ಚಿತ್ರದುರ್ಗ ಸೆ.25:
ಅಕ್ಟೋಬರ್ 02 ರ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಶ್ರಮದಾನ ಮಾಡುವ ಮೂಲಕ ಸ್ವಚ್ಚತೆಯ ಸಂದೇಶ ಸಾರಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಗುರುವಾರ “ಸ್ವಚ್ಚತಾ ಹೀ ಸೇವಾ-ಸ್ವಚ್ಛತೆಯೇ ಸೇವೆ” ಪಾಕ್ಷಿಕ ಅಭಿಯಾನದಡಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಮದಕರಿಪುರ ಗ್ರಾಮ ಪಂಚಾಯತ್ ಹಾಗೂ ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎರಡು ವಾರಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛತೆ ಜತೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸ್ವಚ್ಛತೆಯ ಬಗ್ಗೆ ಗಟ್ಟಿಯಾದ ಸಂದೇಶ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ ಮಾತನಾಡಿ, ಅಕ್ಟೋಬರ್ 02ರ ಗಾಂಧಿ ಜಯಂತಿ ಅಂಗವಾಗಿ ಇಡೀ ದೇಶಾದ್ಯಂತ ಸ್ವಚ್ಛತಾ ಹೀ ಸೇವಾ ಅಭಿಯಾನ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೃಹತ್ ಕಸದ ರಾಶಿಗಳಿರುವ ಸ್ಥಳಗಳನ್ನು ಗುರುತಿಸಿದ್ದು, ಅಂತಹ ಕಡೆಗಳಲ್ಲಿ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಕಸವನ್ನು ತೆರವು ಮಾಡಲಾಗುತ್ತಿದೆ, ಅಲ್ಲದೇ ಕೆರೆ, ಕಟ್ಟೆ, ಕಲ್ಯಾಣಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಿ ನೀರನ್ನು ಬಳಕೆಗೆ ಯೋಗ್ಯವಾಗುವ ರೀತಿಯಲ್ಲಿ ಮಾಡಲಾಗುತ್ತಿದೆ, ಜತೆಯಲ್ಲಿ ಸ್ವಚ್ಚತಾಗಾರರು, ಗ್ರಾಮ ಪಂಚಾಯತ್ ಸಿಬ್ಬಂದಿಗೆ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ, ಅವರ ಕಾರ್ಯಕ್ರಮ ಪ್ರಶಂಸಿಸಿ ಅವರನ್ನು ಗೌರವಿಸಲಾಗುತ್ತದೆ, ಸ್ವಚ್ಚತೆ ಎನ್ನುವುದು ಕೇವಲ ಗ್ರಾಮ ಪಂಚಾಯತ್ ಕೆಲಸವಲ್ಲ, ಸಾರ್ವಜನಿಕರು ಕೂಡ ಸ್ವಚ್ಚತೆಗೆ ಕೈಜೋಡಿಸಬೇಕು, ಸಾರ್ವಜನಿಕರಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾಗದ ಹೊರತು, “ನನ್ನ ಗ್ರಾಮ ನನ್ನ ಗ್ರಾಮ ಪಂಚಾಯತ್” ಎಂಬ ಭಾವನೆ ಮೂಡುವುದಿಲ್ಲ, ಜಾಗೃತರಾಗುವವರೆಗೂ ಪದೇ ಪದೇ ಈ ರೀತಿಯ ಶ್ರಮದಾನ ಹಮ್ಮಿಕೊಳ್ಳಬೇಕಾಗುತ್ತದೆ, ನಾಗರೀಕರು ಸ್ವಯಂ ಪ್ರೇರಿತರಾಗಿ ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಮನೆ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಕಸವನ್ನು ತೆರವು ಮಾಡಬೇಕು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಬಿಸಾಡದೆ ಕಸ ಸಂಗ್ರಹಿಸುವ ವಾಹನದಲ್ಲಿ ಹಾಕುವ ಮೂಲಕ ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವೈ. ರವಿಕುಮಾರ್ ಮಾತನಾಡಿ, ದೇಶಾದ್ಯಂತ ಕಳೆದ ಸೆಪ್ಟಂಬರ್ 17 ರಿಂದ ಶ್ರಮದಾನ ಸೇರಿದಂತೆ ನಾನಾ ರೀತಿಯ ಚಟುವಟಿಕೆಗಳನ್ನು ಗಾಂಧಿ ಜಯಂತಿವರೆಗೂ ನಡೆಸಲಾಗುತ್ತಿದ್ದು, ಚಿತ್ರದುರ್ಗ ತಾಲೂಕಿನ ಎಲ್ಲ 38 ಗ್ರಾಮ ಪಂಚಾಯತ್‍ಗಳಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ, ಈ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಕನಸನ್ನು ನನಸು ಮಾಡಬೇಕಿದೆ, ಸಾರ್ವಜನಿಕರು ಎಲ್ಲೆಂದರಲ್ಲಿ ಹಾಗೂ ಚರಂಡಿಗಳಲ್ಲಿ ಕಸ ಎಸೆಯುವುದರಿಂದ ಚರಂಡಿಗಳು ಕಟ್ಟಿಕೊಂಡು ಮಲಿನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ, ಹಾಗಾಗಿ ಸಾರ್ವಜನಿಕರು ಸ್ವಚ್ಚತೆ ಕಾಪಾಡಬೇಕು ಎಂದು ಹೇಳಿದರು.
ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಶಿಬಿರಾಧಿಕಾರಿ ಪೆನ್ನಯ್ಯ ಮಾತನಾಡಿ, ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಸ್ವಚ್ಚತೆ ಕೂಡ ಒಂದಾಗಿದೆ, ಸ್ವಚ್ಚತೆ ಕೇವಲ ಒಂದೆರೆಡು ದಿನಗಳಿಗೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕಿದೆ ಎಂದರು.
ಏಕ್ ದಿನ್, ಏಕ್ ಘಂಟಾ, ಏಕ್ ಸಾಥ್ ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗುರುವಾರ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಅವರು ಸ್ವಚ್ಚತೆ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸುಮ, ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ (ಪಂಚಾಯತ್ ರಾಜ್) ಆರ್.ರೂಪಕುಮಾರಿ, ಮದಕರಿಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಭವ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿ.ನಾಗರಾಜ್, ಎನ್‍ಎಸ್‍ಎಸ್ ಸಹ ಅಧಿಕಾರಿ ತಿಪ್ಪೇಸ್ವಾಮಿ, ಸ್ವಚ್ಛ ಭಾರತ್ ಮಿಷನ್‍ನ ಜಿಲ್ಲಾ ಸಮಾಲೋಚಕರು ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ, ವಿದ್ಯಾರ್ಥಿನಿಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.






About The Author
Discover more from JANADHWANI NEWS
Subscribe to get the latest posts sent to your email.