ಚಿತ್ರದುರ್ಗ ಅ.24:
ಜಿಲ್ಲೆಯಲ್ಲಿನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಿಯಮಾನುಸಾರ ಅನುಮತಿ ಪಡೆದು ಬ್ಲಾಸ್ಟಿಂಗ್ ನಡೆಸಲಾಗುತ್ತಿದೆಯೇ, ವನ್ಯ ಜೀವಿಗಳ ಮೇಲೆ ಗಣಿಗಾರಿಕೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆ.ಎಸ್.ಆರ್.ಎಸ್.ಎ.ಸಿ) ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಗಣಿಗಾರಿಕೆಗೆ ಸಂಬಂಧಿಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ, ಜಿಲ್ಲಾ ಮರಳು ಸಮಿತಿ ಹಾಗೂ ಜಲ್ಲಿ ಕಲ್ಲು ಪುಡಿ ಮಾಡುವ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಲು ಗಣಿಗಾರಿಕೆಯಿಂದ ವನ್ಯಜೀವಿಗಳಿಗೆ ಹಾನಿಯಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಗಳು ಬಿತ್ತರವಾಗುತ್ತಿವೆ. ಈ ಹಿನ್ನಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅನುಮತಿ ಪಡೆದು ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆಯೇ, ಯಾವ ರೀತಿಯ ಸ್ಪೋಟಕಗಳನ್ನು ಬಳಿಸಿ ಕಲ್ಲು ಬಂಡೆಗಳನ್ನು ಒಡೆಯಲಾಗುತ್ತಿದೆ. ಅನುಮತಿ ನೀಡಿದ ಪ್ರದೇಶದಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆಯೇ ಎಂಬುದನ್ನು ಸಮಿತಿ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕು. ನಿಯಮಗಳ ಉಲ್ಲಂಘನೆಯಾಗಿದ್ದರೆ, ತಕ್ಷಣ ನೋಟಿಸ್ ನೀಡಿ, ಗಣಿಗಾರಿಕೆಯನ್ನು ತಡೆದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.
ರಾಜಧನ ಪಡೆದು ಪರ್ಮಿಟ್ ನೀಡಲು ಸೂಚನೆ: ಅಮೃತ್ ಸರೋವರ ಯೋಜನೆ ಹೊರತು ಪಡಿಸಿ, ಉಳಿದೆಲ್ಲಾ ಸರ್ಕಾರಿ ಕಾಮಗಾರಿಗಳಿಗೆ ಮರಳು, ಕಲ್ಲು ಸೇರಿದಂತೆ ಇತರೆ ವಸ್ತುಗಳನ್ನು ಗಣಿಗಾರಿಕೆ ಮೂಲಕ ಪಡೆಲು ರಾಜಧನ ನೀಡುವುದು ಕಡ್ಡಾಯವಾಗಿದೆ. ನರೇಗಾ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಲೋಕೋಪಯೋಗಿ, ಕೆ.ಎಂ.ಇ.ಆರ್.ಸಿ, ಜಿಲ್ಲಾ ಖನಿಜ ಪ್ರತಿಷ್ಠಾನ ಸೇರಿಂದತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ರಾಜಧನ ಪಡೆದ ನಂತರವೇ ಪರ್ಮಿಟ್ ನೀಡಬೇಕು. ನಿಯಮಬಾಹಿರವಾಗಿ ಪರ್ಮಿಟ್ ಪಡೆಯದೆ ಗಣಿಗಾರಿಕೆ ನಡೆಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ಗಣಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಯೋಜನೆ ರೂಪಿಸಿ: ಗಣಿ ಬಾದಿತ ಪ್ರದೇಶದ 5 ಕಿ.ಮೀ. ವ್ಯಾಪ್ತಿಯಲ್ಲಿ ಸಮಗ್ರವಾಗಿ ರಸ್ತೆ ಅಭಿವೃದ್ಧಿ ಪಡಿಸಲು ಕೆ.ಎಂ.ಇ.ಆರ್.ಸಿ ಅಡಿ ಯೋಜನೆ ರೂಪಿಸಬೇಕು. ಯೋಜನೆಯಡಿ ಗಣಿ ಪ್ರದೇಶದ ಸಂಪರ್ಕಿಸುವ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು. ಜಿಲ್ಲೆಯಲ್ಲಿ ಪ್ರತ್ಯೇಕ ಗಣಿ ಕಾರಿಡಾರ್ ನಿರ್ಮಿಸಲು ಈಗಾಗಲೇ ಅನೋದನೆ ನೀಡಲಾಗಿದೆ. ಯೋಜನೆಗೆ ಅಗತ್ಯ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ರಸ್ತೆ ನಿರ್ಮಾಣವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಪ್ರತ್ಯೇಕ ಕಾರಿಡಾರ್ ನಿರ್ಮಾಣವಾದರೆ ಮೈನಿಂಗ್ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇದರಿಂದ ಹಳ್ಳಿಗಳಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸದ್ಯ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಮೈನಿಂಗ್ ಲಾರಿಗಳು ನಿಯಮಾನುಸಾರ ಅದಿರಿನ ಮೇಲೆ ತಾಡಪಲ್ ಹೊದ್ದಿಸಿ ಸಂಚರಿಸುತ್ತಿವೆ ಎಂಬುದನ್ನು ಆರ್.ಟಿ.ಓ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಮೈನಿಂಗ್ ಪ್ರದೇಶದಲ್ಲಿಯೂ ಸಹ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದಿಯೇ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ನಿಯಮ ಉಲಂಘನೆಯಾಗಿದ್ದರೆ ಅಂತಹ ಲಾರಿಗಳನ್ನು ಜಪ್ತು ಮಾಡಬೇಕು. ನಿಯಮ ಪಾಲಿಸದ ಗಣಿಗಾರಿಕೆಗಳ ಪರ್ಮಿಂಟ್ ರದ್ದು ಪಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರು ಬಂಡಾರು, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗನಾಥ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯ್ಕ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿಯರ್ ನಾಗರಾಜ , ಪರಿಸರ ಅಧಿಕಾರಿ ಆಸಿಫ್ ಖಾನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.