ಹೊಸದುರ್ಗ ತಾಲ್ಲೂಕಿನ ಕಂಗುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಟಿಕೆರೆ ಹಾಲು ಉತ್ಪಾದಕರ ಘಟಕಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂಪಾಯಿ ಸಹಾಯಧನ ಮಂಜೂರಾತಿ ಪತ್ರ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಿ.ಬಿ. ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಾಲು ಉತ್ಪಾದಕ ಘಟಕಗಳಿಗೆ ನೀಡಲಾಗುತ್ತಿರುವ ಸಹಾಯಧನದಿಂದ ಘಟಕಗಳ ಸಂಖ್ಯೆ ಹೆಚ್ಚುತ್ತಿದ್ದು, ಹಾಲಿನ ಉತ್ಪಾದನೆ ಪ್ರಮಾಣವೂ ಏರಿಕೆಯಾಗುತ್ತಿದೆ ಎಂದರು. ಮಹಿಳೆಯರು ಸ್ವ-ಉದ್ಯೋಗದತ್ತ ಮುಂದಾಗುತ್ತಿದ್ದು, ಹಸು ಸಾಕಾಣಿಕೆಗೆ ಯೋಜನೆ ಮಹತ್ವದ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಡಾ. ಡಿ.ವಿ. ವೀರೇಂದ್ರ ಹೆಗ್ಗಡೆಯವರು ನಮ್ಮ ಭಾಗಕ್ಕೆ ಯೋಜನೆ ವಿಸ್ತರಿಸಿದ ನಂತರ ಕೆರೆ-ಕಟ್ಟೆಗಳು, ಶಾಲಾ-ಕಾಲೇಜುಗಳು ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಾಯಧನ ನೀಡುತ್ತಾ ಭಗವಂತನಂತೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಜುನಾಥ ನಾಗತಿಹಳ್ಳಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳಿಂದ ಹೊಸದುರ್ಗ ತಾಲ್ಲೂಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ ಎಂದರು. ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಿದ್ದಾರೆ ಎಂದು ಹೇಳಿದರು.
ಜನಜಾಗೃತಿ ಸದಸ್ಯರಾದ ತುಂಬಿನಕೆರೆ ಬಸವರಾಜ್ ಮಾತನಾಡಿ, ಸರ್ಕಾರ ಮಾಡದ ಹಲವಾರು ಕೆಲಸಗಳನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಜನರ ಆಶೀರ್ವಾದದಿಂದ ಅವರ ಸಾಮಾಜಿಕ ಸೇವೆಗಳು ಇನ್ನಷ್ಟು ಬಲಿಷ್ಠವಾಗಲಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಯೋಜನಾಧಿಕಾರಿ ಶಿವಣ್ಣ.ಎಸ್, ರೈತ ಸಂಘದ ಅಧ್ಯಕ್ಷ ಬೋರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ, ಮೇಲ್ವಿಚಾರಕ ತುಕಾರಾಮ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.