March 17, 2026
1761302480137.jpg

ಹಿರಿಯೂರು:
ತಾಲ್ಲೂಕಿನಲ್ಲಿ ಸರ್ಕಾರಿ, ಗೋಮಾಳ, ಹುಲ್ಲುಬನ್ನಿ, ಅರಣ್ಯ ಇನ್ನಿತರೆ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಭೂಮಿ ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ ಇದೇ ಅಕ್ಟೋಬರ್ 27ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಬಗರ್ ಹುಕುಂ ಸಾಗುವಳಿದಾರರ ಮೆರವಣಿಗೆ ನಡೆಯಲಿದೆ ಎಂಬುದಾಗಿ ಭೂಮಿ ಮತ್ತು ವಸತಿಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ, ಹೇಳಿದರು.
ನಗರದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿರಿಯೂರು ನಗರದ ಸರ್ಕಾರಿ ಆಸ್ಪತ್ರೆಯ ಬಳಿಯ ಅಂಬೇಡ್ಕರ್ ಪ್ರತಿಮೆಯಿಂದ ತಾಲ್ಲೂಕು ತಹಶೀಲ್ದಾರ್ ಕಛೇರಿಯವರೆಗೆ ಮೆರವಣಿಗೆ ಹೊರಡಲಿದೆ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿದಾರರು ಫಾರಂ ನಂ. 50, 53 ಹಾಗೂ 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಹಲವು ದಶಕಗಳಿಂದಲೂ ಭೂಮಿಯ ಮಂಜೂರಾತಿಗಾಗಿ ಕಾಯುತ್ತಿದ್ದಾರೆ.
ಆದರೆ, ಸರ್ಕಾರಗಳು ಬಡವರ ಭೂಮಿ ಹಕ್ಕಿನ ಸಮಸ್ಯೆಯನ್ನು ಆದ್ಯತೆ ಮಾಡಿಕೊಳ್ಳದೆ ಕಂಪನಿ, ಬಂಡವಾಳ ಶಾಹಿಗಳ ಪರವಾಗಿ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿಮಂಜೂರಾತಿ ನೀಡುತ್ತಿಲ್ಲ ಮತ್ತು ಭೂಮಿ ಮಂಜೂರಾತಿಗಾಗಿ ಕಾನೂನು ನೆಪ ಹೇಳಿ ನಿರಾಕರಿಸಲಾಗುತ್ತಿದೆ ಎಂಬುದಾಗಿ ಅವರು ಆರೋಪಿಸಿದರು.
ಸರ್ಕಾರಗಳು ಕಂಪನಿಗಳಿಗೆ, ಬಂಡವಾಳಶಾಹಿಗಳಿಗೆ ಭೂಮಿನೀಡುವುದಕ್ಕೆ ಯಾವುದೇ ಕಾನೂನು ಪಾಲಿಸುತ್ತಿಲ್ಲ. ಬಡವರಿಗೆ ಮಾತ್ರ ಕಾನೂನು ತೊಡಕು ಹೇಳಿ ಭೂಮಿನೀಡುತ್ತಿಲ್ಲ. ಬಡವರಿಗೊಂದು ಶ್ರೀಮಂತರಿಗೊಂದು ಕಾನೂನು ಮಾಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ತೊಡಕಾಗಿರುವ ಕಂದಾಯ ನಿಯಮಗಳನ್ನು ಸಡಿಲಿಸಿ ಬಡವರಿಗೆ ಭೂಮಿ ಮಂಜೂರಾತಿ ನೀಡಬೇಕು.
ಅಲ್ಲದೆ, ಸರ್ಕಾರಗಳು-ಅಧಿಕಾರಿಗಳು ಬಡವರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಬಿಟ್ಟು ಕೂಡಲೇ ತಮ್ಮ ಧೋರಣೆಯನ್ನು ಬದಲಾಯಿಸಿಕೊಂಡು ಫಾರಂ ನಂ.50, 53 ಹಾಗೂ 57ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಭೂಮಿ ಮಂಜೂರಾತಿ ನೀಡಲು ಕ್ರಮ ತೆಗೆದುಕೊಳ್ಳಬೇಕು, ಹಲವು ದಶಕಗಳ ಕಾಲದಿಂದಲೂ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ, ಭೂರಹಿತರಿಗೆ ಭೂಮಿ ಮಂಜೂರಾತಿ ನೀಡಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ರಾಜ್ಯದ ಬಗರ್ ಹುಕುಂ ಸಮಸ್ಯೆಯನ್ನು ಬಗೆ ಹರಿಸುವ ಭಾಗವಾಗಿ “ಒನ್ ಟೈಮ್ ಸೆಟಲ್ ಮೆಂಟ್” ಜಾರಿ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಅರ್ಜಿಗಳನ್ನು ತಿರಸ್ಕರಿಸಬಾರದು, ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ನಿವೇಶನ ರಹಿತರಿಗೆ ನಿವೇಶನ, ಮನೆ ಇಲ್ಲದವರಿಗೆ ಮನೆ ನಿರ್ಮಿಸಬೇಕು ಎಂಬುದಾಗಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೂಮಿ ಮತ್ತು ವಸತಿಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಹೊರಕೇರಪ್ಪ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ರಾಜಪ್ಪ, ಆಂಜನಪ್ಪ ಮತ್ತು ಹಿರಿಯೂರು ತಾಲ್ಲೂಕು ಸಮಿತಿಯ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಮಹೇಶ್, ಎಚ್.ನರಸಿಂಹಮೂರ್ತಿ, ಕಾಂತರಾಜ್, ಕರಿಯಪ್ಪ, ರಾಮಾನಾಯ್ಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading