ಚಿತ್ರದುರ್ಗಮಾ.25:
ರೈಲ್ವೆ ಯೋಜನೆಗಾಗಿ ಭೂಮಿ ಬಿಟ್ಟುಕೊಡುವ ರೈತರಿಗೆ ಯಾವುದೇ ಅನ್ಯಾಯವಾಗದಂತೆ, ಪ್ರಸ್ತುತ ಮಾರುಕಟ್ಟೆ ದರದಲ್ಲೇ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ರೈತರಿಗೆ ಭರವಸೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಚಿಕ್ಕಜಾಜೂರು ಮತ್ತು ಬಳ್ಳಾರಿ ನಡುವಿನ ರೈಲ್ವೇ ಹಳಿ ದ್ವಿಗುಣಗೊಳಿಸುವ ಭೂಸ್ವಾಧೀನ ಪ್ರಕ್ರಿಯೆ ಕುರಿತು ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿ ಮಾರ್ಗದ ರೈಲ್ವೆ ಹಳಿ ಡಬಲ್ ಲೈನ್ ಮಾಡುವ ಉದ್ದೇಶವಿದೆ. ಈ ಭೂಸ್ವಾಧೀನ ಪ್ರಕ್ರಿಯೆಯು ಯಾವುದೇ ಖಾಸಗಿ ವ್ಯಕ್ತಿ ಅಥವಾ ಕಂಪನಿಯ ಲಾಭಕ್ಕಲ್ಲ, ಬದಲಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ ನಡೆಯುತ್ತಿದೆ. ರೈಲು ಹಳಿ ಡಬ್ಲಿಂಗ್ ಆದರೆ ಈ ಭಾಗದ ಅಡಿಕೆ ಹಾಗೂ ಇತರ ಬೆಳೆಗಳ ಸಾಗಾಟಕ್ಕೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರ ಆತಂಕ ಬೇಡ, ಸಬ್ ರಿಜಿಸ್ಟ್ರಾರ್ ಕಚೇರಿಯ ಮಾರುಕಟ್ಟೆ ಮೌಲ್ಯದ ದರ ಹಾಗೂ ಕಳೆದ ಮೂರು ವರ್ಷಗಳ ಮಾರಾಟದ ಸರಾಸರಿ ದರವನ್ನು ಆಧರಿಸಿ ಮೂಲ ಬೆಲೆ ನಿಗದಿಪಡಿಸಲಾಗುತ್ತದೆ. ನಗರ ಪ್ರದೇಶದ ಭೂಮಿಗೆ ಮೂಲ ಬೆಲೆಯ 2 ಪಟ್ಟು ಪರಿಹಾರ ನೀಡಿದರೆ, ಗ್ರಾಮೀಣ ಭಾಗದ ಭೂಮಿಗೆ ಅದರ ದರಕ್ಕೆ ಅನುಗುಣವಾಗಿ 3 ರಿಂದ 4 ಪಟ್ಟು ಹೆಚ್ಚಿನ ಹಣ ಸಿಗಲಿದೆ. ಇದರೊಂದಿಗೆ ಜಮೀನಿನಲ್ಲಿ ಇರುವ ಬೆಳೆ, ತೋಟಗಾರಿಕೆ ಬೆಳೆಗಳು, ಪಶು ಸಂಗೋಪನೆಗಾಗಿ ನಿರ್ಮಿಸಿರುವ ಕಟ್ಟಡ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ನಿರ್ಮಿಸಿದ ಇತರೆ ನಿರ್ಮಾಣಗಳಿಗೂ ಪರಿಹಾರ ದೊರಕಲಿದೆ. ಕೇವಲ ಹಣಕಾಸಿನ ಪರಿಹಾರವಲ್ಲದೆ, ಭೂಮಿ ನೀಡುವ ರೈತರಿಗೆ ಸರ್ಕಾರದಿಂದ ಹಲವು ವಿಶೇಷ ಸೌಲಭ್ಯ ನೀಡಲಾಗುತದೆ. ಕಾಲು ಭಾಗಕ್ಕಿಂತ ಹೆಚ್ಚು ಜಮೀನು ಕಳೆದುಕೊಳ್ಳುವ ರೈತರಿಗೆ ‘ಯೋಜನಾ ನಿರಾಶ್ರಿತ ಪ್ರಮಾಣಪತ್ರ’ ನೀಡಲಾಗುವುದು. ಈ ಮೂಲಕ ಅವರ ಮಕ್ಕಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ದೊರೆಯಲಿದೆ. ಪರಿಹಾರದ ಹಣದಿಂದ ರೈತರು ಬೇರೆಡೆ ಭೂಮಿ ಖರೀದಿಸುವಾಗ ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ನೇರ ಖರೀದಿ ಪ್ರಕ್ರಿಯೆ: ವಿಳಂಬಕ್ಕೆ ಆಸ್ಪದವಿಲ್ಲ
************
ಸಾಮಾನ್ಯ ಭೂಸ್ವಾಧೀನ ಪ್ರಕ್ರಿಯೆಯು ಎರಡರಿಂದ ಮೂರು ವರ್ಷಗಳ ದೀರ್ಘಾವಧಿಯನ್ನು ತೆಗೆದುಕೊಳ್ಳುತ್ತದೆ. ಆದರೆ, ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ‘ನೇರ ಖರೀದಿ’ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಇದರಿಂದಾಗಿ ರೈತರು ವರ್ಷಗಟ್ಟಲೆ ಕಾಯುವ ಅಗತ್ಯವಿಲ್ಲ. ಮೂರು ತಿಂಗಳ ಅವಧಿಯಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರದ ಹಣ ನೀಡಲು ಹಣ ಬಿಡುಗಡೆಯಾಗಿ ಸಿದ್ಧವಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲೆಯ ಅಭಿವೃದ್ಧಿ ಹಾಗೂ ರೈಲ್ವೆ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ರೈತರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಈ ಸಂದರ್ಭದಲ್ಲಿ ಬಿ.ಟಿ. ಕುಮಾರಸ್ವಾಮಿ ಮನವಿ ಮಾಡಿದರು
ಈಗಾಗಲೇ ಜಮೀನುಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಯಾವ ಸರ್ವೆ ನಂಬರ್‍ನಲ್ಲಿ ಎಷ್ಟು ಭೂಮಿ ಸ್ವಾಧೀನವಾಗುತ್ತದೆ ಎಂಬ ನಿಖರ ಮಾಹಿತಿ ಲಭ್ಯವಾದ ತಕ್ಷಣ ರೈತರಿಗೆ ಅಧಿಕೃತ ನೋಟಿಸ್ ನೀಡಲಾಗುವುದು. ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಯೋಜನೆಯ ಭೂಸ್ವಾಧೀನ ಹಾಗೂ ಪ್ರಗತಿ ಕುರಿತಂತೆ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಸಭೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್, ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ತೋಟಗಾರಿಕೆ ಜಂಟಿ ನಿರ್ದೇಶಕಿ ಸವಿತಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ತಹಶೀಲ್ದಾರ್ ಗೋವಿಂದರಾಜು, ವಿವಿಧ ರೈತ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.