September 15, 2025


ಚಿತ್ರದುರ್ಗ ಮೇ25:
ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ರೈತರಿಗೆ ಸಲಹೆ ನೀಡಿದ್ದಾರೆ.
ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ದಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ, ಜಲಜನಕ ಮತ್ತು ಆಮ್ಲಜನಕವು ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತವೆ. ಉಳಿದ 14 ಪೋಷಕಾಂಶಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು, ಕ್ಯಾಲ್ಸಿಯಂ, ಮೆಗ್ನೇಷಿಯಂ, ಗಂಧಕ, ಕಬ್ಬಿಣ, ಜಿಂಕ್, ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬಿಡಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಲಘು ಪೋಷಕಾಂಶಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವುದೇಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆ ಮತ್ತುಅಭಿವೃದ್ದಿಯ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.
ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳಿಗೆ ಭೂಮಿಯೇಮುಖ್ಯಆಧಾರ, ಮಣ್ಣಿನಿಂದಲೇ ಎಲ್ಲಾ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯದಿಲ್ಲವಾದ್ದರಿಂದ ಬಾಹ್ಯವಾಗಿ ನೀಡುವುದು ಅನಿವಾರ್ಯ. ಬೆಳೆಗಳಿಗೆ ಬೇಕಾಗುವ ಈ ಬಾಹ್ಯ ಪೋಷಕಾಂಶಗಳನ್ನು ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದ್ದು, ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ನೇರವಾಗಿ ದೊರೆಯುವ ರೂಪದಲ್ಲಿದ್ದು ಅವುಗಳ ಬಳಕೆ ಅತ್ಯಗತ್ಯವಾಗಿರುತ್ತದೆ.
ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿ.ಎ.ಪಿ.ಯನ್ನು ರೂಢಿಗತವಾಗಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತುರಂಜಕದ ಅಂಶ ಮಾತ್ರವಿರುತ್ತದೆ. ಆದರೆ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿರುವ ಪೊಟ್ಯಾಷ್ ಲಭ್ಯವಿರುವುದಿಲ್ಲ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ (ಗ್ರೇಡ್) ಸಾರಜನಕ, ರಂಜಕ ಮತ್ತು ಪೊಟ್ಯಾಷ್‍ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸ್ಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬಹುದಾಗಿದೆ.
ಶಿಫಾರಸ್ಸಿನಂತೆ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ರಸಗೊಬ್ಬರಳನ್ನು 4:2:1 ಅನುಪಾತದಲ್ಲಿ ಬಳಸಬೇಕಾಗಿರುತ್ತದೆ. ಆದರೆ ಪ್ರಸ್ತುತ ರೈತರು ಯಥೇಚ್ಚವಾಗಿ ಬಳಸುತ್ತಿರುವ ಸದರಿ ರಸಗೊಬ್ಬರಗಳ ಅನುಪಾತವು 6.0:3.9:1.0 ಆಗಿರುತ್ತದೆ. ಇದನ್ನು ಸಮತೋಲನಾತ್ಮಕ ರಸಗೊಬ್ಬರಗಳ ಬಳಕೆಯನ್ನು ಉತ್ತೇಜಿಸಿ, ಸಂಯುಕ್ತ ರಸಗೊಬ್ಬರಗಳನ್ನು ಬಳಸುವುದರಿಂದ ಸರಿದೂಗಿಸಬಹುದಾಗಿರುತ್ತದೆ.
ಅಲ್ಲದೇ ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20:20:0:13, 16:200:13 ಹಾಗೂ ಇವತೆ ಸಂಯುಕ್ತ ರಸಗೊಬ್ಬರಗಳಾದ 15:15:15, 10:26:26, 12:32:16, 22:22:11, 14:35:15, 17:17:17, 14:28:14, 19:19:19, 20:10:10, 15:15:15, 15:15:15(S) ಇತ್ಯಾದಿ ಹಾಗೂ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ರಂಜಕ್ ಪೋಷಕಾಂಶ ನೀಡುವ ಪ್ರಾಮಂ (Phosphate rich organic manure), , ಸಿಂಗಲ್ ಸೂಫರ್ ಪಾಸ್ಫೇಟ್ (SSP)(16% P2O5)ಮತ್ತು ಟ್ರಿಪಲ್ ಸೂಫರ್ ಪಾಸ್ಫೇಟ್ (TSP) (46% P2O5) ಹಾಗೂ ನ್ಯಾನೋ ಡಿ.ಎ.ಪಿ ರಸಗೊಬ್ಬರಗಳನ್ನು ಸಹ ಬಳಸಬಹುದಾಗಿದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಅರಳು ರೂಪದ ಡಿ.ಎ.ಪಿ ರಸಗೊಬ್ಬರ ಲಭ್ಯವಿದ್ದು, ಇವುಗಳ ಗುಣಮಟ್ಟದಲ್ಲಿ ಮತ್ತು ಶೇಕಡ ಪೋಷಕಾಂಶಗಳಲ್ಲಿ ಯಾವುದೇ ವ್ಯಾತ್ಯಾಸವಿರುವುದಿಲ್ಲ. ಅದುದರಿಂದ ರೈತರು ಯಾವುದೇ ಗೊಂದಲವಿಲ್ಲದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಪ್ಪು ಅಥವಾ ಬಿಳಿ ಬಣ್ಣದ ಅರಳು ರೂಪದ ಡಿ.ಎ.ಪಿ ರಸಗೊಬ್ಬರ ಬಳಸಬಹುದಾಗಿದೆ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading