ಚಿತ್ರದುರ್ಗಏ.25:
ಮಲೇರಿಯಾ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿರಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದ ಮುಂಭಾಗಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಜನ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕೀಟಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾ ರೋಗವು ಒಂದಾಗಿದೆ. ಈ ಹಿಂದೆ ಮಲೇರಿಯಾ ರೋಗ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿತ್ತು. ಈಗ ಮಲೇರಿಯಾ ನಿರ್ಮೂಲನೆ ಹಂತಕ್ಕೆ ತಲುಪಿದೆ. ಸಾರ್ವಜನಿಕರ ಸಹಕಾರದೊಂದಿಗೆ ಮಲೇರಿಯಾ ಮುಕ್ತ ಜಿಲ್ಲೆಯಾಗಿಸೋಣ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ ಆಚರಿಸುತ್ತಿದ್ದು, ಈ ವರ್ಷದ ಧ್ಯೇಯವಾಕ್ಯ “ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ ಮಾಡಿ. ಮರು ಕಲ್ಪನೆ ಮಾಡಿ. ಮರು ಉತ್ತೇಜನ ನೀಡೋಣ “Theme: malaria ends with us: reinvest reimagine reignite” 2027 ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸಿ ಗುರಿಯನ್ನು ಸಾಧಿಸ ಬೇಕಾಗಿರುವುದರಿಂದ ಎಲ್ಲಾ ಹಂತಗಳಲ್ಲಿಯೂ ಮಲೇರಿಯಾ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ರಾಜ್ಯ ಹಾಗೂ ಕೇಂದ್ರದ ಮಾರ್ಗಸೂಚಿಯಂತೆ 2027ರೊಳಗೆ ಕರ್ನಾಟಕದಲ್ಲಿ ಮಲೇರಿಯಾ ನಿವಾರಣಾ ಗುರಿಯೊಂದಿಗೆ ಇಲಾಖೆ ಕಾರ್ಯೋನ್ಮುಖವಾಗಿದೆ. ಶೀಘ್ರ ಪತ್ತೆ ಸಂಪೂರ್ಣ ಚಿಕಿತ್ಸೆ, ಸೊಳ್ಳೆ ನಿಯಂತ್ರಣ ಕ್ರಮಗಳು, ಜೈವಿಕ ಪರಿಸರ ನಿಯಂತ್ರಣಾ ಕ್ರಮಗಳನ್ನು ಇಲಾಖೆ ನಿರ್ವಹಿಸುತ್ತಿದೆ. ಆರೋಗ್ಯ ಶಿಕ್ಷಣ ಕಾರ್ಯಕ್ರಮ ಹೆಚ್ಚು ಹೆಚ್ಚು ನಿರ್ವಹಿಸಿ ಮಲೇರಿಯಾ ನಿರ್ಮೂಲನಾ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ನಿವಾರಣಾಧಿಕಾರಿ ಡಾ.ಕಾಶಿ ಮಾತನಾಡಿ, 2023 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿರುವುದಿಲ್ಲ ಎಂದರು.
ಚಿತ್ರದುರ್ಗ ನಗರದ ಬುದ್ಧ ನಗರದಿಂದ ಪ್ರಾರಂಭವಾಗುವ ಜನ ಜಾಗೃತಿ ಜಾಥಾವು ಶುದ್ಧ ಕುಡಿಯುವ ನೀರಿನ ರಸ್ತೆ ಪ್ರಶಾಂತ ನಗರ, ಶಾಸಕರಾದ ಚಂದ್ರಪ್ಪ ಮನೆ ಹತ್ತಿರದ ಮಾರ್ಗವಾಗಿ ಪರಿಸರ ಕಟ್ಟಡದಿಂದ ಆರೋಗ್ಯ ಕೇಂದ್ರ ಬುದ್ಧ ನಗರದವರೆಗೆ ಜನ ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ವೈದ್ಯಾಧಿಕಾರಿಗಳಾದ ಡಾ.ಸುರೇಂದ್ರ, ಡಾ.ಬಿಲಾಲ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಶ್ರೀನಿವಾಸ, ನಾಗರಾಜ್, ಮಳಲಿ ಶ್ರೀನಿವಾಸ, ಮಲ್ಲಿಕಾರ್ಜುನ, ಗುರುಮೂರ್ತಿ, ತಾಲ್ಲೂಕು ಆಶಾ ಬೋಧಕಿ ತಬಿತಾ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಇದ್ದರು.


About The Author
Discover more from JANADHWANI NEWS
Subscribe to get the latest posts sent to your email.