
ಸಿರಿಗೆರೆ :
ಜಿಲ್ಲೆಯ ರೈತರ ಏಕೈಕ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರ ಅಣೆಕಟ್ಟೆಗೆ ಹೆಚ್ಚುವರಿಯಾಗಿ ನೀರು ಮರುಹಂಚಿಕೆಗೆ ಸಹಕರಿಸುವಂತೆ ವಾಣಿವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿಯ ಮುಖಂಡರುಗಳು ಸದ್ಧರ್ಮ ನ್ಯಾಯಫೀಠದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರಿಗೆ ಅಹವಾಲು ಸಲ್ಲಿಸಿದರು.
ಭದ್ರೆ ನೀರು ಹರಿಸಲು ಇರುವ ಕಾಲಮಿತಿಯನ್ನು ಸಡಿಲಿಸಿ, ಮಳೆಗಾಲದಲ್ಲಿಯೂ ಭದ್ರೆಯ ನೀರನ್ನು ವಾಣಿವಿಲಾಸ ಸಾಗರ ಜಲಾಶಯಕ್ಕೆ ಹರಿಸಿದರೆ ಜಲಾಶಯ ತುಂಬುತ್ತದೆ, ಶ್ರೀಗಳು ದೂರದೃಷ್ಟಿಯ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ಈ ಯೋಜನೆಯನ್ನು ಸಹಕಾರಗೊಳಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ಭದ್ರೆಯಿಂದ ಹರಿಸುವ 2 ಟಿಎಂಸಿ ಅಡಿ ನೀರು ಕುಡಿಯಲು ಬಳಕೆಯಾಗುತ್ತಿರುವುದರಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ರೈತರ ಕೃಷಿಗೆ ನೀರು ಇಲ್ಲದಂತಾಗಿದೆ. ಜಲಾಶಯದ ಅಚ್ಚುಕಟ್ಟು 12500 ಹೆಕ್ಟೇರ್ ಇದೆ, ನೀರಿನ ಲಭ್ಯತೆಯ ಆಶಾಭಾವನೆಯೊಂದಿಗೆ ಅಂದಾಜು 40,000 ಎಕರೆ ಭೂಮಿ ಕೃಷಿಗೆ ವಿಸ್ತರಣೆಗೊಂಡಿದೆ ಇದರಲ್ಲಿ ತುಮಕೂರು ಭಾಗದ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕುಗಳು ಸೇರಿವೆ ಎಂಬುದಾಗಿ ಹೇಳಿದರು.
ವಿವಿಸಾಗರ ಜಲಾಶಯಕ್ಕೆ ಎತ್ತಿನಹೊಳೆ ಯೋಜನೆ ಮೂಲಕವೂ ನೀರು ತರಬಹುದಾಗಿದ್ದು, ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಭಾಗದಿಂದ ಬೇಲೂರು ತಾಲೂಕಿನ ಬೆಟ್ಟದ ಆಲೂರಿನ ಕಾಗೆದಹಳ್ಳಕ್ಕೆ ಎತ್ತಿನಹೊಳೆ ಮೂಲಕ ನೀರು ಹರಿಸಿ ನೈಸರ್ಗಿಕವಾಗಿ ವೇದಾವತಿ ನದಿ ಕಣಿವೆಯಲ್ಲಿ ಹರಿಸಿದರೆ ವಾಣಿವಿಲಾಸ ಜಲಾಶಯ ತುಂಬಿಸಬಹುದಾಗಿದೆ ಎಂಬುದಾಗಿ ಪ್ರಸ್ತಾಪ ಸಲ್ಲಿಸಿದರು.
ಜಿಲ್ಲೆಯ ಏಕೈಕ ವಾಣಿ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸುವಂತೆ ಸರ್ಕಾರದ ಮೇಲೆ ಶ್ರೀಗಳು ಒತ್ತಡ ಹಾಕಬೇಕು ಐದು ದಶಕಗಳ ಹಿಂದೆ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ, ಕಾರ್ಖಾನೆ ಮೌಲ್ಯ ಪ್ರಸ್ತುತ ರೂ 270 ಕೋಟಿ ಆಗಿದೆ ಕಾರ್ಖಾನೆ ಆರಂಭವಾದರೆ ರೈತರು ಕಬ್ಬು ಬೆಳೆಯಲು ಮುಂದಾಗುತ್ತಾರೆ ಎಂಬುದಾಗಿ ಹೇಳಿದರು.
ರೈತರ ಮನವಿಯನ್ನು ಪುರಸ್ಕರಿಸಿದ ಶ್ರೀಗಳು ಇದೇ ಮಾರ್ಚ್ 3ರಂದು ರೈತರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ಹೆಚ್.ಆರ್.ತಿಮ್ಮಯ್ಯ, ಎಸ್.ಬಿ.ಶಿವಕುಮಾರ್, ಎಂ.ಟಿ.ಸುರೇಶ, ಆರ್.ಕೆ.ಗೌಡ, ನಾರಾಯಣ ಆಚಾರ್, ಗೀತಾಮ್ಮ, ಕಲಾವತಿ, ಎಚ್.ವಿ.ಗಿರೀಶ್, ಎಂ.ಜಿ.ರಂಗಧಾಮಯ್ಯ ಹಾಗೂ ಚಿಕ್ಕಬ್ಬಿಗೆರೆ ನಾಗರಾಜ್ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.