January 29, 2026
1758813028325.jpg



ಚಿತ್ರದುರ್ಗ ಸೆ.25:
ಆದಾಯ ತೆರಿಗೆ ನೀತಿ ನಿಬಂಧನೆ ಹಾಗೂ ತಿದ್ದುಪಡಿಗಳ ಕುರಿತು ತೆರಿಗೆ ಪಾವತಿದಾರು, ವ್ಯಾಪಾರಿಗಳು ಹಾಗೂ ಚಾರ್ಟೆಡ್ ಅಕೌಂಟೆಂಟ್‍ಗಳೊಂದಿಗೆ ರಾಜ್ಯದ ವಿವಿಧ ನಗರಗಳಲ್ಲಿ ಜನಸಂಪರ್ಕ ಸಂವಹನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಬೆಂಗಳೂರು ವಿಭಾಗದ ಸಹಾಯಕ ಆಯುಕ್ತ ಪಂಕಜ್ ದ್ವಿವೇದಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ಗುರುವಾರ ಈ ಕುರಿತು ಆಯೋಜಿಸಲಾದ ಜನ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತೆರಿಗೆ ಪಾವತಿಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಆನ್‍ಲೈನ್ ಮೂಲಕ ನಿರ್ವಹಿಸಬಹುದಾಗಿದೆ. ಈ ವೇಳೆ ಸಾಕಷ್ಟು ಪ್ರಶ್ನೆಗಳು ತೆರಿಗೆ ಪಾವತಿದಾರರಲ್ಲಿ ಮೂಡುವುದು ಸಹಜ. ಇಂತಹ ಪ್ರಶ್ನೆಗಳು ಹಾಗೂ ಗೊಂದಲಗಳನ್ನು ಜನಸಂಪರ್ಕ ಸಂವಹನ ಕಾರ್ಯಕ್ರಮದ ಮೂಲಕ ಪರಿಹರಿಸಲಾಗುವುದು. ವ್ಯಾಪಾರಿಗಳು, ತೆರಿಗೆ ಪಾವತಿದಾರರು ಹಾಗೂ ಚಾರ್ಟೆಡ್ ಅಕೌಂಟೆಂಟ್ ಕಾರ್ಯಕ್ರಮದಲ್ಲಿ ತಮ್ಮ ಸಂದೇಹಗಳನ್ನು ಪ್ರಸ್ತಾಪಿಸಿ ಉತ್ತರ ಪಡೆಯಬಹುದಾಗಿದೆ. ಇಲಾಖೆ ಅಧಿಕಾರಿಗಳು ತೆರಿಗೆ ಸಂಬಂಧಿಸಿದ ನೂತನ ನೀತಿ ನಿಬಂಧನೆಗಳ ಕುರಿತು ಬೆಳಕು ಚೆಲ್ಲುವರು ಎಂದು ಸಹಾಯಕ ಆಯುಕ್ತ ಪಂಕಜ್ ದ್ವಿವೇದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತೆರಿಗೆ ಸಲ್ಲಿಕೆ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿ ರಮಾಮಣಿ, ತೆರಿಗೆ ಎನ್ನುವುದು ದೇಶ ನಿರ್ಮಾಣಕ್ಕೆ ನಾವು ನೀಡುವ ಕೊಡುಗೆಯಾಗಿದೆ. ಪ್ರಖ್ಯಾತ ಅರ್ಥಶಾಸ್ತ್ರಜ್ಞ ಕೌಟಿಲ್ಯ ‘ತೆರಿಗೆ ರಾಜ್ಯಾದ್ಯಾಯದ ಮೂಲಾಧಾರವಾಗಿದೆ’ ಎಂದು ಹೇಳಿದ್ದಾರೆ. ಅವರ ಪ್ರಸಿದ್ಧ ಹೇಳಿಕೆ ‘ಕೋಶ ಮೂಲ ದಂಡಃ’ ಎನ್ನುವ ಉಕ್ತಿ ಆದಾಯ ತೆರಿಗೆ ಇಲಾಖೆ ಧ್ಯೇಯ ವಾಕ್ಯವಾಗಿದೆ.
ತೆರಿಗೆ ಸಂಗ್ರಹದಲ್ಲಿ ನೇರ ಹಾಗೂ ಪರೋಕ್ಷ ಎಂಬ ಎರಡು ವಿಧಗಳಿವೆ. ಆದಾಯ ಮಿತಿಗಿಂತ ಹೆಚ್ಚು ಸಂಪಾದಿಸಿದರೆ ಸಾರ್ವಜನಿಕರು ನೇರ ತೆರಿಗೆ ಸಲ್ಲಿಸಬೇಕಾಗುತ್ತದೆ. ಪರೋಕ್ಷ ತೆರಿಗೆಯನ್ನು ಸರಕು ಸಾಮಗ್ರಿಗಳ ವಹಿವಾಟಿನ ಮೇಲೆ ವಿಧಿಸಲಾಗುತ್ತದೆ.
ತೆರಿಗೆ ಹಣದಲ್ಲಿ ದೇಶದ ರಕ್ಷಣೆ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಪ್ರತಿ ವರ್ಷ ಜುಲೈ ನಿಂದ ಸೆಪ್ಟಂಬರ್ ಅಂತ್ಯದವರೆಗೆ ತೆರಿಗೆ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರ ಹೊರತಾಗಿಯೂ ವಿವಿಧ ಕಾರಣಗಳಿಂದ ತೆರಿಗೆ ಸಲ್ಲಿಕೆ ತಡವಾದರೆ ಆದಾಯ ತೆರಿಗೆ ಸೆಕ್ಷನ್ 139(8ಎ) ಅಡಿ ಪರಿಷ್ಕøತ ತೆರಿಗೆ ಸಲ್ಲಿಕೆಗೆ ಅವಕಾಶವಿದೆ.
ಸಕಾಲದಲ್ಲಿ ಆದಾಯ ತೆರಿಗೆ ಪಾವತಿ ಮಾಡದಿದ್ದರೆ ಪ್ರತಿ ಮಾಹೆ ಶೇ.1 ರಷ್ಟು ಬಡ್ಡಿದರದೊಂದಿಗೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ತಡವಾದ ಆದಾಯ ಸಲ್ಲಿಕೆಗೆ ರೂ.5000 ದಂಡ ತೆರಬೇಕಾಗುತ್ತದೆ. ಒಂದೊಮ್ಮೆ ತೆರಿಗೆ ಮೊಸ ಮಾಡಿರುವುದು ಕಂಡುಬಂದರೆ ಆದಾಯದ ಶೇ.50 ರಷ್ಟು ದಂಡವನ್ನು ಆದಾಯ ತೆರಿಗೆ ಇಲಾಖೆ ವಿಧಿಸುತ್ತದೆ. ಗಂಭೀರ ಖಾಯಿಲೆ, ಅಪಘಾತದಂತಹ ಸಂದರ್ಭದಲ್ಲಿ ಸಕಾಲದಲ್ಲಿ ತೆರಿಗೆ ಸಲ್ಲಿಸಲು ಆಗದಿದ್ದರೆ, ಈ ಕಾರಣಗಳನ್ನು ನೀಡಿ ಸಹಾಯಕ ಆಯುಕ್ತರಿಗೆ ಮನವಿ ಮಾಡಿ ತಡವಾಗಿ ಆದಾಯ ತೆರಿಗೆ ಸಲ್ಲಿಕೆ ಮಾಡಲು ಅವಕಾಶವಿದೆ. ಈ ಸೌಲಭ್ಯವನ್ನು ಆನ್ ಲೈನ್ ಮೂಲಕವೂ ಪಡೆಯಬಹುದಾಗಿದೆ ಎಂದು ರಮಾಮಣಿ ತಿಳಿಸಿದರು.
ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಪಾನ್‍ಕಾರ್ಡ್ ನಂಬರ್ ಬಳಸಿ ಆನ್ ಲೈನ್ ಮೂಲಕ ಹಂತ-1 ರಿಂದ 7 ವರಗೆ ಹಾಗೂ ಪರಿಷ್ಕøತ ಆದಾಯ ತೆರಿಗೆಯನ್ನು ಸಹ ಸಲ್ಲಿಸಬಹುದು. ಟ್ಯಾಕ್ಸ್ ರೆಬಿಟ್ ಸಹ ಸಕಾಲದಲ್ಲಿ ಲಭಿಸಲಿದೆ ಎಂದು ರಮಾಮಣಿ ಹೇಳಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಚಾರ್ಟೆಡ್ ಅಕೌಂಟೆಂಟ್ ಅಸೋಶಿಯೇಷನ್ ಉಪಾಧ್ಯಕ್ಷ ಮಧುಪ್ರಸಾದ್.ಕೆ, ಚಿತ್ರದುರ್ಗ ಟ್ಯಾಕ್ಸ್ ಪ್ರಾಕ್ಟೀಷನರ್ ಅಸೋಶಿಯೇಷನ್ ಅಧ್ಯಕ್ಷ ಎಸ್.ಗೋವಿಂದ ರೆಡ್ಡಿ, ಚಾರ್ಟೆಡ್ ಅಕೌಂಟೆಂಟ್ ಕಾರ್ತಿಕ್, ದಾವಣಗೆರೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಸುಬ್ಬರಾಜು, ಚಿತ್ರದುರ್ಗ ಆದಾಯ ತೆರಿಗೆ ಇಲಾಖೆ ಅಧಿಕಾರಿ ಅಜ್ಜಣ್ಣ.ಎಂ ಸೇರಿದಂತೆ ಇತರೆ ಚಾರ್ಟೆಡ್ ಅಕೌಂಟೆಂಟ್ ಹಾಗೂ ಪ್ರಾಕ್ಟೀಷನರ್‍ಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading