ಚಿತ್ರದುರ್ಗಮಾರ್ಚ್24:
ಕ್ಷಯ ರೋಗವು ಮನುಕುಲಕ್ಕೆ ತಿಳಿದ ಅತ್ಯಂತ ಹಳೆಯ ಸಾಂಕ್ರಾಮಿಕ ರೋಗವಾಗಿದ್ದು, ಜಾಗೃತಿ ಮತ್ತು ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆ. ಟಿಬಿ ಮುಕ್ತ ಭಾರತದತ್ತ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ.ಪಿ. ರೇಣುಪ್ರಸಾದ್ ಹೇಳಿದರು.
ನಗರದ ಎಂ.ಕೆ. ಪ್ಯಾಲೇಸ್‍ನಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಹಜ್ ಕಮಿಟಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1882ರಲ್ಲಿ ರಾಬರ್ಟ್ ಕೋಚ್ ಕ್ಷಯರೋಗದ ಬ್ಯಾಕ್ಟೀರಿಯಾವನ್ನು ಕಂಡುಹಿಡಿದ ಪ್ರಯುಕ್ತ ಪ್ರತಿ ವರ್ಷ ಮಾರ್ಚ್ 24ರಂದು ಈ ದಿನವನ್ನು ಆಚರಿಸಲಾಗುತ್ತದೆ. ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತನ್ನು ಒಂದುಗೂಡಿಸಲು ಮತ್ತು ನವೀನ ಆವಿಷ್ಕಾರಗಳನ್ನು ಗೌರವಿಸಲು ಈ ದಿನಾಚರಣೆ ಪೂರಕವಾಗಿದೆ ಎಂದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಕಫ, ಕಫದಲ್ಲಿ ರಕ್ತ ಬರುವುದು, ಸಂಜೆ ವೇಳೆ ಜ್ವರ, ಮೈ ಬೆವರುವುದು, ತೂಕ ಕಡಿಮೆಯಾಗುವುದು ಮತ್ತು ಹಸಿವಾಗದೆ ಇರುವುದು ಇಂತಹ ಲಕ್ಷಣಗಳಿರುವವರು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ದೃಢಪಟ್ಟಲ್ಲಿ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ಲಭ್ಯವಿದ್ದು, ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಮುಂಜಾಗ್ರತಾ ಕ್ರಮ ಪಾಲಿಸುವ ಮೂಲಕ ರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಡಿ.ಎಂ. ಅಭಿನವ ಮಾತನಾಡಿ, 14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ಬರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ ಉಚಿತವಾಗಿ ಎಚ್.ಪಿ.ವಿ ಲಸಿಕೆ ನೀಡಲಾಗುತ್ತಿದೆ. ಅರ್ಹರು ಆತಂಕವಿಲ್ಲದೆ ಇದರ ಸದುಪಯೋಗ ಪಡೆಯಬೇಕು ಎಂದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ. ಗಿರೀಶ್ ಮಾತನಾಡಿ, ಜಗತ್ತಿನಲ್ಲಿ ಈಗಾಗಲೇ 50 ಕೋಟಿ ಜನರು ಈ ಲಸಿಕೆ ಪಡೆದಿದ್ದು, ಇದು ಅತ್ಯಂತ ಸುರಕ್ಷಿತವಾಗಿದೆ. ಯಾವುದೇ ಊಹಾಫೋಹಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳಿಗೆ ಪೋಲಿಯೋ, ಇನ್ಫ್ಲೂಯೆಂಜಾ ಹಾಗೂ ಮೆನಂಜೈಟಿಸ್ ಲಸಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಮೌಲಾನಾ ಗುರುಗಳಾದ ಮುಜಾಪರ್ ಶಕೀಲ್, ಬಶೀರ್ ಅಹ್ಮದ್, ಹಜ್ ಕಮಿಟಿ ಅಧ್ಯಕ್ಷರಾದ ದಾದಾಪೀರ್, ಅಕ್ಬರ್, ಆದಿಲ್, ಮುಜಾಮ್ ಮಿಲ್, ಸಾಧಿಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯಕ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ, ವೈದ್ಯಾಧಿಕಾರಿಗಳಾದ ಡಾ. ಸೈಯದ್ ಬಿಲಾಲ್ ಸೇರಿದಂತೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.