January 29, 2026
IMG-20260126-WA0355.jpg

ನಾಯಕನಹಟ್ಟಿ :
ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಅಭಯ ದೇವತೆ, ಶಕ್ತಿ ದೇವತೆ ಎಂದೇ ಪ್ರಸಿದ್ಧಿಯಾದ ಕಾವಲು ಚೌಡೇಶ್ವರಿದೇವಿ ದೇಗುಲದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಸೋಮವಾರದಿಂದ ಆರಂಭವಾದ ಚೌಡೇಶ್ವರಿದೇವಿ ಜಾತ್ರೆಯ ಪ್ರಯುಕ್ತ ದೇಗುಲಕ್ಕೆ ಭೇಟಿ ನೀಡಿದ ಅವರು, ಮಹಾಧ್ವಾರ ಗೋಪುರದ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
“ಇದೇ ಮೊದಲ ಬಾರಿಗೆ ಅರಣ್ಯ ಪ್ರದೇಶದಲ್ಲಿರುವ ಕಾವಲು ಚೌಡೇಶ್ವರಿದೇವಿ ದೇಗುಲಕ್ಕೆ ಆಗಮಿಸಿದ್ದೇನೆ. ಈ ದೇಗುಲದ ಮಹಿಮೆಯ ಬಗ್ಗೆ ಮುಂಚಿತವಾಗಿಯೇ ತಿಳಿದಿತ್ತು. ಅತ್ಯಂತ ಪ್ರಶಾಂತ ವಾತಾವರಣದಲ್ಲಿರುವ ಈ ದೇವಾಲಯ ಮನಸ್ಸಿಗೆ ಅಪಾರ ಮುದವನ್ನು ನೀಡುತ್ತದೆ. ನಾಳೆ ನಡೆಯುವ ರಥೋತ್ಸವಕ್ಕೆ ಆಗಮಿಸಲು ಸಾಧ್ಯವಾಗದ ಹಿನ್ನೆಲೆ ಇಂದೇ ದೇಗುಲಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ. ಅರಣ್ಯದಲ್ಲಿರುವ ದೇಗುಲಕ್ಕೆ ಮೂಲಸೌಕರ್ಯಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಗತ್ಯ ನೆರವು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಈ ವೇಳೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಮಾತನಾಡಿ, ಕಾವಲು ಚೌಡೇಶ್ವರಿದೇವಿ ದೇಗುಲದ ಐತಿಹಾಸಿಕ ಮಹತ್ವವನ್ನು ಸಚಿವರಿಗೆ ವಿವರಿಸಿದರು. ಜೊತೆಗೆ ನಾಯಕನಹಟ್ಟಿ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನಕ್ಕೆ ಹೆಚ್ಚುವರಿ ಅನುದಾನ ಒದಗಿಸುವಂತೆ ಮನವಿಪತ್ರ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಕೂಡಲೇ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ, ಪೊಲೀಸ್ ವೃತ್ತ ನಿರೀಕ್ಷಕ ಹನುಮಂತಪ್ಪ ಎಂ. ಶಿರೇಹಳ್ಳಿ, ಪಿಎಸ್‌ಐ ಜಿ. ಪಾಂಡುರಂಗ, ದೇಗುಲ ಕಾರ್ಯದರ್ಶಿ ಎಂ.ವೈ. ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಹನುಮಣ್ಣ, ದೊಡ್ಡಬೋರಯ್ಯ, ತಿಪ್ಪೇಸ್ವಾಮಿ, ಪ್ರಕಾಶ್, ಟಿ. ಬಸಣ್ಣ, ಜಿ.ವೈ. ತಿಪ್ಪೇಸ್ವಾಮಿ, ಬೊಮ್ಮಲಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading