ಹಿರಿಯೂರು:
ರಕ್ತದಾನ ಅತ್ಯಂತ ಶ್ರೇಷ್ಠ ದಾನ. ರಕ್ತದಾನ ಮಾಡುವುದರಿಂದ ಹೃದಯಘಾತ ತಡೆಯಬಹುದು. ರಕ್ತದಾನದಿಂದ ರಕ್ತದಲ್ಲಿರುವ ಕೊಬ್ಬಿನಂಶ ಕಡಿಮೆ ಮಾಡಲು ಸಹಾಯಕವಾಗುತ್ತದೆ. ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಜೀವ ಉಳಿಯುವ ಜೊತೆಗೆ, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದಾಗಿ ವೈದ್ಯಾಧಿಕಾರಿಗಳಾದ ಡಾ.ಕೆ. ನಾಗರಾಜ್ ಹೇಳಿದರು.
ನಗರದ ದಿಂಡಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 18ವರ್ಷದಿಂದ 60 ವರ್ಷದೊಳಗಿನ ಎಲ್ಲಾ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನಿಯ ತೂಕ 45 ಕೆ.ಜಿ. ಗಿಂತ ಹೆಚ್ಚಿರಬೇಕು, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಇನ್ನೊಬ್ಬರ ಜೀವ ಉಳಿಸುವ ಪ್ರಯತ್ನ ಮಾಡಬಹುದಾಗಿದೆ ಎಂದರಲ್ಲದೆ,
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಸರಿಯಾಗಿರುವ ವ್ಯಕ್ತಿ ರಕ್ತದಾನ ಮಾಡಬಹುದಾಗಿದ್ದು, ಸತ್ತವರನ್ನು ಬದುಕಿಸುವ ಶಕ್ತಿ ನಮಗಿಲ್ಲ. ಸಾಯುತ್ತಿರುವವರನ್ನು ಬದುಕಿಸುವ ಶಕ್ತಿ ದೇವರು ನಮಗೆ ಕರುಣಿಸಿದ್ದಾನೆ. ಆದ್ದರಿಂದ ರಕ್ತದಾನ ಮಾಡುವ ಮೂಲಕ ಪ್ರಾಣ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬುದಾಗಿ ಅವರು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮಂತಪ್ಪ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿದವರಿಗೆ ಸರ್ಟಿಫಿಕೇಟ್ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾಕಾರ್ಯಕರ್ತರುಗಳು ಹಾಗೂ ಜಿಲ್ಲಾ ಆಸ್ಪತ್ರೆ ಸಿಬ್ಬಂದಿ (ರಕ್ತಶೇಖರಣಾ ಘಟಕ) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.