
ಚಿತ್ರದುರ್ಗ :
ಮಧ್ಯಕರ್ನಾಟಕದ ಬಯಲುಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುದಾನದ ಕೊರತೆ ಕಾರಣಕ್ಕೆ ಆಮೆಗತಿಯಲ್ಲಿ ಸಾಗಿದೆ. ಯೋಜನೆ ಆರಂಭಿಸಿದಾಗ ಇದ್ದ ಉತ್ಸಾಹ ಹಾಗೆಯೇ ಇದ್ದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಂಡು ಬಯಲುಸೀಮೆ ರೈತರ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಇಮ್ಮಡಿಯಾಗುತ್ತಿತ್ತು ಎಂಬುದಾಗಿ ನೀರಾವರಿ ಹೋರಾಟ ಅನುಷ್ಠಾನ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5000 ಕೋಟಿ ರೂಪಾಯಿ ಮೀಸಲು ಇಡಬೇಕೆಂದು ನೀರಾವರಿ ಹೋರಾಟ ಅನುಷ್ಟಾನ ಸಮಿತಿ ಹಾಗೂ ರೈತಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಶಾಸಕರುಗಳಾದ ಟಿ.ರಘುಮೂರ್ತಿ ಹಾಗೂ ವೀರೇಂದ್ರ ಪಪ್ಪಿ ಅವರ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ನಮ್ಮನಾಳುವ ರಾಜ್ಯ ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ಸಾಧ್ಯವಾಗದೇ ಹೋಗಿದೆ. ಯೋಜನೆ ಅನುಷ್ಠಾನ ವಿಳಂಬವಾದಷ್ಟೂ ವೆಚ್ಚ ದುಪ್ಪಟ್ಟು ಆಗುತ್ತಾ ಹೋಗುತ್ತದೆ. ಆರು ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಅಂತಿಮವಾಗಿ 21 ಸಾವಿರ ಕೋಟಿಗೆ ಬಂದು ನಿಂತಿದೆ ಎಂದರಲ್ಲದೆ,
ಕಳೆದ 2018 ರ ದರಪಟ್ಟಿ ಅನುಸಾರ ಭದ್ರಾ ಮೇಲ್ದಂಡೆ ಕಾಮಗಾರಿಯ 21 ಸಾವಿರ ಕೋಟಿ ರೂ ವೆಚ್ಚಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ದರಪಟ್ಟಿ ಪರಿಷ್ಕರಣೆ ಹಂತದಲ್ಲಿದ್ದು ಪರಿಷ್ಕೃತವಾದಲ್ಲಿ ಯೋಜನಾ ವೆಚ್ಚಕ್ಕೆ ಮತ್ತೆ ಸಾವಿರಾರು ಕೋಟಿ ರೂ ಸೇರ್ಪಡೆಯಾಗುತ್ತದೆ. ಸಾಲದೆಂಬಂತೆ ಅರ್ಧಕ್ಕೆ ನಿಂತ ಕಾಮಗಾರಿಗಳು ದೀರ್ಘಕಾಲದವರೆಗೆ ಗುಣಮಟ್ಟ ಕಾಯ್ದುಕೊಳ್ಳುತ್ತವೆ ಎಂಬ ಗ್ಯಾರಂಟಿಗಳು ಇಲ್ಲವಾಗಿದೆ. ಬಿಸಿಲಿಗೆ ಬಾಯ್ದೆರೆದಿರುವ ಕಾಲುವೆಗಳಲ್ಲಿ ನೀರು ತುಂಬದಿದ್ದರೆ ಹಾಳಾಗುವ ಸಾಧ್ಯತೆಗಳೇ ಹೆಚ್ಚು ಎಂಬುದಾಗಿ ಆತಂಕ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5300 ಕೋಟಿ ರೂ ನೀಡುವುದಾಗಿ 2022-23 ರ ಬಜೆಟ್ ನಲ್ಲಿ ಘೋಷಿಸಿತ್ತು. ಘೋಷಿತ ಮೊತ್ತ ಬಿಡುಗಡೆಗೆ ರಾಜ್ಯ ಸರ್ಕಾರ ಪದೇ ಪದೇ ದೆಹಲಿಗೆ ಹೋಗಿ ಪ್ರಧಾನಿ ಹಾಗೂ ಜಲಶಕ್ತಿ ಸಚಿವರ ಭೇಟಿ ಮಾಡಿ ಪ್ರಯತ್ನಿಸುತ್ತಿರುವುದು ಬಯಲು ಸೀಮೆ ರೈತರ ಗಮನದಲ್ಲಿದೆ. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಮರೆಯಬಾರದು.ತನ್ನ ಪಾಲಿನ ಬದ್ದತೆ ಮೆರೆಯಲೇ ಬೇಕಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿದ್ದಲ್ಲ.
ರಾಷ್ಟ್ರೀಯ ಯೋಜನೆ ಘೋಷಣೆ ಪ್ರಸ್ತಾಪ ರಾಜ್ಯ ಸರ್ಕಾರವೇ ಕೇಂದ್ರದ ಮುಂದೆ ಮಂಡಿಸಿ ಶೇ.90-10 ಅನುಪಾತದಲ್ಲಿ ಅನುದಾನ ಕೋರಿತ್ತು. ಅಂತಿಮವಾಗಿ ಅದು ಶೇ.60-40 ರ ಅನುಪಾತಕ್ಕೆ ಇಳಿಸಿ ಕೃಷಿ ಸಂಚಾಯಿನಿ ಯೋಜನೆಯಡಿ 5300 ಕೋಟಿ ರೂ ಕೊಡುವುದಾಗಿ ಕೇಂದ್ರ ಸರ್ಕಾರ ತನ್ನ ಬಜೆಟ್ ಘೋಷಣೆ ಮಾಡಿ ಅನುದಾನ ಬಿಡುಗಡೆಗಾಗಿ ಇದೀಗ ಸತಾಯಿಸುತ್ತಿದೆ.
ಕೇಂದ್ರದ ಈ ಪ್ರವೃತ್ತಿ ಒಕ್ಕೂಟ ವ್ಯವಸ್ಥೆ ಮಾರಕವಾಗಿದೆ. ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಈಗಾಗಲೇ ಜಲಶಕ್ತಿ ರಾಜ್ಯ ಸಚಿವ ಹಾಗೂ ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿ ಜಿಲ್ಲೆ ಪ್ರತಿನಿಧಿಸುವ ವಿ.ಸೋಮಣ್ಣ ಅವರಿಗೂ ಮನವಿ ಮಾಡಿದೆ. ಕಳೆದ ಗಾಂಧಿ ಜಯಂತಿಯಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ವಿ.ಸೋಮಣ್ಣ 45 ದಿನದ ಒಳಗಾಗಿ ಮೊದಲೇ ಕಂತು ಬಿಡುಗಡೆ ಮಾಡಿಸುವುದಾಗಿ ಹೇಳಿ ಹೋದವರು ಮತ್ತೆ ಹಿಂತಿರುಗಿ ನೋಡಿಲ್ಲ.
ಭದ್ರಾ ಮೇಲ್ದಂಡೆ ಯೋಜನೆ ಪದೇ ಪದೇ ವಂಚನೆ, ದ್ರೋಹಕ್ಕೆ ಒಳಗಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಇದೇ ಹಾದಿ ಹಿಡಿಯಬಾರದೆಂಬುದು ನಮ್ಮ ಆಗ್ರಹವಾಗಿದ್ದು, ಕಾವೇರಿ ಕೊಳ್ಳದ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ತೋರುವ ಆಸಕ್ತಿ ಇತರೆ ಯೋಜನೆಗಳ ಮೇಲಿಲ್ಲ. ಕಾವೇರಿಗೆ ಅನ್ಯಾಯವಾದಲ್ಲಿ ಅದು ರಾಜ್ಯವ್ಯಾಪಿ ಸಮಸ್ಯೆ ಎಂಬಂತೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ.
ಆದರೆ ಭದ್ರಾ ಮೇಲ್ದಂಡೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾಗಿ ಹತ್ತು ವರ್ಷ ಗಳ ನಂತರ ಕೈಗೆತ್ತಿಕೊಳ್ಳಲಾದ ಎತ್ತಿನ ಹೊಳೆ ಯೋಜನೆಗೆ 16 ಸಾವಿರ ಕೋಟಿ ರೂ ನೀಡಿ ಭದ್ರಾಗಿಂತ ಹೆಚ್ಚಿನ ಅನುದಾನ ನೀಡಲಾಗಿದೆ. ಭದ್ರಾಗೆ ಹತ್ತು ಸಾವಿರ ಕೋಟಿ ರೂ ವ್ಯಯ ಮಾಡಲಾಗಿದೆ. ಈ ತಾರತಮ್ಯವ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ.
ಮಾರ್ಚ್ ತಿಂಗಳಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆಗೆ ಕನಿಷ್ಟ ಐದು ಸಾವಿರ ಕೋಟಿ ರೂಪಾಯಿ ಅನುದಾನ ಕಾಯ್ದಿರಿಸುವ ಮೂಲಕ ಕಾಮಗಾರಿಗೆ ಚುರುಕಿನ ವೇಗ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸುತ್ತೇವೆ. ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿಗಳ ಮುಂದೆ ಹಠ ಹಿಡಿದು ಕುಳಿತು ಐದು ಸಾವಿರ ಕೋಟಿರೂ ಅನುದಾನ ಘೋಷಣೆ ಮಾಡಿಸುವುದರ ಮೂಲಕ ನೆಲದ ಋಣ ತೀರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತಮುಖಂಡರುಗಳಾದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಸಂಚಾಲಕರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಾಂಮ್ರೇಡ್ ಸುರೇಶ್ ಬಾಬು, ಬಿ.ಜಿ.ಶೇಖರ್ ಹೊಳಲ್ಕೆರೆ, ರೈತಮುಖಂಡರುಗಳಾದ ಕೆ.ಪಿ.ಭೂತಯ್ಯ ಚಳ್ಳಕೆರೆ, ಕೆ.ಸಿ.ಹೊರಕೇರಪ್ಪಹಿರಿಯೂರು, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ್ ಹಂಪಯ್ಯನ ಮಾಳಿಗೆ, ಯಾದವ ರೆಡ್ಡಿ, ಮಲ್ಲಾಪುರ ತಿಪ್ಪೇಸ್ವಾಮಿ, ಚೇತನ್ ಯಳನಾಡು, ಬೋಚಾಪುರ ರಮೇಶ್, ಬುರುಜುನರೊಪ್ಪ ತಿಪ್ಪೇಸ್ವಾಮಿ, ದಸ್ತಗೀರ್ ಸಾಬ್, ಗೌಸ್ ಪೀರ್, ಶ್ರೀಮತಿ ನಿತ್ಯಶ್ರೀ, ಶ್ರೀಮತಿ ಸುಧಾ, ಶ್ರೀಮತಿ ಲಕ್ಷ್ಮೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.