January 29, 2026
IMG-20260126-WA0362.jpg

ಚಳ್ಳಕೆರೆ:
ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ, ಶಾಸಕಾಂಗ–ಕಾರ್ಯಾಂಗ–ನ್ಯಾಯಾಂಗಗಳ ಸ್ವಾಯತ್ತತೆಯನ್ನು ಕಾಪಾಡಬೇಕು. ಸಂವಿಧಾನದ ಆಶಯಗಳಿಗೆ ಪ್ರಜಾಪ್ರಭುತ್ವ ಬದ್ಧವಾಗಿ ನಡೆದುಕೊಳ್ಳಬೇಕಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹೇಳಿದರು.

ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲಾ ಆವರಣದ ಬಯಲು ರಂಗಮಂದಿರದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಅನೇಕ ಮಹನೀಯರು ತ್ಯಾಗ, ಬಲಿದಾನ, ಉಪವಾಸ ಮತ್ತು ಸತ್ಯಾಗ್ರಹಗಳ ಮೂಲಕ ಹೋರಾಟ ನಡೆಸಿದರು. ಅದರ ಫಲವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕಿತು. ನಂತರ 1950ರ ಜನವರಿ 26ರಂದು ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಜಾರಿಯಾಗಿದ್ದು, ಆ ದಿನದಿಂದ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮ, 1919ರ ಜಲಿಯನ್‌ವಾಲಾಬಾಗ್ ಹತ್ಯಾಕಾಂಡ, ಚಾಂಪರಣ್ಯ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಹಾಗೂ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಎಂಬ ಘೋಷಣೆಯ ಮೂಲಕ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿತು. ಈ ಹೋರಾಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಪಕ್ಷಾತೀತವಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದೆ ಎಂದು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಕರ್ನಾಟಕ ರಾಜ್ಯ ಏಕೀಕರಣದ ಶಿಲ್ಪಿ ಚಿತ್ರದುರ್ಗ ಜಿಲ್ಲೆಯ ಎಸ್. ನಿಜಲಿಂಗಪ್ಪ ಅವರನ್ನು ಸ್ಮರಿಸಬೇಕಿದೆ. ಸಮಾನತೆ, ಶಿಕ್ಷಣ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಅಂಬೇಡ್ಕರ್ ಅವರ ಆಶಯಗಳು ಇಂದು ದೇಶದ ಬಲವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಶಾಸಕರಿಂದ ₹50,000 ನಗದು ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷಾ, ಇಒ ಶಶಿಧರ್ ಹೆಚ್., ಬಿಇಒ ಕೆ.ಎಸ್. ಸುರೇಶ್, ಡಿವೈಎಸ್ಪಿ ಸತ್ಯನಾರಾಯಣರಾವ್, ಪೌರಾಯುಕ್ತ ಜಿ. ಜಗರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು
ಗಣರಾಜ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮನ ಗೆದ್ದವು.
ಪ್ರಗತಿ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿ ಯೋಗಾಭ್ಯಾಸ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಕುವೆಂಪು ಶಾಲೆಯ ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಆಧರಿಸಿದ ನೃತ್ಯ ರೂಪಕದ ಮೂಲಕ ಬಾಲ್ಯವಿವಾಹ ಹಾಗೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಿಳೆಯರಿಗೆ ನೀಡಿದ ಹಕ್ಕುಗಳು ಮತ್ತು ಸೌಲಭ್ಯಗಳ ಮಹತ್ವವನ್ನು ನೃತ್ಯದ ಮೂಲಕ ವಿವರಿಸಲಾಯಿತು.
ಮತ್ತೊಂದು ಶಾಲೆಯ ಮಕ್ಕಳು ಮೈಸೂರು ಒಡೆಯರ ಕಾಲದ ಆಡಳಿತ ವ್ಯವಸ್ಥೆ ಹಾಗೂ ಪ್ರಜೆಗಳ ಮೇಲಿನ ಕಾಳಜಿಯನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆ ಪಡೆದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading