ಚಳ್ಳಕೆರೆ:
ತಾಲೂಕು ಆಡಳಿತ ಹಾಗೂ ಸವಿತಾ ಸಮುದಾಯದ ಸಹಯೋಗದಲ್ಲಿ ಸವಿತಾ ಮಹರ್ಷಿಗಳ ದಿನಾಚರಣೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ ಹಾಗೂ ಕನ್ನಡ ಸಂಪಿಗೆ ಪತ್ರಿಕೆಯ ಸಂಪಾದಕ ತಿಪ್ಪೇಸ್ವಾಮಿ ಅವರು ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸವಿತಾ ಸಮಾಜವು ಹಿಂದೂ ಧರ್ಮದ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧಾರವಾಗಿಟ್ಟುಕೊಂಡಿರುವ ಚಿಕ್ಕದಾದರೂ ಮಹತ್ವದ ಸಮುದಾಯವಾಗಿದೆ. ಇತಿಹಾಸದ ವಿವಿಧ ಹಂತಗಳಲ್ಲಿ ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅಗತ್ಯ ಅವಕಾಶಗಳು ಲಭಿಸದೆ ಸಮಾಜ ಕುಂಠಿತಗೊಂಡಿರುವುದು ವಿಷಾದನೀಯ. ಆದರೂ ಸವಿತಾ ಸಮಾಜದವರು ತಮ್ಮ ಸಾಂಪ್ರದಾಯಿಕ ಕ್ಷೌರಿಕ ವೃತ್ತಿಯನ್ನು ಗೌರವದಿಂದ ನಿರ್ವಹಿಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಸವಿತಾ ಸಮಾಜದ ಸೇವೆ ಇಲ್ಲದೆ ಜನಸಾಮಾನ್ಯರ ದೈನಂದಿನ ಜೀವನದಲ್ಲಿ ಅನೇಕ ಅಡಚಣೆಗಳು ಎದುರಾಗುತ್ತಿತ್ತು ಎಂಬುದನ್ನು ಎಲ್ಲರೂ ಅರಿಯಬೇಕು. ಈ ಹಿನ್ನೆಲೆಯಲ್ಲಿ ಸವಿತಾ ಸಮಾಜವು ಎಲ್ಲ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯೊಂದಿಗೆ ಸಮಾಜದ ಸಮಗ್ರ ಪ್ರಗತಿಗಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇಂತಹ ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ, ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜವನ್ನು ಬಲಿಷ್ಠಗೊಳಿಸುವ ದಿಕ್ಕಿನಲ್ಲಿ ಮುನ್ನಡೆಯಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸವಿತಾ ಸಮುದಾಯದ ಅಧ್ಯಕ್ಷ ರಾಜು ಸೇರಿದಂತೆ ಹನುಮಂತರಾಯ, ನಾಗರಾಜ್, ಶಿವಣ್ಣ, ಸತ್ಯನಾರಾಯಣ್, ಚಂದ್ರಶೇಖರ್, ಮೃತ್ಯುಂಜಯ ಸೇರಿದಂತೆ ಅನೇಕ ಮುಖಂಡರು ಹಾಗೂ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
About The Author
Discover more from JANADHWANI NEWS
Subscribe to get the latest posts sent to your email.