September 15, 2025
1740406464382.jpg

.



ಚಿತ್ರದುರ್ಗಫೆ.24:
ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳು ಪಾಲ್ಗೊಂಡು, ಜಿಲ್ಲೆಯ ಬಹಳಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಸೂಚನೆ ನೀಡಿದರು.
ಬೃಹತ್ ಉದ್ಯೋಗ ಮೇಳ ಆಯೋಜನೆ ಸಂಬಂಧ ಜಿಲ್ಲಾ ಪಂಚಾಯತಿಯ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ. 01 ರಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿಗಳು ಪೂರ್ವಸಿದ್ಧತಾ ಸಭೆ ಕೈಗೊಂಡು, ಸಲಹೆ ಸೂಚನೆಗಳನ್ನು ನೀಡಿದ್ದಾರೆ, ಅಲ್ಲದೆ ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ಒಟ್ಟು 07 ಉಪಸಮಿತಿಗಳನ್ನು ಕೂಡ ರಚಿಸಿದ್ದಾರೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರ ಸಂಖ್ಯೆ ಬಹಳಷ್ಟಿದ್ದು, ಇಂತಹವರಿಗೆ ಉದ್ಯೋಗ ದೊರಕಿಸಿಕೊಟ್ಟಲ್ಲಿ, ಅವರು ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ತಮ್ಮ ಕೊಡುಗೆ ನೀಡುತ್ತಾರೆ. ಹೀಗಾಗಿ ಉದ್ಯೋಗ ಮೇಳ ಆಯೋಜನೆ ಬಗ್ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಆಸಕ್ತಿ ವಹಿಸಿ, ಉದ್ಯೋಗ ಮೇಳವನ್ನು ಯಶಸ್ವಿಯಾಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಉದ್ಯೋಗ ಮೇಳ ಆಯೋಜನೆ ಕುರಿತಂತೆ ಹೆಚ್ಚಿನ ಪ್ರಚಾರ ನೀಡುವಂತೆ ಸೂಚನೆ ನೀಡಿದ ಅವರು, ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಆಯೋಜನೆ ಕುರಿತಂತೆ ಫ್ಲೆಕ್ಸ್ ಬೋರ್ಡ್ ಅಳವಡಿಸಿ ಪ್ರಚಾರ ನೀಡಬೇಕು. ಗ್ರಾಮ ಪಂಚಾಯತಿಗಳು, ನಗರ, ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ವಾಹನದಲ್ಲಿನ ಧ್ವನಿವರ್ಧಕಗಳ ಮೂಲಕ ಜಿಂಗಲ್ಸ್‍ಗಳನ್ನು ಹಾಕಿ ಪ್ರಚುರಪಡಿಸಬೇಕು, ಕಾಲೇಜುಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳೊಂದಿಗಿನ ವಾಟ್ಸಾಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಈಗಾಗಲೆ ಸುಮಾರು 35 ಕ್ಕೂ ಹೆಚ್ಚು ಉತ್ತಮ ಕಂಪನಿಗಳು ಆಸಕ್ತಿ ವಹಿಸಿ, ತಮ್ಮ ಸಹಮತಿ ವ್ಯಕ್ತಪಡಿಸಿವೆ. ಇನ್ನೂ ಹೆಚ್ಚಿನ ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುವಂತಾಗಲು ಕೈಗಾರಿಕಾ ಇಲಾಖೆ, ಜಿಟಿಟಿಸಿ, ಕೌಶಲ್ಯಾಭಿವೃದ್ದಿ ಇಲಾಖೆಗಳು ಹೆಚ್ಚು ಹೆಚ್ಚು ಕಂಪನಿಗಳನ್ನು ಸಂಪರ್ಕಿಸಿ, ಅವರನ್ನು ಮೇಳಕ್ಕೆ ಆಹ್ವಾನಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಪದವಿಧರರು, ಡಿಪ್ಲೋಮಾ ವ್ಯಾಸಂಗ ಮಾಡಿರುವ ಸುಮಾರು 4300 ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದು, ಈ ಎಲ್ಲ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವಂತೆ ಉದ್ಯೋಗಾಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ದಿ ಅಧಿಕಾರಿಗಳು, ಅಭ್ಯರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯ ಕೈಗೊಳ್ಳಬೇಕು ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸಂಪರ್ಕಿಸಿ, ಖಾಲಿ ಇರುವ ಹುದ್ದೆಗಳ ಸಂಖ್ಯೆ, ಅರ್ಹತಾ ಮಾನದಂಡಗಳ ವಿವರಣೆ ಪಡೆದು, ಇದಕ್ಕನುಗುಣವಾಗಿ ಮಾಹಿತಿಯನ್ನು ಪ್ರಚುರಪಸಬೇಕು, ಪದವಿ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಕಾಲೇಜುಗಳ ಮುಖ್ಯಸ್ಥರು, ಪ್ಲೇಸ್‍ಮೆಂಟ್ ಆಫೀಸರ್‍ಗಳ ಮೂಲಕ ಎಲ್ಲ ಅರ್ಹ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೊಂದಣಿಗಾಗಿ ಗೂಗಲ್ ಫಾರಂ ಸಿದ್ಧಪಡಿಸಿ, ಸರಳವಾಗಿ ಜಿಲ್ಲೆಯ ಅಧಿಕೃತ ವೈಬ್‍ಸೈಟ್ ಅಥವಾ ಇಲಾಖಾ ವೆಬ್‍ಸೈಟ್ ಮೂಲಕ ನೊಂದಣಿ ಹಾಗೂ ಪ್ರಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಉದ್ಯೋಗ ಮೇಳದಲ್ಲಿ ಉದ್ಯೋಗದಾತರಾಗಿ ಆಗಮಿಸುವ ಕಂಪನಿಗಳಿಗೆ ಹಾಗೂ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸೂಕ್ತ ರೀತಿಯಲ್ಲಿ ಮಳಿಗೆ, ನೆರಳಿಗೆ ಸಾಕಷ್ಟು ಶಾಮಿಯಾನ ಹಾಗೂ ವೇದಿಕೆ ನಿರ್ಮಿಸಿಕೊಡಬೇಕು. ಕುಡಿಯುವ ನೀರಿನ ಪೂರೈಕೆ ಸೂಕ್ತ ರೀತಿ ಇರಬೇಕು. ಸಾಕಷ್ಟು ನೊಂದಣಿ ಕೌಂಟರ್‍ಗಳನ್ನು ಸ್ಥಾಪಿಸಿ, ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಗೊಂದಲಕ್ಕೆ ಅವಕಾಶ ಇಲ್ಲದಂತೆ, ಮಾಹಿತಿ ನೀಡಲು ಸೂಕ್ತ ಸಹಾಯಕೇಂದ್ರ ಸ್ಥಾಪಿಸಬೇಕು. ವೇದಿಕೆ ಬಳಿ ಮುಂಜಾಗ್ರತಾ ಕ್ರಮವಾಗಿ ಸುಸಜ್ಜಿತ ಆಂಬುಲೆನ್ಸ್, ವೈದ್ಯರ ನಿಯೋಜನೆ, ಅಗ್ನಿಶಾಮಕ ವಾಹನದ ನಿಯೋಜನೆ ಆಗಬೇಕು. ಉದ್ಯೋಗ ಮೇಳ ಜರುಗುವ ಮೈದಾನದಲ್ಲಿ ಸೂಕ್ತ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಿಇಒ ಸೋಮಶೇಖರ್ ಸೂಚನೆ ನೀಡಿದರು.
ಉದ್ಯೋಗಮೇಳದ ಸಂಪೂರ್ಣ ಮೇಲುಸ್ತುವಾರಿ ಹೊಣೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಅವರಿಗೆ ವಹಿಸಿ ಜಿಲ್ಲಾಧಿಕಾರಿಗಳು ಈಗಾಗಲೆ ಆದೇಶ ಹೊರಡಿಸಿದ್ದು, ಇವರು ವಿವಿಧ ಉಪಸಮಿತಿಗಳೊಂದಿಗೆ ಸಮನ್ವಯ ಮಾಡಿಕೊಂಡು, ಯಾವುದೇ ಗೊಂದಲಗಳಿಲ್ಲದೆ, ಉದ್ಯೋಗಮೇಳವನ್ನು ಸುಗಮವಾಗಿ ನಡೆಸಲು ಮುಂದಾಗಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಡಿವೈಎಸ್‍ಪಿ ದಿನಕರ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ವೇಮಣ್ಣ, ಆಹಾರ ಇಲಾಖೆ ಜಂಟಿನಿರ್ದೇಶಕ ಮಧುಸೂಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading