December 14, 2025
FB_IMG_1735046530442.jpg



ಚಿತ್ರದುರ್ಗಡಿ.24:
ಇದೇ ಡಿ.29 ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪೊಬೆಷನರ್ಸ್ 384 ಹುದ್ದೆಗಳ ನೇಮಕಾತಿಗಾಗಿ ಪೂರ್ವಭಾವಿ ಮರು ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವ್ಯವಸ್ಥಿವಾಗಿ ಪರೀಕ್ಷಾ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಈ ಕುರಿತು ನಗರದ ಜಿ.ಪಂ. ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ನಿರ್ವಹಣೆ ಕಾರ್ಯ ಅತಿ ಸೂಕ್ಷ್ಮವಾದದ್ದು, ಅಭ್ಯರ್ಥಿಗಳ ಭವಿಷ್ಯ ಇದರಲ್ಲಿ ಅಡಗಿದೆ. ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆಯಿಂದ, ಪರೀಕ್ಷಾ ಕಾರ್ಯ ನಿರ್ವಹಿಸಬೇಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಬಂಡಲ್‍ಗಳನ್ನು ಕೊಂಡೊಯ್ಯಲು ನೇಮಿಸಿರುವ ಮಾರ್ಗಾಧಿಕಾರಿಗಳು ಸರಿಯಾದ ಸಮಯಕ್ಕೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು, ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಒಎಂಆರ್ ಬಂಡಲ್‍ಗಳನ್ನು ಅಂಚೆ ಮೂಲಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡಬೇಕು. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ ಬಳಿ ಇರುವ ಅಂಚೆ ಕಚೇರಿಗಳು ಒಎಂಆರ್ ಬಂಡಲ್‍ಗಳು ತಲುಪುವವರೆಗೂ ತಪ್ಪದೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ಜಾಮರ್ ಅಳವಡಿಕೆ:


ಮೊಬೈಲ್ ಬ್ಲೂಟೂತ್ ಮತ್ತು ಇತರೆ ಆಧುನಿಕ ಸಂವಹನ ಉಪಕರಣಗಳನ್ನು ಬಳಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ ಮಾಡಲಾಗುವುದು. ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಇದರೊಂದಿಗೆ ಫೇಸ್ ರೆಕಗ್ನೈಸೇಷನ್ ಹಾಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕವಾದ ಸಿಬ್ಬಂದಿ ಕೈಗೊಳ್ಳುವರು. ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಪಾಸಣೆಗೆ ಒಳಪಡಿಸಬೇಕು. ಇದಕ್ಕಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಫ್ರಿಸ್ಕಿಂಗ್ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

ಮರು ಪರೀಕ್ಷೆ ಪ್ರವೇಶ ಪತ್ರ :


384 ಗೆಜೆಟೆಡ್ ಪೊಬೆಷನರ್ಸ್ ಹುದ್ದೆಗಳ ನೇಮಕಾತಿಗೆ ಕಳೆದ ಆ.27 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಡಿ.29 ರಂದು ಮತ್ತೊಮ್ಮೆ ಮರು ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಕೆ.ಪಿ.ಎಸ್.ಸಿ ವೆಬ್ ಸೈಟ್ ಮೂಲಕ ಹೊಸದಾಗಿ ಮರು ಪರೀಕ್ಷೆ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಹೊಸ ಪ್ರವೇಶ ಪತ್ರದಲ್ಲಿ ನಮೂದಿಸಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕು. ತಪ್ಪದೇ ಕೆ.ಪಿ.ಎಸ್.ಸಿ ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ:


ಪರೀಕ್ಷಾ ಪಾವಿತ್ರ್ಯತೆ ಕಾಪಾಡುವ ದೃಷ್ಠಿಯಿಂದ ಡಿ.29 ರಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸೆಕ್ಷನ್ 114 ವಿಧಿಸಿ ನಿಷೇಧಾಜ್ಞೆ ಜಾರಿ ಮಾಡಿ, ಆದೇಶ ಹೊರಡಿಸಲಾಗಿದೆ. ಪರೀಕ್ಷಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಜೆರಾಕ್ಸ್, ಕಂಪ್ಯೂಟರ್ ಹಾಗೂ ಇಂಟರ್‍ನೆಟ್ ಸೆಂಟರ್‍ಗಳನ್ನು ತೆರೆಯುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಪಶ್ನೆ ಪತ್ರಿಕೆ ಹಾಗೂ ಒಎಂಆರ್ ಗಳನ್ನು ಕೊಂಡೊಯ್ಯಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯಿಂದ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ಸ್ಥಾಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.

25 ಪರೀಕ್ಷಾ ಕೇಂದ್ರ, 8170 ಅಭ್ಯರ್ಥಿಗಳು:


ಪರೀಕ್ಷೆಯು ಡಿ.29 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಪತ್ರಿಕೆ-01 ಹಾಗೂ ಮಧ್ಯಾಹ್ನ 02 ರಿಂದ ಸಂಜೆ 04 ರವರೆಗೆ ಪತ್ರಿಕೆ-02 ರ ಪರೀಕ್ಷೆ ನಡೆಯಲಿದೆ. ನಗರದಲ್ಲಿ 25 ಪರೀಕ್ಷಾ ಕೇಂದ್ರಗಳು ಇದ್ದು, ಒಟ್ಟು 8,170 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 155 ವಿಕಲಚೇತನ ಅಭ್ಯರ್ಥಿಗಳು ಇದ್ದಾರೆ. 4 ಅಂಧ ವಿದ್ಯಾರ್ಥಿಗಳಿಗೆ ಸ್ಕ್ರೈಬ್ ಸೌಲಭ್ಯ ಒದಗಿಸಲು ಕೆ.ಪಿ.ಎಸ್.ಸಿ ಇಂದ ನಿರ್ದೇಶನ ಬಂದಿದೆ. ವಿಕಲಚೇತನ ಅಭ್ಯರ್ಥಿಗಳ ಸಹಾಯಕ್ಕಾಗಿ ಪರೀಕ್ಷಾ ಕೇಂದ್ರದಲ್ಲಿ ವ್ಹೀಲ್ ಚೇರ್ ಜೊತೆಗೆ ರ್ಯಾಂಪ್ ಅಳವಡಿಸಲಾಗಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದಿಂದ ಪರೀಕ್ಷಾ ಮಾಹಿತಿ ಕೈಪಿಡಿ ಬಂದಿದೆ. ಇದರ ಅನುಸಾರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಸಭೆಯಲ್ಲಿ ಮಾಹಿತಿ ನೀಡಿದರು.
ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ಖಜಾನಾಧಿಕಾರಿ ರಮೇಶ್ ಅರೆ ಮಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading