
ಹಿರಿಯೂರು:
2025-26ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಶೇ.5 ಯೋಜನೆಯಲ್ಲಿ ಹಿರಿಯೂರು ನಗರದಲ್ಲಿ ವಾಸವಾಗಿರುವ ದಿವ್ಯಾಂಗ ಅನಿಲ ರಹಿತ ಕುಟುಂಬಗಳಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ ಒದಗಿಸುವುದು ಸೇರಿದಂತೆ ಅಗತ್ಯವಿದ್ದಲ್ಲಿ ಸಂಪರ್ಕದೊಂದಿಗೆ ಒಂದು ಸ್ಟೌವ್, ಒಂದು ಸಿಲಿಂಡರ್ ಒದಗಿಸಲು ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀ ಆರ್. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರ ಅಧಿಕೃತ ಜ್ಞಾಪನಾ ಪತ್ರದ ಆದೇಶದಂತೆ ಸಂ.ಜಿ.ನ.ಕೋ ನ(3) ಎಸ್.ಎಫ್.ಸಿ./ಸಿ.ಆರ್.63/ 2025- 26ರ ಆದೇಶದಲ್ಲಿ 14ಮೇ 2025ರ ಆದೇಶದಲ್ಲಿ ಸುಮಾರು 85 ಸಾವಿರರೂಗಳಿಗೆ ಅಡುಗೆ ಅನಿಲ ಸಂಪರ್ಕ ಪಡೆಯಲು ಸಹಾಯಧನ ಒದಗಿಸಲು ಮಂಜೂರಾತಿ ನೀಡಿದ್ದು, ಅದರಂತೆ ಅರ್ಜಿಗಳನ್ನು ಅಹ್ವಾನಿಸಿದ್ದು, ಒಟ್ಟು 08ಅರ್ಜಿಗಳು ಬಂದಿದ್ದು, ಈ ಫಲಾನುಭವಿಗಳನ್ನು ಆಯ್ಕೆ ಮಾಡುವ ಬಗ್ಗೆ ವಿಷಯವನ್ನು ಸಭೆಯಲ್ಲಿ ಮಂಡಿಸಿ, ಚರ್ಚಿಸಿ, ಸಭೆಯ ಒಪ್ಪಿಗೆ ಪಡೆಯಲಾಯಿತು.
2025- 26 ನೇ ಸಾಲಿನ ನಗರಸಭೆ ನಿಧಿಯ 24.10ರ ಯೋಜನೆಯಲ್ಲಿ ಹಿರಿಯೂರು ನಗರ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟಜಾತಿಯ ಪತ್ರಕರ್ತರಿಗೆ ಲ್ಯಾಪ್ಟಾಪ್ ಖರೀದಿಸಲು ಸಹಾಯಧನ ನೀಡುವ ಬಗ್ಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ವಿಚಾರವನ್ನು ಸಭೆಯಲ್ಲಿ ಮಂಡಿಸಿ, ಚರ್ಚಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗದವರು ಅಧಿಕೃತ ಜ್ಞಾಪನಾ ಪತ್ರದ ಸಂ.ಜಿ. ಕೋ(3) ನಗರ ಸಭೆ ನಿಧಿ /ಸಿ ಆರ್ 59/2025- 26 ದಿನಾಂಕ 21. ಮೇ 2025ರ ಆದೇಶದಲ್ಲಿ ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ಪರಿಶಿಷ್ಟಜಾತಿಯ ಪತ್ರಕರ್ತರಿಗೆ ಲ್ಯಾಪ್ಟಾಪ್ ಖರೀದಿಸಲು 2ಲಕ್ಷರೂ ಗಳ ಮಂಜೂರಾತಿ ನೀಡಿದ್ದು, ಅದರಂತೆ 6 ಅರ್ಜಿಗಳು ಬಂದಿದ್ದು ಅದರಲ್ಲಿ ಅರ್ಹ ಫಲಾನುಭವಿಗಳಿಗೆ ಸಹಾಯಧನ ನೀಡಲು ಇಂದಿನ ಸಭೆಯಲ್ಲಿ ಸರ್ವಸಮ್ಮತ ಒಪ್ಪಿಗೆ ನೀಡಲಾಯಿತು.
ಹಿರಿಯೂರು ನಗರಸಭೆ ಘನ ತ್ಯಾಜ್ಯವಸ್ತು ನಿರ್ವಹಣೆ ಸಂಸ್ಕರಣ ಘಟಕಕ್ಕೆ ವಾಹನ ಚಾಲಕರು, ಸಿಬ್ಬಂದಿಗಳು ಹಾಗೂ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿಕೊಳ್ಳಲು ಬಂದಿರುವ ಟೆಂಡರ್ ಅನ್ನು ಪರಿಶೀಲಿಸಿ ಅನುಮೋದಿಸುವ ವಿಚಾರ ಸಭೆಗೆ ಮಂಡಿಸಲಾಯಿತು.
ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯಸಂಸ್ಥೆಗಳ ಘನತ್ಯಾಜ್ಯ ವಸ್ತು ಮತ್ತು ಘನತ್ಯಾಜ್ಯ ನಿರ್ವಹಣೆಗಾಗಿ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರ ಆದೇಶದಂತೆ ನಗರಸಭೆಯ ಘನತ್ಯಾಜ್ಯವಸ್ತು ನಿರ್ವಹಣೆ ಸಂಸ್ಕರಣೆ ವಾಹನಚಾಲಕರು, ಸಿಬ್ಬಂದಿಗಳು ಹಾಗೂ ಸಹಾಯಕರನ್ನು ಹೊರಗುತ್ತಿಗೆ ಆದರದ ಮೇಲೆ ನಿಯೋಜಿಸಿಕೊಳ್ಳಲು ಇಂಡೆಂಟ್ ನಂ.ಡಿ.ಎ.ಎ2025- 26 /ಎಸ್.ಇ.5348ರಂತೆ ಟೆಂಡರ್ ಕರೆಯಲಾಗಿದ್ದು,
ಈ ಸದರಿ ಟೆಂಡರ್ ನಲ್ಲಿ ಒಬ್ಬರು ಮಾತ್ರ ಗುತ್ತಿಗೆದಾರರು ಶ್ರೀ ರುದ್ರೇಶ್ , ಟಿ.ಎನ್. ಎಸ್.ವಿ. ಎಸ್. ಟೆಕ್ನಾಲಜಿ ತುಮಕೂರು ರವರು ಭಾಗವಹಿಸಿದ್ದು, ಎಲ್ಲಾ ರೀತಿಯಿಂದ ಈ ಟೆಂಡರ್ ದಾರರು ತಾಂತ್ರಿಕವಾಗಿ ಅರ್ಹರಿದ್ದು, ಕೌನ್ಸಿಲ್ ಸಭೆ ಅನುಮೋದನೆ ಪಡೆದು ಜಿಲ್ಲಾಧಿಕಾರಿಗಳು ಚಿತ್ರದುರ್ಗ ರವರಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ವಿಷಯವನ್ನು ಸಭೆಯಲ್ಲಿ ಮಂಡಿಸಿ, ಚರ್ಚಿಸಲಾಯಿತು.
ಈ ವಿಚಾರಕ್ಕೆ ಆರಂಭದಲ್ಲೇ ಅಪಸ್ವರ ಎತ್ತಿದ ನಗರಸಭೆ ಸದಸ್ಯರು ಹಾಗೂ ವಕೀಲರು ಆದ ಜಿ.ಎಸ್.ತಿಪ್ಪೇಸ್ವಾಮಿ ಅವರು ಮಾತನಾಡಿ ಈ ಟೆಂಡರ್ ಗೆ ಒಪ್ಪಿಗೆ ನೀಡಲು ಇದರ ಪ್ರೊಸೀಡಿಂಗ್ಸ್ ತಿಳಿಸಿ. ಎಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು. ಈಗಾಗಲೇ ಕಳೆದ ವರ್ಷದಿಂದ ಕೆಲಸ ಮಾಡುವವರ ಗತಿಯೇನು ಎಂಬುದಾಗಿ ಅವರು ಸಭೆಗೆ ಪ್ರಶ್ನಿಸಿದರು.
ನಗರಸಭೆ ಸದಸ್ಯರಾದ ಮಹೇಶ್ ಪಲ್ಲವ ಅವರು ಮಾತನಾಡಿ ಈಗಾಗಲೇ ನಗರದ ಸ್ವಚ್ಚತೆಗೆ ಆದ್ಯತೆ ನೀಡಿ ಪೌರಕಾರ್ಮಿಕರು ಹಾಗೂ ವಾಹನ ಚಾಲಕರುಗಳನ್ನು ನೇಮಿಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದು, ಅವರನ್ನು ಹೊರಹಾಕಲು ಹೇಗೆ ಸಾಧ್ಯ. ಅವರನ್ನು ತೆಗೆದುಹಾಕುವುದು ಎಷ್ಟು ಸರಿ ಎಂಬುದಾಗಿ ನಗರಸಭೆ ಅಧ್ಯಕ್ಷರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರಾದ ಬಾಲಕೃಷ್ಣರವರು ಒಟ್ಟು 73 ಜನರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಆದೇಶವಿದ್ದು, ಈಗಾಗಲೇ 34ಜನ ಪೌರಕಾರ್ಮಿಕರು ಹಾಗೂ ವಾಹನ ಚಾಲಕರು ತುರ್ತು ಕೆಲದ ನಿಮಿತ್ತ ಕೆಲಸ ಮಾಡುತ್ತಿದ್ದು, ಉಳಿದ 39ಜನರನ್ನು ಹೊಸದಾಗಿ ನೇಮಿಸಿಕೊಳ್ಳಬೇಕಾಗುವುದು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಅಜಯ್ ಕುಮಾರ್ ಮಾತನಾಡಿ 2011ರಲ್ಲಿ ನಗರದಲ್ಲಿ ಸುಮಾರು 56,416 ಮಂದಿ ಜನಸಂಖ್ಯೆಯಿದ್ದು, ಇದೀಗ 75 ಸಾವಿರದಷ್ಟು ಜನಸಂಖ್ಯೆ ಹೆಚ್ಚಾಗಿದೆ. ಸುಮಾರು 500 ಜನಕ್ಕೆ ಒಬ್ಬರಂತೆ 75 ಜನರನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ. ಆದ್ದರಿಂದ ಅವರಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದು ಬೇಡ ಎಂದರು.
ಮಾಜಿ ಉಪಾಧ್ಯಕ್ಷರಾದ ಬಿ.ಎನ್. ಪ್ರಕಾಶ್ ಮಾತನಾಡಿ ಯಾರನ್ನು ಕೈಬಿಡುವ ಪ್ರಶ್ನೆ ಬೇಡ. ನಮ್ಮ ಪುರಸಭೆ ನಿಧಿಯಿಂದ ನಾವೇ ಸಂಬಳ ಕೊಡಬೇಕಾಗಿದ್ದು, 8-10 ಜನ ಹೆಚ್ಚಾದರೂ ಪರವಾಗಿಲ್ಲ ಆದರೆ, ಒಂದೊಂದು ಮನೆಯಿಂದ 2-3 ಜನ ಬಂದು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನಗರಸಭೆ ಪೌರಾಯುಕ್ತರು ಪರಿಶೀಲಿಸಿ ಮನೆಗೊಬ್ಬರಂತೆ ಪೌರಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷರಾದ ಈ.ಮಂಜುನಾಥ್ ಹಾಗೂ ಈರಲಿಂಗೇಗೌಡ ರವರು ಮಾತನಾಡಿ ಈಗ ಆಯ್ಕೆ ಮಾಡಿಕೊಳ್ಳಬೇಕಾಗಿರುವ ಪೌರಕಾರ್ಮಿಕರನ್ನು ಕನಿಷ್ಠ ಆಯಾ ವಾರ್ಡ್ ನ ಕೌನ್ಸಿಲರ್ ಮೂಲಕ ಕೌನ್ಸಿಲರ್ ಗೆ ಒಬ್ಬರಂತೆ ಆಯ್ಕೆಮಾಡಿಕೊಳ್ಳಬೇಕು. ಪ್ರತಿ ಕೌನ್ಸಿಲರ್ ಸಹ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಡುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಮಾಜಿ ಅಧ್ಯಕ್ಷೆ ಶ್ರೀಮತಿ ಶಿವರಂಜಿನಿ ಯಾದವ್ ಮಾತನಾಡಿ ನಗರದ ಸ್ವಚ್ಚತೆಗಾಗಿ ಶ್ರಮಿಸಿರುವ ಪೌರಕಾರ್ಮಿಕರನ್ನು ಬೀದಿ ಪಾಲು ಮಾಡುವ ಹಾಗಿಲ್ಲ. ಸುಮಾರು 8-10 ಜನ ಹೆಚ್ಚಿಗೆ ಕೆಲಸ ಮಾಡುತ್ತಿದ್ದರೂ ಅವರನ್ನು ತೆಗೆದುಕೊಳ್ಳಲು ನಮ್ಮ ಸಚಿವರಿಂದ ಡಿ.ಸಿ.ಯವರಿಗೆ ಶಿಫಾರಸ್ಸು ಪತ್ರ ಬರೆಸೋಣ. ಜನಸಂಖ್ಯೆ ಆಧಾರದ ಮೇಲೆ ಉಳಿದವರನ್ನು ಅನುಮತಿ ಮಾಡಿಸಿ ಸಂಬಳ ಕೊಡಿಸೋಣ ಎಂದರು.
ಸದಸ್ಯರ ಎಲ್ಲಾ ಮಾತುಗಳನ್ನು ಆಲಿಸಿದ ನಗರಸಭೆ ಪೌರಾಯುಕ್ತರಾದ ಎ.ವಾಸಿಂರವರು ಪ್ರತಿಕ್ರಿಯಿಸಿ, ಈ ಬಗ್ಗೆ ಯಾವ ಸದಸ್ಯರು ಗೊಂದಲಕ್ಕೆ ಒಳಗಾಗುವುದು ಬೇಡ. ಸೊಮೇರಹಳ್ಳಿ ತಾಂಡಾ ಸೇರಿದಂತೆ ನಗರದ ಬೈಪಾಸ್ ರಸ್ತೆಗೆ ಹೊಂದಿಕೊಂಡಂತೆ ಹೊಸ ಬಡಾವಣೆಗಳು ಇದೀಗ ನಗರಸಭೆ ವ್ಯಾಪ್ತಿಗೆ ಸೇರಿದ್ದು, ಹಾಗಾಗಿ ಜನಸಂಖ್ಯೆ ಹೆಚ್ಚಾಗಿರುವುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಸಿ ಎಲ್ಲಾ ಪೌರಕಾರ್ಮಿಕರನ್ನು ಕೆಲಸದಲ್ಲೇ ಮುಂದುವರೆಸಿಕೊಂಡು ಹೋಗುವ ಪ್ರಯತ್ನ ಮಾಡಲಾಗುವುದು ಎಂಬುದಾಗಿ ಸಭೆಗೆ ಭರವಸೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ನಗರಸಭೆ ನೂತನ ಅಧ್ಯಕ್ಷರಾದ ಬಾಲಕೃಷ್ಣರವರು ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಪೌರಾಯುಕ್ತ ಎ.ವಾಸಿಂ, ಸೇರಿದಂತೆ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಎಂ.ಡಿ. ಸಣ್ಣಪ್ಪ, ವಿಠ್ಠಲ ಪಾಂಡುರಂಗ, ಮಮತಾ, ರತ್ನಮ್ಮ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಸದಸ್ಯರುಗಳಾದ ಚಿತ್ರಜಿತ್ ಯಾದವ್, ಜಿ.ಎಸ್. ತಿಪ್ಪೇಸ್ವಾಮಿ, ಈರಲಿಂಗೇಗೌಡ, ಗುಂಡೇಶ್ ಕುಮಾರ್, ಅನಿಲ್ ಕುಮಾರ್, ಸಮೀವುಲ್ಲಾ, ಜಗದೀಶ್, ಸುರೇಖಾಮಣಿ, ಜಬೀವುಲ್ಲಾ, ಮೊದಲಮೇರಿ, ಗೀತಾಗಂಗಾಧರ್, ಸೇರಿದಂತೆ ನಾಮನಿರ್ದೇಶನ ಸದಸ್ಯರುಗಳಾದ ಶಿವಕುಮಾರ್, ಶಿವಣ್ಣ, ರಮೇಶ್ ಬಾಬು, ಅಸ್ಮಿಯತ್ ಸೇರಿದಂತೆ ನಗರಸಭೆ ವ್ಯವಸ್ಥಾಕರಾದ ಶ್ರೀಮತಿ ಮಂಜುಳಾ, ಲೆಕ್ಕಅಧೀಕ್ಷಕರಾದ ಗೋವಿಂದರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


About The Author
Discover more from JANADHWANI NEWS
Subscribe to get the latest posts sent to your email.