January 29, 2026
1745491172480.jpg



ಚಿತ್ರದುರ್ಗಏ.24:
ನಟಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಅವರ ಚಲನಚಿತ್ರಗಳು ನಮ್ಮ ನಿತ್ಯದ ಜೀವನಕ್ಕೆ ಅನುಕೂಲ ಹಾಗೂ ಅಳವಡಿಸಿಕೊಳ್ಳುವ ರೀತಿಯಲ್ಲಿ ಉತ್ತಮ ಸಂದೇಶ ನೀಡಿದ್ದಾರೆ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ನಟಸಾರ್ವಭೌಮ ಡಾ.ರಾಜ್‍ಕುಮಾರ್‍ರವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ.ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಒಂದು ಕುಗ್ರಾಮದ ಮುತ್ತುರಾಜ್ ಅವರು ಚಲನಚಿತ್ರ ಇತಿಹಾಸದಲ್ಲಿಯೇ ಮೈಲಿಗಲ್ಲಾಗಿ, ಡಾ.ರಾಜ್‍ಕುಮಾರ್ ಆಗಿ ಜವಾಬ್ದಾರಿ ನಿಭಾಯಿಸುವುದರ ಜತೆಗೆ ನಮ್ಮೆಲ್ಲರಿಗೂ ಉತ್ತಮ ಸಂದೇಶ ನೀಡುವ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಅರ್ಪಣೆ ಮಾಡಿದ್ದಾರೆ ಎಂದು ತಿಳಿಸಿದ ಅವರು, 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ರಾಜ್ ಕುಮಾರ್ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶ ಮಾಡಿದರು ಎಂದರು.
ಡಾ.ರಾಜ್ ಕುಮಾರ್ ಅವರು ತಮ್ಮ ಇಚ್ಚೆಯಂತೆ ಮರಣದ ನಂತರ ತಮ್ಮ ನೇತ್ರಗಳನ್ನು ದಾನ ಮಾಡಿದ್ದಾರೆ. ಇಂದಿಗೂ ಡಾ.ರಾಜ್ ಕುಮಾರ್ ಅವರ ಹೆಸರಿನಲ್ಲಿ ನೇತ್ರದಾನ ಶಿಬಿರಗಳು ನಡೆಯುತ್ತಿವೆ. ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಸ್ಥಾಪನೆ, ಅನಾಥಾಶ್ರಮಗಳಿಗೂ ನೆರವು ನೀಡಿದ್ದಾರೆ. ಡಾ.ರಾಜ್ ಕುಮಾರ್ ಮರಣದ ನಂತರ ಅವರ ಕುಟುಂಬವು ಸಹ ಡಾ.ರಾಜ್ ರೂಪಿಸಿರುವ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಸರಳತೆ ಮತ್ತು ಜೀವನ ಮೌಲ್ಯದ ತತ್ವಗಳ ಪಾಲನೆ ಮಾಡುವ ಮೂಲಕ ಬದುಕಿರುವರೆಗೂ ಸದಾ ಲವಲವಿಕೆಯಿಂದ ಇದ್ದರು. ಡಾ.ರಾಜ್ ಕುಮಾರ್ ನಟನೆಯ ಪ್ರತಿಯೊಂದು ಚಿತ್ರದಲ್ಲಿಯೂ ಒಂದು ತತ್ವ ಹಾಗೂ ಸಂದೇಶವಿದೆ. ಮನೆಯ ಕುಟುಂಬದ ಸದಸ್ಯರೆಲ್ಲರೂ ಸೇರಿ ಒಟ್ಟಿಗೆ ಕುಳಿತು ನೋಡುವ ಚಲನಚಿತ್ರಗಳಾಗಿವೆ ಎಂದರು.
ಡಾ.ರಾಜ್ ಕುಮಾರ್ ಅವರು ಕನ್ನಡ ಸಾಹಿತ್ಯ ಹಾಗೂ ಸಂಗೀತಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಡಾ.ರಾಜ್ ಅವರ ಮರಣದ ನಂತರವೂ ಸಹ ಅವರ ಕಣ್ಣುಗಳು ಇನ್ನೊಬ್ಬರ ಬಾಳಿಗೆ ಬೆಳಕಾಗಿವೆ. ಅವರ ಸಂದೇಶದಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.
ಸಾಹಿತಿ ಹುರಳಿ ಎಂ ಬಸವರಾಜ್ ಉಪನ್ಯಾಸ ನೀಡಿ, ಡಾ.ರಾಜ್ ಕುಮಾರ್ ಅವರು ಸರಳ, ಸಜ್ಜನಿಕೆ, ವಿನಯ ವಂತಿಕೆಯ ಆದರ್ಶ ವ್ಯಕ್ತಿಯಾಗಿದ್ದಾರೆ. ಡಾ.ರಾಜ್ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಸಿನಿಮಾಗಳಾಗಿವೆ. ಬೇಡರ ಕಣ್ಣಪ್ಪ ಎಂಬ ಮೊದಲನೇ ಸಿನಿಮಾ, ನಂತರ 100 ನೇ ಸಿನಿಮಾ ಭಾಗ್ಯದ ಬಾಗಿಲು, 150ನೇ ಸಿನಿಮಾ ಗಂಧದ ಗುಡಿ ಹಾಗೂ 200ನೇ ಸಿನಿಮಾವಾಗಿ ದೇವತಾ ಮನುಷ್ಯ, ಅವರ ಕೊನೆಯ ಕ್ಷಣದಲ್ಲಿ ನಟಿಸಿದ ಶಬ್ಧವೇದಿ ಸಿನಿಮಾ ಅಭೂತಪೂರ್ವವಾದ ಯಶಸ್ವಿಗಳಿಸಿತು. ರಾಜ್ ಕುಮಾರ್ ನಟಿಸಿದ ಕಸ್ತೂರಿ ನಿವಾಸ, ಸಾಕ್ಷಾತ್ಕಾರ, ಹೊಸ ಬೆಳಕು, ಬಬ್ರುವಾಹನ, ಹಾಲುಜೇನು, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ಮಂತ್ರಾಲಯ ಮಹಾತ್ಮೆ, ಶ್ರೀನಿವಾಸ ಕಲ್ಯಾಣ ಸೇರಿದಂತೆ ನೂರಾರು ಚಲನಚಿತ್ರಗಳಲ್ಲಿ ಅಭಿನಯಿಸುತ್ತಾ ದಕ್ಷಣ ಭಾರತದ ಸಿನಿಮಾ ಜಗತ್ತಿನಲ್ಲಿ ತಾವು ನಟಿಸಿದ ಎಲ್ಲ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ ಏಕೈಕ ವ್ಯಕ್ತಿ ವರನಟ ಡಾ.ರಾಜ್ ಕುಮಾರ್ ಎಂದು ಹೇಳಿದರು.
ಡಾ.ರಾಜ್ ನಟಿಸಿದ ಎಲ್ಲ ಪಾತ್ರಗಳಿಗೂ ಸಹ ಜೀವಕಳೆ ತಂದುಕೊಡುತ್ತಾರೆ. ಹಳ್ಳಿಹೈದನಾಗಿ, ಕುರಿ ಕಾಯುವವನಾಗಿ, ರಾಜನಾಗಿ, ಸಾಮ್ರಾಜ್ಯದ ಒಡೆಯನಾಗಿ, ಮನೆಯ ಯಜಮಾನನಾಗಿ ನಟಿಸಿದ ಎಲ್ಲ ಚಿತ್ರಗಳಲ್ಲಿಯೂ ಸಹ ಅಭೂತಪೂರ್ವ ಪ್ರತಿಮೆ ಹೊರಹೊಮ್ಮುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ತೆರೆಯ ಮೇಲಾದರೂ ಸರಿ ದುಶ್ಚಟವನ್ನು ಬಿಂಬಿಸುವ ಯಾವುದೇ ಪಾತ್ರವನ್ನು ಡಾ. ರಾಜ್‍ಕುಮಾರ್ ಅವರು ಅಭಿನಯಿಸಲಿಲ್ಲ. ಡಾ.ರಾಜ್ ಅವರಿಗೂ ಚಿತ್ರದುರ್ಗಕ್ಕೂ ಬಹಳ ನಂಟಿದೆ. ಡಾ.ರಾಜ್ ಅವರಿಗೆ “ಕುಮಾರ ರಾಜ್” ಎಂದು ಚಿತ್ರದುರ್ಗದವರು ಬಿರುದು ನೀಡಿದ್ದಾರೆ ಎಂದು ಸ್ಮರಿಸಿದ ಅವರು, ಮುಂಬರುವ ದಿನಗಳಲ್ಲಿ ಡಾ.ರಾಜ್ ಅವರ ಜನ್ಮದಿನದ ಶತಮಾನೋತ್ಸವದ ಅಂಗವಾಗಿ ಡಾ.ರಾಜ್ ಹೆಸರಿನಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯ ಮಾಡುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಮನವಿ ಮಾಡಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ರಾಜ್ ಕುಮಾರ್ ಅವರು ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕ ನಟರಾಗಿ ವೈವಿದ್ಯಮಯವಾದ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಯಾವುದೇ ಪಾತ್ರವಾದರೂ ಸಹ ಅದರಲ್ಲಿ ತಲ್ಲೀನರಾಗಿ ನಟಿಸುತ್ತಿದ್ದ ರೀತಿ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಡಾ.ರಾಜ್ ಕುಮಾರ್ ಅವರಿಗೆ ನಟಸಾರ್ವಭೌಮ, ರಸಿಕರ ರಾಜ, ವರನಟ ಸೇರಿದಂತೆ ಅನೇಕ ಬಿರುದುಗಳಿವೆ. ಬಹುತೇಕ ಎಲ್ಲರೂ ಡಾ.ರಾಜ್ ಅವರನ್ನು ಅಣ್ಣಾವ್ರು ಎಂದು ಕರೆಯುತ್ತಾರೆ ಎಂದು ತಿಳಿಸಿದ ಅವರು, ನಟನೆ ಹಾಗೂ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಕಲಾವಿದ ಡಾ.ರಾಜ್ ಕುಮಾರ್ ಎಂದು ತಿಳಿಸಿದರು.
ರಾಜ್ ಕುಮಾರ್ ಅವರು ತನ್ನ ಪಾತ್ರಗಳ ಆಯ್ಕೆಯಲ್ಲಿ ಬಹಳ ಜಾಗೃತೆ ವಹಿಸುತ್ತಿದ್ದರು. ಅವರಿಗಿದ್ದ ಅಪಾರ ಅಭಿಮಾನಿಗಳಿಗೆ ಅವರ ಪಾತ್ರಗಳು ಸಮಾಜ ಕಂಟಕ ಸಂದೇಶ ಕೊಡಬಾರದು ಎಂಬ ಕಾಳಜಿ ಅವರಿಗಿತ್ತು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್. ನಾಡು-ನುಡಿಯ ಹೋರಾಟದ ಜತೆಗೆ ಚಲನಚಿತ್ರಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕೆಡಿಪಿ ಸದಸ್ಯ ನಾಗರಾಜ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ರಂಗಕರ್ಮಿ ಕೆಪಿಎಂ ಗಣೇಶಯ್ಯ ಸೇರಿದಂತೆ ಡಾ.ರಾಜ್ ಕುಮಾರ್ ಅಭಿಮಾನಿಗಳು ಇದ್ದರು. ಚಿತ್ರದುರ್ಗದ ಎಂ.ಕೆ.ಹರೀಶ್ ಮತ್ತು ಸಂಗಡಿಗರು ಡಾ. ರಾಜ್‍ಕುಮಾರ್ ಅವರ ಗೀತಗಾಯನ ನಡೆಸಿಕೊಟ್ಟರು.

============

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading