March 26, 2026
IMG-20260326-WA0152.jpg

ಚಿತ್ರದುರ್ಗ: ಟಿವಿ, ಮೊಬೈಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಆಕರ್ಷಣೆಯ ಪರಿಣಾಮವಾಗಿ ಸಮಾಜದಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂದು ಪ್ರಾಂಶುಪಾಲ ಪ್ರೊ. ಶಿವಣ್ಣ ಆತಂಕ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ “ನನ್ನ ಮೆಚ್ಚಿನ ಪುಸ್ತಕ” ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪಠ್ಯಪುಸ್ತಕಗಳ ಜೊತೆಗೆ ಕಥೆ, ಕಾವ್ಯ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡು ಜ್ಞಾನಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಳ್ಳಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಮಂಜುನಾಥ ಮಾತನಾಡಿ, ಓದುವ ಆಸಕ್ತಿಯ ಜೊತೆಗೆ ಪುಸ್ತಕಗಳನ್ನು ಸ್ನೇಹಿಗಳಂತೆ ನೋಡಬೇಕು. ಅವು ನಮ್ಮಲ್ಲಿ ಸಮಾನತೆ, ಮಾನವೀಯತೆ ಮತ್ತು ಸಂವೇದನಾಶೀಲ ಗುಣಗಳನ್ನು ಬೆಳೆಸುತ್ತವೆ. ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ಪುಸ್ತಕ ಪ್ರಾಧಿಕಾರದ ಸದಸ್ಯೆ ಅಕ್ಷತಾ ಹುಂಚದಕಟ್ಟೆ ಮಾತನಾಡಿ, ವಿದ್ಯಾವಂತ ಯುವಜನರಲ್ಲಿ ಓದಿನ ಆಸಕ್ತಿಯನ್ನು ಉತ್ತೇಜಿಸಲು “ನನ್ನ ಮೆಚ್ಚಿನ ಪುಸ್ತಕ” ಯೋಜನೆಗೆ ಶಾಲೆ-ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿ, “ರಾಗಿತೆನೆ”, “ಚೋಮನ ದುಡಿ”, “ರಸ್ತೆ ನಕ್ಷತ್ರ”, “ಸಂವಿಧಾನದ ವಿರೋಧಿಗಳು ಎದುರು”, “ಆಡು ಕಾಯೋ ಹುಡುಗನ ದಿನಾಚರಣೆ”, “ರಹಸ್ಯ”, “ಎದೆಗೆ ಬಿದ್ದ ಅಕ್ಷರ”, “ಹಿತ್ತಲ ಜಗತ್ತು”, “ಊರುಕೇರಿ”, “ಚಿರಸ್ಮರಣೆ”, “ಕಾಗೆ ಮುಟ್ಟಿದ ನೀರು”, “ಎದೆಯ ಹಣತೆ”, “ಮೈಸೂರು ಮಲ್ಲಿಗೆ”, “ದೇವರು” ಸೇರಿದಂತೆ ಹಲವು ಕೃತಿಗಳ ಬಗ್ಗೆ ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದ ಸಂಚಾಲಕಿ ಪ್ರೊ. ಟಿ. ಗಾಯತ್ರಮ್ಮ, ಇಂಗ್ಲಿಷ್ ವಿಭಾಗದ ಪ್ರೊ. ಮಧುಸೂದನ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕನಕರಾಜ್, ಉಪನ್ಯಾಸಕರು ಗಿರೀಶ್, ಕುಮಾರಸ್ವಾಮಿ, ಟಿ. ಶಿವಣ್ಣ, ಟಿ. ನಂದಿನಿ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading