January 30, 2026
1742908074254.jpg


ಚಿತ್ರದುರ್ಗ  ಮಾರ್ಚ್ 25:
ಮುಂಬರುವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಯಾವುದೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸುವ ಕುರಿತು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಬಾರಿ ಅಲ್ಪ ಪ್ರಮಾಣದಲ್ಲಿ ರಸಗೊಬ್ಬರ ಕೊರತೆ ಉಂಟಾಗಿತ್ತು. ಕೂಡಲೇ ಹೆಚ್ಚುವರಿ ರಸಗೊಬ್ಬರ ತರಿಸಿ ವಿತರಿಸಲಾಯಿತು. ಅಂತಹ ಪರಿಸ್ಥಿತಿ ಈ ಬಾರಿ ತಲೆದೋರಬಾರದು. ಅಗತ್ಯಕ್ಕಿಂತ ಶೇ.25 ರಷ್ಟು ಹೆಚ್ಚಿನ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ದಾಸ್ತಾನು ಇರಿಸಲು ಅಧಿಕಾರಿಗಳು ಹಾಗೂ ಮಾರಾಟಗಾರರು ಕ್ರಮ ಕೈಗೊಳ್ಳಬೇಕು. ಸಗಟು ಹಾಗೂ ಚಿಲ್ಲೆರೆ ವ್ಯಾಪಾರಿಗಳು ರಸಗೊಬ್ಬರ ಮಾರಾಟದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಲಭ್ಯವಿರುವ ದಾಸ್ತಾನು ವಿವರಗಳನ್ನು ಪ್ರತಿ ಅಂಗಡಿಗಳ ಮುಂದೆ ಸೂಚನಾ ಫಲಕಗಳಲ್ಲಿ ನಮೂದಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಒದಗಿಸುವುದು ಕೃಷಿ ಇಲಾಖೆ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಬಿತ್ತನೆ ಬೀಜ ಮಾದರಿ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಸೂಚನೆ:


ಕಾಯ್ದೆ ಅನುಸಾರ ಕೃಷಿ ಇಲಾಖೆ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಂದ ವಿಶ್ಲೇಷಣೆಗೆ ಒಳಪಡಿಸಬೇಕು. ಒಂದು ವೇಳೆ ವಿಶ್ಲೇಷಣೆ ವರದಿಯಲ್ಲಿ ಕಳಪೆ ಗುಣಮಟ್ಟ ಕಂಡುಬಂದರೆ ಕಾನೂನು ರಿತ್ಯ ಕ್ರಮ ಕೈಗೊಳ್ಳಬೇಕು. ಬಿತ್ತನೆ ಬೀಜ ಸರಬರಾಜು ಮಾಡುವ ಕಂಪನಿ, ಮಾರಾಟಗಾರರ ಸಂಪೂರ್ಣ ವಿವರಗಳನ್ನು ದಾಖಲೆ ಸಹಿತ ಸಂಗ್ರಹಿಸಿಡಬೇಕು. ರೈತರು ಬಿತ್ತನೆ ಬೀಜದ ಗುಣಮಟ್ಟದ ಕುರಿತು ದೂರು ಸಲ್ಲಿಸಿದರೆ, ಕೂಡಲೇ ಕ್ರಮಕೈಗೊಳ್ಳಬೇಕು. ಯಾವ ಕಾರಣಕ್ಕಾಗಿ, ಯಾವ ಹಂತದಲ್ಲಿ ಬೆಳವಣಿಗೆ, ಇಳುವರಿ ಕಡಿಮೆಯಾಗಿದೆ ಎಂಬುದನ್ನು ತಾಂತ್ರಿಕವಾಗಿ ಪತ್ತೆ ಹಚ್ಚಬೇಕು. ಪತ್ತೆಯಾದ ಅಂಶಗಳನ್ನು ರೈತರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಪಕೃತಿ ಸ್ನೇಹಿ ಕೃಷಿ ಪದ್ದತಿಗಳ ಕುರಿತು ಜಿಲ್ಲೆಯ ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಅಧಿಕಾರಿಗಳು ಕೈಗೊಳ್ಳಬೇಕು. ಜಿಲ್ಲೆಯ ನೈಸರ್ಗಿಕ ಹವಾಮಾನ, ಮಳೆ ಪ್ರಮಾಣ, ಭೂಮಿಯ ಫಲವತ್ತತೆ, ನೀರಿನ ಲಭ್ಯತೆ ಆಧರಿಸಿ ಕೃಷಿ ಬೆಳೆಗಳನ್ನು ಬೆಳೆಯಲು ತಿಳಿ ಹೇಳಬೇಕು. ಅತಿ ಕಡಿಮೆ ಮಳೆ ಬೀಳುವ, ಅಧಿಕ ಉಷ್ಣಾಂಶ ಇರುವ ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ರೈತರು ಅಡಿಕೆ ತೋಟ ಮಾಡಲು ಮುಂದಾಗುತ್ತಿದ್ದಾರೆ. ಇದು ಅವೈಜ್ಞಾನಿಕ ಹಾಗೂ ನಿಸರ್ಗಕ್ಕೆ ವಿರುದ್ದವಾದ ಕ್ರಿಯೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಅಂರ್ತಜಲ ಬಳಕೆ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ. ಆದರೆ ರೈತರು ಹೆಚ್ಚಿನ ನೀರು ಬೇಡುವ ಅಡಿಕೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ಇದನ್ನು ತಪ್ಪಿಸಿ ವೈಜ್ಞಾನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೇರೆಪಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲೆಯಲ್ಲಿ 23 ಖಾಸಗಿ ಹಾಗೂ 6 ಸಹಕಾರಿ ಸಂಘ ಸೇರಿ 29 ಸಗಟು ರಸಗೊಬ್ಬರ ಮಾರಾಟಗಾರರು, 405 ಖಾಸಗಿ , 64 ಸಹಕಾರಿ ಸಂಘ, 30 ಎಫ್.ಪಿ.ಓ ಸೇರಿ 499 ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಇದ್ದಾರೆ. ಜೂನ್, ಜುಲೈ ಮತ್ತು ಆಗಸ್ಟ್ ಮಾಹೆಗಳಲ್ಲಿ ಡಿ.ಎ.ಪಿ ಮತ್ತು ಕಾಂಪ್ಲೇಕ್ಸ್ ರಸಗೊಬ್ಬರ ಹಾಗೂ ಜುಲೈ, ಅಗಸ್ಟ್, ಸೆಪ್ಟಂಬರ್ ಮಾಹೆಗಳಲ್ಲಿ ಯುರಿಯಾ ರಸಗೊಬ್ಬರಕ್ಕೆ ಹೆಚ್ಚು ಬೇಡಿಕೆ ಉಂಟಾಗುತ್ತದೆ. ದಾವಣಗೆರೆ, ಶಿವಮೊಗ್ಗ ಮತ್ತು ಹಾವೇರಿ ರೈಲ್ವೇ ರೇಕ್ ಪಾಯಿಂಟ್‍ಗಳಿಂದ ಜಿಲ್ಲೆಯ ರಸಗೊಬ್ಬರಗಳನ್ನು ಸರಬರಾಜು ಸಂಸ್ಥೆಗಳು ಪಡೆದುಕೊಳ್ಳುತ್ತಿವೆ. ಸದ್ಯ ಜಿಲ್ಲೆಯಲ್ಲಿ ಮಾರ್ಚ್ 10ನೇ ತಾರೀಖಿನ ಅಂತ್ಯಕ್ಕೆ 5,615 ಮೆಟ್ರಿಕ್ ಟನ್ ಯೂರಿಯಾ, 2,385 ಮೆಟ್ರಿಕ್ ಟನ್ ಡಿ.ಎ.ಪಿ, 887 ಮೆಟ್ರಿಕ್ ಟನ್ ಎಂ.ಒ.ಪಿ, 7,981 ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ಹಾಗೂ 265 ಮೆಟ್ರಿಕ್ ಟನ್ ಎಸ್.ಎಸ್.ಪಿ ರಸಗೊಬ್ಬದ ದಾಸ್ತಾನು ಲಭ್ಯವಿದೆ ಎಂದು ಜಿಂಟಿ ಕೃಷಿ ನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.
ರಿಯಾಯಿತ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರದ ಅಕ್ರಮ ಸಾಗಾಣಿಕೆ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡುವುದನ್ನು ತಡೆಗಟ್ಟುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಶಿ, ಕೃಷಿ ಇಲಾಖೆ ಉಪನಿರ್ದೇಶಕರುಗಳಾದ ಶಿವಕುಮಾರ್, ಪ್ರಭಾಕರ್ ಸೇರಿದಂತೆ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading