ಹಿರಿಯೂರು:
ನಗರದ ಮನವಿ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀಮತಿ ಮಾನಸ ಮಂಜುನಾಥ್ ಗೌಡರವರು ಅತ್ಯಂತ ಸಾಮಾಜಿಕ ಕಾಳಜಿ ಹೊಂದಿದವರಾಗಿದ್ದು, ಬೆಂಗಳೂರು ವೈದೇಹಿ ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಮಾಡುವಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತಾಗಲಿ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ಟಿ. ಬಿ. ಸರ್ಕಲ್ ಬಳಿಯಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮನವಿ ಟ್ರಸ್ಟ್ ಹಾಗೂ ಬೆಂಗಳೂರು ವೈದೇಹಿ ಆಸ್ಪತ್ರೆಯ ಸಹಯೋಗದಲ್ಲಿ ವೇದಾವತಿ ನಗರದ ಬಡಾವಣೆಯ ಜನರಿಗೆ ಹೃದಯರೋಗ, ಸ್ತ್ರೀರೋಗ, ನರರೋಗ, ಕ್ಯಾನ್ಸರ್ ಕಾಯಿಲೆ, ಕಿವಿ,ಮೂಗು, ಗಂಟಲು, ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಆಧುನಿಕ ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು, ಜನರು ತಮ್ಮ ದೈನಂದಿನ ಕೆಲಸದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಿ, ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಾರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ಅವರು ಕರೆ ನೀಡಿದರು.
ಕರ್ನಾಟಕ ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ನಮ್ಮ ನಗರದ ಮನವಿ ಟ್ರಸ್ಟ್ ಸಂಸ್ಥೆಯ ಸಂಸ್ಥಾಪಕಿಯಾದ ಶ್ರೀಮತಿ ಮಾನಸ ಮಂಜುನಾಥ್ ಗೌಡ ಅವರು ವೇದಾವತಿ ನಗರದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದ್ದು, ಅವರಿಗೆ ಸಮಾಜದ ಬಡಜನರು, ಹಿಂದುಳಿದವರ ಬಗ್ಗೆ ಇರುವ ಸಾಮಾಜಿಕ ಕಳಕಳಿ ನಿಜಕ್ಕೂ ಮೆಚ್ಚುವಂತಹದ್ದು, ಎಂದರು.
ಮನವಿ ಟ್ರಸ್ಟ್ ನ ಸಂಸ್ಥಾಪಕಿ ಶ್ರೀಮತಿ ಮಾನಸ ಮಂಜುನಾಥ್ ಗೌಡ ಮಾತನಾಡಿ, ನಾನು ವೇದಾವತಿ ನಗರದ ನಿವಾಸಿಯಾಗಿದ್ದು, ಈ ಬಡಾವಣೆಯಲ್ಲಿ ಬಹಳ ಜನ ಬಡವರು, ಕೂಲಿಕಾರ್ಮಿಕರು ವಾಸವಾಗಿದ್ದಾರೆ, ಅವರೆಲ್ಲಾ ಆರೋಗ್ಯ ತಪಾಸಣೆಗಾಗಿ ದೂರದ ಊರುಗಳಿಗೆ ಹೋಗುವುದು ಕಷ್ಟಸಾಧ್ಯವಾಗಿದ್ದು, ಅವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಮ್ಮ ಸಂಸ್ಥೆಯ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಅಮೃತೇಶ್ವರ್, ಕಾಂಗ್ರೆಸ್ ಮುಖಂಡ ಹಾಗೂ ಪತ್ರಕರ್ತರಾದ ಜಿ.ಎಲ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಬೈರೇಶ್ ಪಟೇಲ್, ಸಮಾಜಸೇವಕಿ ಶ್ರೀಮತಿ ಶಶಿಕಲಾ ರವಿಶಂಕರ್, ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯ, ನಗರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿ ಯಾದವ್, ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾಮಣಿ, ಸರ್ವಮಂಗಳ, ರಮ್ಯಾರಾಜು, ಇಂದ್ರಮ್ಮ, ಕಲ್ಪನಾ, ಸುನೀತಾ, ಶಕುಂತಲಾ, ಮಮತಾಗೌಡ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಸಿ.ಹೋರಕೇರಪ್ಪ, ಕರವೇ ಗೌರವಾಧ್ಯಕ್ಷ ಗೋ.ಬಸವರಾಜ್, ಕರವೇ ಅಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ದಾದಾಪೀರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


