕುಮಾರ್, ವಿ.ಗಿರೀಶ್, ರಮೇಶ್ ಬಾಬು, ಅಜೀಮ್ ಪಾಷಾ ಸೇರಿದಂತೆ ಇತರ ನಾಮನಿರ್ದೇಶಿತ ಸದಸ್ಯರುಗಳು ಧ್ವನಿಗೂಡಿಸಿದರಲ್ಲದೆ, ನಗರಸಭೆ ಸುತ್ತಮುತ್ತಲ ಹಳ್ಳಿಗಳಿಂದ ಪೌರನೌಕರರನ್ನು ಆಯ್ಕೆ ಮಾಡಬಾರದು ಎಂಬುದಾಗಿ ಸಭಾಧ್ಯಕ್ಷರಿಗೆ ಒತ್ತಾಯಿಸಿದರು.
ಇದೊಂದು ಮಾತು ಹಲವು ನಗರಸಭೆ ಸದಸ್ಯರುಗಳನ್ನು ಕೆರಳಿಸಿತು. ಆರಂಭದಲ್ಲಿ ಅಪಸ್ವರ ಎತ್ತಿದ ನಗರಸಭೆ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿಯಾದವ್ ಸೋಮೇರಹಳ್ಳಿ ತಾಂಡ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿಕೊಂಡು ಇಂದು ನರಸಭೆಯಾಗಿದೆ. ಹಳ್ಳಿಗಳವರು ಬೇಡ ಅಂದರೆ, ನಗರಸಭೆ ವ್ಯಾಪ್ತಿಯಿಂದ ಈ ಹಳ್ಳಿಗಳನ್ನು ಕೈಬಿಡಲು ಸಾಧ್ಯವೇ ಎಂಬುದಾಗಿ ಸವಾಲು ಹಾಕಿದರು.
ಸದಸ್ಯರಾದ ಈರಲಿಂಗೇಗೌಡರವರು ಮಾತನಾಡಿ ನಾವೆಲ್ಲಾ ಹಳ್ಳಿಯಲ್ಲೇ ಹುಟ್ಟಿಬೆಳೆದು, ಹಳ್ಳಿಗಳಲ್ಲೇ ವಿದ್ಯಾಭ್ಯಾಸ ಮಾಡಿ ನಗರಕ್ಕೆ ಬಂದು ಇಲ್ಲಿ ನೆಲೆ ನಿಂತು, ಆನಂತರ ಚುನಾವಣೆಯಲ್ಲಿ ನಿಂತು, ಗೆದ್ದು ಈಗ ನಗರಸಭೆಯ ಸದಸ್ಯರಾಗಿದ್ದೀವಿ. ಹಳ್ಳಿಗಳವರು ಬೇಡ ಎಂದರೆ ಹೇಗೆ ಎಂಬುದಾಗಿ ಸಭೆಯಲ್ಲಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಜಯ್ ಕುಮಾರ್ ಮಾತನಾಡಿ ನೀವು ನಾಮನಿರ್ದೇಶಿತ ಸದಸ್ಯರಷ್ಟೇ ಹಾಗೆಲ್ಲಾ ಹೇಳಬಾರದು ಎಂಬುದಾಗಿ ಹೇಳಿದಾಗ ನಾಮನಿರ್ದೇಶಿತ ಸದಸ್ಯರು ಒಮ್ಮೆಲೆ ಕೆರಳಿ ಕೆಂಡವಾದರಲ್ಲದೆ, ನಮಗೂ ಹೇಳುವ ಹಕ್ಕಿದೆ ಎಂದು ಏರು ಧ್ವನಿಯಲ್ಲಿ ಕೂಗುತ್ತಾ ನಾಮನಿರ್ದೇಶಿತ ಸದಸ್ಯರು ಹಾಗೂ ಚುನಾಯಿತ ಸದಸ್ಯರ ಮಧ್ಯೆ ತೀವ್ರವಾದ ವಾದವಿವಾದಗಳು ನಡೆದವು.
ಒಂದು ಹಂತದಲ್ಲಿ ನಾಮನಿರ್ದೇಶಿತ ಸದಸ್ಯರಾದ ಎಸ್.ಎಲ್.ಶಿವಕುಮಾರ್, ರವರು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಪೌರಾಯುಕ್ತರು ಕುಳಿತಿದ್ದ ವೇದಿಕೆಯ ಕಟ್ಟೆ ಹತ್ತಿ ಅಧ್ಯಕ್ಷರ ಕೈಯಿಂದ ಮೈಕ್ ಇಸ್ಕೊಂಡು ಜೋರಾದ ಧ್ವನಿಯಲ್ಲಿ ಮೈಕ್ ನಲ್ಲಿ ಮಾತನಾಡುತ್ತಾ ನಾಮ ನಿರ್ದೇಶನ ಸದಸ್ಯರಾದ ನಮಗೂ ಹೇಳುವ ಹಕ್ಕಿದೆ ಎಂಬುದಾಗಿ ಜೋರುಧ್ವನಿಯಲ್ಲಿ ಪ್ರತಿಭಟಿಸಲು ಮುಂದಾದರು.
ಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರು ಹಾಗೂ ಚುನಾಯಿತ ಸದಸ್ಯರ ಮಧ್ಯೆ ಮಾತಿಗೆ ಮಾತು ಬೆಳೆದು ವಾಗ್ವಾದ ತಾರಕ್ಕೇರಿದಂತೆ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯ ಅಜಯಕುಮಾರ್, ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಅನಿಲಕುಮಾರ್ ಸೇರಿದಂತೆ ಹಲವರು ಶಿವಕುಮಾರ್ ಅವರ ವರ್ತನೆಗೆ ಕೆರಳಿ ಕೆಂಡವಾಗಿ ಅವರ ತಂಡದ ಸದಸ್ಯರ ಜೊತೆ ಸಭೆ ಬಹಿಷ್ಕರಿಸಿ ಸಭೆಯಿಂದ ಹೊರನಡೆಯಲು ಮುಂದಾದರು.
ಆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಈ.ಮಂಜುನಾಥ್ , ಮಾಜಿಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಚಿತ್ರಜಿತ್ ಯಾದವ್, ಹಾಗೂ ಎಂಡಿ.ಸಣ್ಣಪ್ಪರವರು ಮಾಜಿ ಅಧ್ಯಕ್ಷ ಅಜಯ್ ಕುಮಾರ್ ಹಾಗೂ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ತಂಡವನ್ನು ಹೊರನಡೆಯದಂತೆ ತಡೆದು ಅವರನ್ನು ಸಮಾಧಾನಪಡಿಸಿ ಒಳಗೆ ಕರೆತಂದು ವಾಪಾಸ್ ಸಭೆಯಲ್ಲಿ ಕುಳ್ಳಿರಿಸಿದರು.
ಈ ಸಂದರ್ಭದಲ್ಲಿ ಚುನಾಯಿತ ಸದಸ್ಯರೆಲ್ಲಾ ಒಕ್ಕೊರಲಿನಿಂದ ಎದ್ದು ನಿಂತು ಚುನಾಯಿತ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರ ಹಕ್ಕುಗಳ ಬಗ್ಗೆ ನಗರಸಭೆ ಪೌರಾಯುಕ್ತ ವಾಸೀಂ ರವರು ಹಾಗೂ ಅಧ್ಯಕ್ಷ ಬಾಲಕೃಷ್ಣರವರು ಸಭೆಗೆ ಈಗಲೇ ಸಷ್ಟಪಡಿಸಬೇಕು ಎಂಬುದಾಗಿ ಪಟ್ಟುಹಿಡಿದು ಪೌರಾಯುಕ್ತರನ್ನು ಒತ್ತಾಯಿಸಿದರು.
ನಂತರ ನಗರಸಭೆ ಸದಸ್ಯರಾದ ಬಿ.ಎನ್.ಪ್ರಕಾಶ್ ರವರು ಮಾತನಾಡಿ ಈ ಮೊದಲು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸಾಹಿತಿಗಳು, ಸಂಗೀತಗಾರರು, ವಿದ್ವಾಂಸರನ್ನು ಸಲಹೆ ಸೂಚನೆ ಕೊಡಲು ಸರ್ಕಾರ ನಾಮನಿರ್ದೇಶನ ಮಾಡಲಾಗುತ್ತಿತ್ತು.ಅವರು ಸಲಹೆ ಸೂಚನೆ ಕೊಡಬಹುದಷ್ಟೇ. ಅದನ್ನು ಜಾರಿ ಮಾಡುವ ಅಧಿಕಾರ ಚುನಾಯಿತ ಕೌನ್ಸಿಲ್ ಗೆ ಮಾತ್ರ ಇರುತ್ತದೆ ಎಂದರಲ್ಲದೆ,
ಸಭೆಯಲ್ಲಿ ಯಾವುದೇ ಸಲಹೆ ಸೂಚನೆ ಕೊಡಲು ಮೂರು ದಿನ ಮುಂಚೆಯೇ ಇಂತಹ ವಿಷಯದ ಬಗ್ಗೆ ನಾನು ಸಲಹೆ ಕೊಡುತ್ತೇನೆ, ಮಾತನಾಡುತ್ತೇನೆ ಎಂಬುದಾಗಿ ಸಭಾಧ್ಯಕ್ಷರಿಗೆ ಲಿಖಿತವಾಗಿ ತಿಳಿಸಿ ಅವರ ಅನುಮತಿ ಪಡೆದಿರಬೇಕು. ಇಲ್ಲವಾದಲ್ಲಿ ಸಭೆಯಲ್ಲಿ ಮಾತನಾಡಲು ಯಾವುದೇ ಅವಕಾಶವಿರುವುದಿಲ್ಲ ಎಂಬುದಾಗಿ ನಾಮನಿರ್ದೇಶಿತ ಸದಸ್ಯರಿಗೆ ಸ್ಪಷ್ಟಪಡಿಸಿದರು.
ಅಂತಿಮವಾಗಿ ಪೌರಾಯುಕ್ತರಾದ ಎ.ವಾಸೀಂರವರು ಹಾಗೂ ಅಧ್ಯಕ್ಷರಾದ ಬಾಲಕೃಷ್ಣರವರು ಮಾತನಾಡಿ ನಾಮ ನಿರ್ದೇಶಿತ ಸದಸ್ಯರು ಸಭೆಯಲ್ಲಿ ಸಲಹೆ ಸೂಚನೆಗಳನ್ನು ಕೊಡಬಹುದು ಅಷ್ಟೇ ಹೊರತು, ಅದನ್ನು ಒಪ್ಪುವುದು ಬಿಡುವುದು ಸಭಾಧ್ಯಕ್ಷರಿಗೆ ಹಾಗೂ ಚುನಾಯಿತ ಕೌನ್ಸಿಲ್ ಸಭೆಗೆ ಬಿಟ್ಟ ವಿಚಾರವಾಗಿದೆ. ಎಂದರಲ್ಲದೆ,
ಸಭೆಯಲ್ಲಿ ಯಾವುದೇ ವಿಚಾರವನ್ನು ಧ್ವನಿಮತಕ್ಕೆ ಹಾಕಿದಾಗ ಮತ ಹಾಕುವ ಅಧಿಕಾರ ಚುನಾಯಿತ ಸದಸ್ಯರಿಗೆ ಮಾತ್ರವಿದೆ ಎಂಬುದಾಗಿ ಸಭೆಗೆ ಸ್ಪಷ್ಟಪಡಿಸಿದರಲ್ಲದೆ, ನಗರಸಭೆ ಸ್ಥಳೀಯಸರ್ಕಾರ ಇದ್ದಂತೆ. ಹೀಗೆ ಇಲ್ಲದ ಅಧಿಕಾರಕ್ಕಾಗಿ ಕಿತ್ತಾಡಿ ಸಭೆಯ ಉದ್ದೇಶ ಕೆಡಿಸುವುದು ಬೇಡ ಎಂಬುದಾಗಿ ತಿಳಿ ಹೇಳಿದ ನಂತರ ಸಭೆ ಶಾಂತವಾಗಿ ಮುಕ್ತಾಯವಾಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading