September 13, 2025
1756131930479.jpg


ಚಿತ್ರದುರ್ಗಆಗಸ್ಟ್.25:
ನಗರದಲ್ಲಿ ಜರುಗುವ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ ಮೆರವಣಿಗೆ ವೇಳೆ ಜನದಟ್ಟಣೆ ಹಾಗೂ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕದಳ, ನಗರಸಭೆ, ಆರೋಗ್ಯ, ಸಾರಿಗೆ, ಬೆಸ್ಕಾಂ, ಎನ್.ಸಿ.ಸಿ, ಎನ್.ಎಸ್.ಎಸ್ ಹಾಗೂ ಸ್ವಯಂ ಸೇವಕರ ನಡುವೆ ಸಮನ್ವಯ ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ಸೋಮವಾರ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಸಿದ್ದತೆ ಹಾಗೂ ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಕುರಿತು ಸಂಬಂಧಪಟ್ಟ ಇಲಾಖೆಗಳ ಸಭೆ ನಡೆಸಿ ಅವರು ಮಾತನಾಡಿದರು.
ಈ ಬಾರಿಯ ಮೆರವಣಿಗೆಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ವಿಪತ್ತು ನಿರ್ವಹಣೆ ಹಾಗೂ ಜನರ ಜೀವ ರಕ್ಷಣೆ ಕಾರ್ಯಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಅತಿಯಾದ ಜನದಟ್ಟಣೆಯಿಂದ ನೂಕು ನುಗ್ಗಲು, ಕಾಲ್ತುಳಿತ, ವಿದ್ಯುತ್ ಹಾಗೂ ಅಗ್ನಿ ಅವಘಡದಂತಹ ವಿಪತ್ತು ಉಂಟಾಗಬಹದು. ಕೆಲವರಿಗೆ, ರಕ್ತದೊತ್ತಡ, ಹೃದಯಘಾತ ಸೇರಿದಂತೆ ವೈದ್ಯಕೀಯ ತುರ್ತು ಎದುರಾಗಬಹುದು. ಈ ವೇಳೆ ಸ್ಥಳದಲ್ಲಿರುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೊದಲಿಗೆ ಸ್ಪಂದಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಮಾತನಾಡಿ, ಶೋಭಾಯಾತ್ರೆಯ ದಿನ ಎಲ್ಲಾ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿದ್ದು, ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ, ಬಸವೇಶ್ವರ ಹಾಗೂ ವೇದಾಂತ ಆಸ್ಪತ್ರೆ ಸೇರಿದಂತೆ ಮೆರವಣಿಗೆ ಹಾದಿ ಸಾಗುವ ಹತ್ತಿರದ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಕ್ಕಾಗಿ 200 ಬೆಡ್‍ಗಳನ್ನು ಮೀಸಲಿರಿಸಲಾಗುವುದು. 10 ಸರ್ಕಾರಿ 10 ಖಾಸಗಿ ಆಂಬ್ಯುಲೆನ್ಸ್‍ಗಳನ್ನು ಸನ್ನದ್ಧವಿರಿಸಿ ಎಲ್ಲಾ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ಶೋಭಾಯಾತ್ರೆ ದಿನ ನಗರ ಸಂಪರ್ಕಿಸುವ 6 ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟ್, ಮೆರವಣಿಗೆ ಸಾಗುವ ಹಾದಿಯುದ್ದಕ್ಕೂ 18 ಕಡೆ ಪೊಲೀಸ್ ವಾಚ್ ಟವರ್ ನಿರ್ಮಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ 161 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇದರೊಂದಿಗೆ 20 ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸಲಾಗುವುದು. ಈಗಾಗಲೇ ಮೆರವಣಿಗೆ ರಸ್ತೆಯಲ್ಲಿನ ಕಟ್ಟಡಗಳ ಮೇಲೆ ಸಾಮಥ್ರ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸದಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರು, ಮೆರವಣಿಗೆ ರಸ್ತೆಯ ಸಚ್ಛತೆ ಕಾರ್ಯ ಕೈಗೊಳ್ಳಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ನಗರ ಸಭೆ ಅಭಿಯಂತರ ರಾಜು ತಿಳಿಸಿದರು.
ಸಭೆಯಲ್ಲಿ ಬೆಸ್ಕಾಂ, ಅಗ್ನಿಶಾಮಕ, ಶಿಕ್ಷಣ, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಲಾಯಿತು.
ಅಣುಕು ರಕ್ಷಣಾ ಕಾರ್ಯ ಪ್ರದರ್ಶನ: ಶೋಭಾಯಾತ್ರೆ ಜನದಟ್ಟಣೆ ನಡುವೆ ರಕ್ಷಣಾ ಕಾರ್ಯ ನಡೆಸುವ ಕುರಿತು ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಸಂಜೆ ಅಣಕು ಪ್ರದರ್ಶನ ನಡೆಸಲಾಯಿತು. ಈ ವೇಳೆ ವಿಪತ್ತಿಗೆ ತುತ್ತಾದ ವ್ಯಕ್ತಿಗಳನ್ನು ಅಗ್ನಿಶಾಮಕ ಹಾಗೂ ಸ್ವಯಂ ಸೇವಕರು ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ರವಾನಿಸಿದರು.
ಶೋಭಾಯಾತ್ರೆ ಮೆರವಣಿಗೆ ನಗರದ ಚಳ್ಳಕೆರೆ ಗೇಟ್‍ನಿಂದ ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಎಸ್.ಬಿ.ಎಂ. ವೃತ್ತ, ಗಾಂಧಿ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ, ಕನಕ ವೃತ್ತ, ಚಂದ್ರವಳ್ಳಿ ಕ್ರಾಸ್ ಮೂಲಕ ಚಂದ್ರವಳ್ಳಿಯಲ್ಲಿ ನಗರಸಭೆಯಿಂದ ನಿರ್ಮಿಸಲಾಗಿರುವ ಗಣಪತಿ ವಿಸರ್ಜನೆ ಸ್ಥಳಕ್ಕೆ ತಲುಪಲಿದೆ.
ಚಳ್ಳಕೆರೆ ವೃತ್ತದಿಂದ ಎಸ್.ಬಿ.ಐ ವೃತ್ತದ ವರೆಗಿನ ಸ್ಥಳದಲ್ಲಿ ಸಾರ್ವಜನಿಕರು ವಿಪತ್ತಿಗೆ ಸಿಲುಕಿದರೆ ಅವರನ್ನು ಪರ್ಯಾಯ ಮಾರ್ಗವಾಗಿ ಜಿಲ್ಲಾ ಆಸ್ಪತ್ರೆ ರವಾನಿಸಾಗವುದು. ಗಾಂಧಿ ವೃತ್ತದಿಂದ ಚಂದ್ರವಳ್ಳಿಯ ಗಣಪತಿ ವಿಸರ್ಜನೆ ಸ್ಥಳದವರೆಗೆ ಸಾರ್ವಜನಿಕರು ವಿಪತ್ತಿಗೆ ಸಿಲುಕಿದರೆ ಅವರನ್ನು ಹತ್ತಿರ ಆಸ್ಪತ್ರೆ ಅಥವಾ ಮೇದಹಳ್ಳಿ ರಸ್ತೆ ಮಾರ್ಗವಾಗಿ ಬಸವೇಶ್ವರ ಆಸ್ಪತ್ರೆ ರವಾನಿಸಲಾಗುವುದು.
ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಹಾಗೂ ಹತ್ತಿರದ ಆಸ್ಪತ್ರೆಗೆ ಆಂಬ್ಯುಲೆನ್ಸ್ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು ಅಣಕು ಕಾರ್ಯಾಚರಣೆ ಮೂಲಕ ಮನದಟ್ಟು ಮಾಡಿಕೊಡಲಾಗಿದೆ. ನೈಜ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಸಂಯಮದಿಂದ ವರ್ತಿಸಿ ಅಮೂಲ್ಯವಾದ ಜೀವ ಉಳಿಸಲು ಪ್ರಯತ್ನಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಪೊಲೀಸ್ ಉಪಾಧೀಕ್ಷಕರಾದ ಶ್ರೀನಿವಾಸ್, ದಿನಕರ್, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಡಿಡಿಪಿಐ ಎಂ.ಆರ್. ಮಂಜುನಾಥ, ನಗರಸಭೆ ಆಯುಕ್ತೆ ಎಂ.ರೇಣುಕಾ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading