ಹಿರಿಯೂರು: ತಾಲೂಕಿನ ಚಿತ್ರದೇವರ ಹಟ್ಟಿ ಗ್ರಾಮದ ಬಡ ರೈತ ಕುಟುಂಬದ ಪುತ್ರಿ, ಕಾಡುಗೊಲ್ಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಗಂಗಮ್ಮ ವೈ.ಸಿ ಅವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವದಂತಹ ಗಂಭೀರ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.

ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ವೈ. ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ಅವರು ತಮ್ಮ ಮಹಾಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿದರು. “ಮಧ್ಯಕಾಲೀನ ಕರ್ನಾಟಕದ ಉದ್ಯಾನವನ ಮತ್ತು ಹೂದೋಟಗಳು – ಸಾಂಸ್ಕೃತಿಕ ಅಧ್ಯಯನ: ವಿಜಯನಗರ, ಕಲ್ಬುರ್ಗಿ, ಬೀದರ್, ವಿಜಯಪುರ ಅನುಲಕ್ಷಿಸಿ” ಎಂಬ ವಿಷಯದ ಮೇಲೆ ಅವರು ನಡೆಸಿದ ಸಂಶೋಧನೆ ತೋಟಗಾರಿಕೆ ಮತ್ತು ಸಂಸ್ಕೃತಿಯ ನಡುವಿನ ಆಂತರಿಕ ಸಂಬಂಧವನ್ನು ಹೊಸ ದೃಷ್ಟಿಕೋನದಲ್ಲಿ ಅನಾವರಣಗೊಳಿಸಿದೆ.
ಮಧ್ಯಕಾಲೀನ ಕರ್ನಾಟಕದ ರಾಜಕೀಯ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಉದ್ಯಾನವನಗಳು ಮತ್ತು ಹೂದೋಟಗಳು ಕೇವಲ ಅಲಂಕಾರಿಕ ಅಂಶಗಳಷ್ಟೇ ಅಲ್ಲದೆ, ರಾಜಾಶ್ರಯ, ಧಾರ್ಮಿಕ ಆಚರಣೆಗಳು ಮತ್ತು ಸಾಮಾಜಿಕ ಜೀವನದ ಅವಿಭಾಜ್ಯ ಅಂಗವಾಗಿದ್ದವು ಎಂಬುದನ್ನು ಗಂಗಮ್ಮ ಅವರ ಅಧ್ಯಯನ ಸ್ಪಷ್ಟಪಡಿಸುತ್ತದೆ. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದಿಂದ ಆರಂಭಿಸಿ ಕಲ್ಬುರ್ಗಿ, ಬೀದರ್ ಹಾಗೂ ವಿಜಯಪುರ ನಗರಗಳ ಅರಮನೆಗಳು ಮತ್ತು ನಗರ ವಿನ್ಯಾಸದಲ್ಲಿ ಉದ್ಯಾನ ಸಂಸ್ಕೃತಿ ಹೇಗೆ ಪ್ರತಿಫಲಿಸಿದೆ ಎಂಬುದನ್ನು ಶಾಸನಗಳು, ಸಾಹಿತ್ಯ ಮೂಲಗಳು ಮತ್ತು ಪುರಾತತ್ವ ಸಾಕ್ಷ್ಯಗಳ ಆಧಾರದ ಮೇಲೆ ಅವರು ವಿಶ್ಲೇಷಿಸಿದ್ದಾರೆ.
ಈ ಸಂಶೋಧನೆ ಇತಿಹಾಸ ಅಧ್ಯಯನಕ್ಕೆ ಮಾತ್ರವಲ್ಲದೆ, ಇಂದಿನ ತೋಟಗಾರಿಕೆ ಹಾಗೂ ನಗರ ಯೋಜನೆ ಕ್ಷೇತ್ರಗಳಿಗೂ ಪ್ರೇರಣೆಯಾಗಿದೆ.
ಗಂಗಮ್ಮ ಅವರ ಶೈಕ್ಷಣಿಕ ಸಾಧನೆಗೆ ತಂದೆ ಚಿತ್ತಪ್ಪ ವೈ., ತಾಯಿ ಕರಿಯಮ್ಮ ಹಾಗೂ ಕುಟುಂಬಸ್ಥರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಮದ ಜನರು ಮತ್ತು ಸ್ನೇಹಿತರು ಕೂಡ ಸಂಭ್ರಮಾಚರಣೆ ನಡೆಸಿದ್ದಾರೆ. ಹಿರಿಯೂರು ಭಾಗದ ಸಾರ್ವಜನಿಕರು, ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಇತಿಹಾಸ ಮತ್ತು ಪುರಾತತ್ವದಲ್ಲಿ ಪಿಎಚ್.ಡಿ ಪಡೆದಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯ ರೈತ ಕುಟುಂಬದಿಂದ ಬಂದ ಗಂಗಮ್ಮ ಅವರ ಶ್ರಮ, ನಿರಂತರ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಉನ್ನತ ಶಿಖರ ತಲುಪಿರುವುದು ಯುವಪೀಳಿಗೆಗೆ ಮಾದರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಅವರ ಸಾಧನೆ ಪ್ರೇರಣೆಯ ದೀಪವಾಗಿದೆ. ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನ ಎಂಬುದನ್ನು ಅವರು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.