ಬೆಂಗಳೂರು:
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರಡಿ ಗೋಮಾಳ ಜಮೀನಿನ ವಿಸ್ತೀರ್ಣ ನಿಗದಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ. ದಿನಾಂಕ 24.02.2022ರಂದು ಕಂದಾಯ ಇಲಾಖೆ ಹೊರಡಿಸಿರುವ ಈ ಆದೇಶದ ಮೂಲಕ ಜಿಲ್ಲಾಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಲಾಗಿದೆ.



ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್‌ಗಳಂತೆ ಪ್ರತಿಯೊಂದು ಗ್ರಾಮದಲ್ಲೂ ಗೋಮಾಳ ಭೂಮಿಯನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕಾಯ್ದಿರಿಸಿರುವ ಗೋಮಾಳವನ್ನು ಮಾತ್ರ ಕಡಿಮೆ ಮಾಡಲು ಅವಕಾಶ ನೀಡಲಾಗಿದೆ.
ಮಾನ್ಯ ಉಚ್ಚ ನ್ಯಾಯಾಲಯದ 18.11.2006ರ ತೀರ್ಪಿನ ಹಿನ್ನೆಲೆಯಲ್ಲಿ, ಈಗಾಗಲೇ ಹೊರಡಿಸಿದ್ದ 05.01.2007ರ ಸುತ್ತೋಲೆಯನ್ನು ಸರ್ಕಾರ ಹಿಂಪಡೆದು, ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಗೋಮಾಳ ಭೂಮಿ ಕಡಿತಕ್ಕೆ ಮಿತಿ:
ಸ್ಮಶಾನ, ಸರ್ಕಾರಿ ಶಾಲೆ, ಆಸ್ಪತ್ರೆ, ಅಂಗನವಾಡಿ, ವಸತಿ ಶಾಲೆ, ಪಶುವೈದ್ಯಕೀಯ ಆಸ್ಪತ್ರೆ, ಕೆಪಿಟಿಸಿಎಲ್ ಉಪಕೇಂದ್ರ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮುಂತಾದ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಗೋಮಾಳ ಕಡಿತಕ್ಕೆ ಅವಕಾಶ. ಇವುಗಳನ್ನು ಹೊರತುಪಡಿಸಿ ಗೋಮಾಳ ವಿಸ್ತೀರ್ಣ ಕಡಿತಕ್ಕೆ ಪ್ರಾದೇಶಿಕ ಆಯುಕ್ತರ ಪೂರ್ವಾನುಮತಿ ಕಡ್ಡಾಯ.
ಅಕ್ರಮ ಸಾಗುವಳಿ ಸಕ್ರಮಕ್ಕೆ ನಿಯಂತ್ರಣ:
ನಿಯಮ 97(1)ರಡಿ ಅಗತ್ಯ ಗೋಮಾಳ ನಿಗದಿಪಡಿಸಿದ ನಂತರ ಮಾತ್ರ ಹೆಚ್ಚುವರಿ ಭೂಮಿಯನ್ನು ಅನಧಿಕೃತ ಸಾಗುವಳಿದಾರರಿಗೆ ಸಕ್ರಮಗೊಳಿಸಲು ಅವಕಾಶ ನೀಡಲಾಗಿದೆ. ಆದರೆ ಗೋಮಾಳ ಕೊರತೆಯಿರುವ ಗ್ರಾಮಗಳಲ್ಲಿ ನಮೂನೆ–57 ಅರ್ಜಿಗಳಿಗೆ ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಸುತ್ತೋಲೆಯ ಮೂಲಕ ಗೋಮಾಳ ಭೂಮಿಯ ದುರ್ಬಳಕೆ, ಅಕ್ರಮ ಮಂಜೂರಾತಿ ಹಾಗೂ ಸರ್ಕಾರಿ ಜಮೀನು ಲೂಟಿ ತಡೆಯಲು ಸರ್ಕಾರ ಮುಂದಾಗಿದೆ ಎಂಬುದೇ ಸಾರ್ವಜನಿಕ ವಲಯದ ಅಭಿಪ್ರಾಯ.
About The Author
Discover more from JANADHWANI NEWS
Subscribe to get the latest posts sent to your email.